ಮಾಂಸ ಸೇವಿಸಿ ದೇಗುಲ ಪ್ರವೇಶ: ಮತ್ತೊಮ್ಮೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ!

  ಡಿಜಿಟಲ್ ಕನ್ನಡ ಟೀಮ್:

  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಲ್ಲಿ ನಾಟಿಕೋಳಿ, ಮೀನು ತಿಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇಗುಲಕ್ಕೆ ಹೋದದ್ದು, ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಉಪವಾಸವಿದ್ದು, ಪಂಚೆ ಶಲ್ಯಾಧಾರಿಯಾಗಿ ದರ್ಶನ ಪಡೆದದ್ದು ಸಾಮಾಜಿಕ ಜಾಲತಾಣಗಳಲ್ಲಿ ‘ಹೋಲಿಕೆ ಚರ್ಚೆ’ ಹುಟ್ಟುಹಾಕಿರುವ ಬೆನ್ನಲ್ಲೇ ಸಿದ್ದರಾಮಯ್ಯನವರು ತಮ್ಮ ನಡೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

  ‘ಮಾಂಸ ಸೇವನೆ ಮಾಡಿದ ನಂತರ ಅದು ಜೀರ್ಣವಾಗಲು 48 ಗಂಟೆಗಳಾದರೂ ಬೇಕು. ಪೂರ್ತಿ ಕರಗಲು ಕನಿಷ್ಟ ಎರಡು ದಿನವಾದರೂ ಬೇಕು. ಅಲ್ಲಿಯವರೆಗೂ ಹಳೇ ಸ್ವರೂಪದಲ್ಲೇ ಹೊಟ್ಟೆಯಲ್ಲಿರುತ್ತದೆ. ಹಾಗಂಥ ಮಾಂಸ ತಿಂದ ಮರುದಿನ ಯಾರೂ ದೇವಾಲಯಕ್ಕೆ ಹೋಗದೆ ಇರುತ್ತಾರೆಯೇ? ಹಾಗೆ ತಿಂದು ಹೋದದ್ದು ಯಾರಿಗಾದರೂ ಗೊತ್ತಾಗುತ್ತದೆಯೇ? ದೇವರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದವರು, ಅವನ ವಿಸ್ತಾರದ ಬಗ್ಗೆ ಅರಿವಿಲ್ಲದವರು ಸುಮ್ಮಸುಮ್ಮನೆ ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ದೇವರು ಎಲ್ಲ ಕಡೆ ಇದ್ದಾನೆ. ಅವನು ಇಲ್ಲದ ಜಾಗವಿಲ್ಲ ಅನ್ನುವಾಗ ನೀವು ಎಲ್ಲಿ ಕೂತುಕೊಂಡು ಮಾಂಸ ತಿಂದರೂ ಅದು ದೇವರು ಇರುವ ಜಾಗವೇ ಆಗುತ್ತದೆ. ವಿವಾದ ಸೃಷ್ಟಿ ಮಾಡುತ್ತಿರುವವರಿಗೆ ಮಾಡಲು ಬೇರೆ ಕೆಲಸವಿಲ್ಲ’ ಎಂದು ಚಿಕ್ಕಬಳ್ಳಾಪುರ ಮಂಚನಬೆಲೆ ಬೀರೇಶ್ವರ ದೇಗುಲ ಉದ್ಘಾಟನೆ ನೆರವೇರಿಸಿ ಟೀಕಾಕಾರರಿಗೆ ಸೋಮವಾರ ಚುಚ್ಚಿದರು.

  ‘ಜನರನ್ನು ತಪ್ಪು ದಾರಿಗೆ ಎಳೆಯುವವರು, ದೇವಾಸ್ಥಾನಕ್ಕೆ ಹೋಗಿ ಪೂಜೆ-ಪುನಸ್ಕಾರ ಮಾಡಿದರೂ ದೇವರು ಅದನ್ನು ಒಪ್ಪಲ್ಲ. ಮನುಷ್ಯತ್ವ ಇರುವವರೇ ನಿಜವಾದ ದೇವರು. ಅದಿಲ್ಲದವರು ಏನೇ ಮಾಡಿದರೂ ಫಲ ಕೊಡಲ್ಲ. ವಾಸ್ತವವಾಗಿ ನಾನು ಮಂಜುನಾಥೇಶ್ವರ ದೇಗುಲಕ್ಕೆ ಹೋಗುವ ಕಾರ್ಯಕ್ರಮ ಇರಲಿಲ್ಲ. ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರು ದೇವರ ದರ್ಶನ ಪಡೆಯಿರಿ ಎಂದರು. ಸಮಯ ಇಲ್ಲ ಅಂದರೂ ಬಿಡಲಿಲ್ಲ. ಹಿಂಗಾಗಿ ಹೋದೆ. ಆದರೆ ಗರ್ಭಗುಡಿ ಪ್ರವೇಶಿಸಲಿಲ್ಲ. ಹೊರಗೇ ನಿಂತು ಕೈಮುಗಿದೆ. ಅಕಸ್ಮಾತ್ ಗರ್ಭಗುಡಿಗೆ ಹೋಗಿದ್ದರೂ ತಾನೇ ಏನು ತಪ್ಪಾಗುತ್ತಿತ್ತು? ಬೇಡರ ಕಣ್ಣಪ್ಪ ದೇವರಿಗೆ ಜಿಂಕೆ ಮಾಂಸ ನೈವೇದ್ಯ ಅರ್ಪಿಸಲಿಲ್ವಾ? ದೇವರು ಅದನ್ನು ಬೇಡ ಅಂದ್ನಾ? ಹಿಂಗಿರುವಾಗ ನಾನು ಮಾಡಿದ್ರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದರು.

  ‘ರಾಜಕುಮಾರ್ ಅಭಿಮಾನಿಗಳನ್ನೇ ದೇವರು ಅಂದರು. ನನಗೆ ವೋಟು ಹಾಕಿ ಅಧಿಕಾರಕ್ಕೆ ತಂದಿರೋ ನೀವು ನನ್ನ ನಿಜವಾದ ದೇವರು. ಜನಸೇವೆಯೇ ಜನಾರ್ಧನ ಸೇವೆ. ನಿಮ್ಮ ಸೇವೆಯಲ್ಲೇ ದೇವರನ್ನು ಕಾಣ್ತೀನಿ’ ಅಂತಂದಾಗ ಜನರ ಚಪ್ಪಾಳೆ ಮುಗಿಲು ಮುಟ್ಟಿತ್ತು!

  1 COMMENT

  Leave a Reply