ಚಬಹರ್ ಬಂದರಿಗೆ ಹೊರಟಿತು ಭಾರತದ ಮೊದಲ ಹಡಗು! ಪಾಕ್ ಕುತಂತ್ರಕ್ಕೆ ಭಾರತ ಕೊಟ್ಟ ಏಟು ಹೇಗಿದೆ ಗೊತ್ತಾ?

ಚಬಹರ್ ಬಂದರು ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ ವೇಳೆ ಪ್ರಧಾನಿ ನರೇಂದ್ರ ಮೋದಿ, ಇರಾನ್ ಹಸನ್ ರೌಹಾನಿ ಹಾಗೂ ಅಪ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ.

ಡಿಜಿಟಲ್ ಕನ್ನಡ ವಿಶೇಷ:

ಅಂತಾರಾಷ್ಟ್ರೀಯ ರಾಜಕೀಯವೇ ಹಾಗೆ ಚದುರಂಗದ ಆಟದಂತೆ. ಒಂದು ದೇಶ ಮತ್ತೊಂದು ದೇಶದೊಂದಿಗೆ ಬೆಳೆಸಿದ ಸ್ನೇಹ ಮಗದೊಂದು ದೇಶಕ್ಕೆ ಚೆಕ್ ಮೇಟ್ ಆಗಿರುತ್ತದೆ. ಈಗ ಭಾರತ ಸಹ ಇರಾನ್ ಹಾಗೂ ಅಫ್ಘಾನಿಸ್ತಾನದ ಜತೆ ಕೈಜೋಡಿಸಿ ಪಾಕಿಸ್ತಾನ ಹಾಗೂ ಚೀನಾಕ್ಕೆ ಶಾಕ್ ಕೊಡುತ್ತಿದೆ.

2016ರಲ್ಲಿ ಭಾರತ- ಇರಾನ್- ಅಫ್ಘಾನಿಸ್ತಾನ ತ್ರಿಕೋನ ಒಪ್ಪಂದ ಮೂಲಕ ಚಬಹರ್ ಬಂದರಿನ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ತನ್ನ ವ್ಯಾಪಾರ ಮಾರ್ಗ ಕಂಡುಕೊಳ್ಳು ಭಾರತ ನಿರ್ಧರಿಸಿತು. ಭಾರತದ ಈ ಪ್ರಯತ್ನ ಈಗ ಯಶಸ್ವಿಯಾಗಿದ್ದು, ಭಾನುವಾರ ಮೂರು ದೇಶಗಳ ವಿದೇಶಾಂಗ ಸಚಿವರುಗಳಾದ ಸುಷ್ಮಾ ಸ್ವರಾಜ್, ಸಲ್ಲಾಹುದ್ದೀನ್ ರಬ್ಬಾನಿ (ಅಫ್ಘಾನಿಸ್ತಾನ), ಜಾದವ್ ಜಾರಿಫ್ (ಇರಾನ್) ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಬಹರ್ ಬಂದರಿನತ್ತ ಹೊರಟ ಮೊದಲ ಭಾರತದ ಹಡಗಿಗೆ ಚಾಲನೆ ನೀಡಿದರು. ಭಾರತ ಈ ಚಾಣಕ್ಷ ನಡೆ ಚೀನಾ ಹಾಗೂ ಪಾಕಿಸ್ತಾನ ತಲೆ ಕೆಡಿಸಿಕೊಂಡಿವೆ. ಭಾರತದ ಹಡಗು ಇರಾನಿನ ಚಬಹರ್ ಬಂದರಿನತ್ತ ಹೊರಟಿದ್ದಕ್ಕೂ, ಚೀನಾ ಹಾಗೂ ಪಾಕಿಸ್ತಾನ ತಲೆ ಕೆಡಲು ಏನು ಸಂಬಂಧ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ…

