ಬಿಜೆಪಿ ನಾಯಕರ ನಿದ್ದೆಗೆಡಿಸಿರುವ ಅನಂತಕುಮಾರ ಹೆಗಡೆ!

ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಕೈ ಮುಗಿಯುತ್ತಿದ್ದರೆ ಇತ್ತ ವಿಜಯಪುರದಲ್ಲಿ ರಾಜ್ಯ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮತ್ರಿ ಕೆ.ಎಸ್. ಈಶ್ವರಪ್ಪ ಅವರು ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಂದಿನ ಸಿಎಂ ಅಭ್ಯರ್ಥಿ ಅಲ್ಲ’ ಎಂದು ಹಲುಬುತ್ತಿದ್ದರು. ಎಲ್ಲರ ಕಲ್ಪನೆಗಳನ್ನು ವಿಕಲ್ಪಗೊಳಿಸಿ ಕೇಂದ್ರ ಸಚಿವ ಸಂಪುಟ ಸೇರಿದ ಹೆಗಡೆ ಅದ್ಯಾವ ಪರಿ ರಾಜ್ಯ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದಾರೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ ಅಷ್ಟೇ.

ನಿಜ, ಯಾರ್ಯಾರ ಅದೃಷ್ಟ ಎಲ್ಲೆಲ್ಲಿ ಅಡಗಿ ಕುಳಿತ್ತಿರುತ್ತದೋ ಗೊತ್ತಿಲ್ಲ. ಮುಂಚೂಣಿಯಲ್ಲಿದ್ದವರು ನಾಪತ್ತೆ ಆಗಿ ಹೋಗುತ್ತಾರೆ. ಅಲ್ಲೆಲ್ಲೋ ಮೂಲೇಲಿ ತಮ್ಮ ಪಾಡಿಗೆ ತಾವಿದ್ದವರು ತಲೆಬಾಗಿಲಿಗೆ ಬಂದು ಘಟಾನುಘಟಿಗಳನ್ನು ಪಕ್ಕಕ್ಕೆ ಸರಿಸಿ ಮುಂದಕ್ಕೆ ಹೋಗಿರುತ್