ಅಫ್ಘಾನಿಸ್ತಾನ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ಭಾರತ ವ್ಯಾಪಾರ ನಡೆಸಲು ಭೌಗೊಳಿಕವಾಗಿ ಪಾಕಿಸ್ತಾನದ ಮೂಲಕವೇ ಹಾದು ಹೋಗಬೇಕಿತ್ತು. ಆದರೆ ಪಾಕಿಸ್ತಾನ ಈ ಮಾರ್ಗವಾಗಿ ಭಾರತ ತನ್ನ ವ್ಯಾಪಾರ ನಡೆಸಲು ಅವಕಾಶ ನೀಡದೇ ಅಡ್ಡಗಾಲು ಹಾಕಿತು. ಅಷ್ಟು ಸಾಲದು ಎಂದು ತನ್ನ ಗ್ವಾದರ್ ಬಂದರನ್ನು ಅಭಿವೃದ್ಧಿ ಹೆಸರಿನಲ್ಲಿ ಚೀನಾ ಕೈಗೆ ನೀಡಿ, ಅರಬ್ಬಿ ಸಮುದ್ರದ ಮಾರ್ಗವಾಗಿ ಚೀನಾದ ಸಮುದ್ರ ಮಾರ್ಗ ಬಲಗೊಳ್ಳಲು ನೆರವಾಯಿತು. ಪಾಕಿಸ್ತಾನದ ಈ ಎರಡು ನಿರ್ಧಾರಗಳ ಹಿಂದೆ, ಮಧ್ಯಪ್ರಾಚ್ಯ ವ್ಯಾಪಾರ ಕ್ಷೇತ್ರದಲ್ಲಿ ಭಾರತವನ್ನು ಹಿಂದಿಕ್ಕುವ ಕುತಂತ್ರ ಅಡಗಿತ್ತು.

ಈ ಎರಡು ರಾಷ್ಟ್ರಗಳ ಕುತಂತ್ರಕ್ಕೆ ಪ್ರತಿಯಾಗಿ ಭಾರತ ಜಾಣ ಹೆಜ್ಜೆ ಇಟ್ಟಿದ್ದು, ಇರಾನಿನ ಚಬಹರ್ ಬಂದರು ಅಭಿವೃದ್ಧಿ ಮಾಡಿಕೊಂಡು ಸಮುದ್ರ ಮಾರ್ಗವಾಗಿ ಮಧ್ಯಪ್ರಾಚ್ಯವನ್ನು ತಲುಪುವ ದಾರಿ ಕಂಡುಕೊಂಡಿದೆ (ಈ ಬಗ್ಗೆ ಡಿಜಿಟಲ್ ಕನ್ನಡದಲ್ಲಿ ಪ್ರಕಟವಾದ ವಿಶ್ಲೇಷಣಾತ್ಮಕ ವರದಿ ಇಲ್ಲಿದೆ).

ಭಾರತದಿಂದ ಅಫ್ಘಾನಿಸ್ತಾನಕ್ಕೆ ರವಾನೆಯಾಗಬೇಕಿದ್ದ ಗೋಧಿಯನ್ನು ಹೊತ್ತ ಹಡಗು ಭಾನುವಾರ ಚಬಹರ್ ಬಂದರಿನ ಕಡೆಗೆ ಮೊದಲ ಬಾರಿಗೆ ಪಯಣ ಆರಂಭಿಸಿದ್ದು, ಆ ಮೂಲಕ ಭಾರತ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆಗಿನ ವ್ಯಾಪಾರಕ್ಕೆ ಹೊಸ ಮಾರ್ಗ ಸಿಕ್ಕಂತಾಗಿದೆ. ಭಾರತದ ಈ ಏಟಿಗೆ ಚೀನಾ ಹಾಗೂ ಪಾಕಿಸ್ತಾನ ಏದುಸಿರು ಬಿಡುವಂತಾಗಿದೆ.

ಅಂದಹಾಗೆ ಭಾರತ 500 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಖರ್ಚು ಮಾಡಿ ಚಬಹರ್ ಬಂದರು ಅಭಿವೃದ್ಧಿಗೆ ಮುಂದಾಗಿದ್ದು, ಇದು 2018ರ ವೇಳೆಗೆ ಪೂರ್ಣಗೊಳ್ಳಲಿದೆ. ಇನ್ನು ಈ ಮೂರು ದೇಶಗಳ ಒಪ್ಪಂದದ ಪ್ರಕಾರ ಭಾರತ ಪ್ರತಿ ವರ್ಷ ಅಫ್ಘಾನಿಸ್ತಾನಕ್ಕೆ 1.1 ಮಿಲಿಯನ್ (11 ಲಕ್ಷ) ಟನ್ ಗೋಧಿಯನ್ನು ಪೂರೈಸಲಿದೆ. ಇದರೊಂದಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಜತೆ ವ್ಯಾಪಾರ ನಡೆಸಲು ಭಾರತ ತನ್ನ ಹಂಗು ಪಡೆಯಲೇಬೇಕು ಎಂಬ ದುರಹಂಕಾರದಲ್ಲಿದ್ದ ಪಾಕಿಸ್ತಾನ ಈಗ ಕೈ ಕೈ ಹಿಸುಕಿಕೊಳ್ಳುತ್ತಿದೆ.

Leave a Reply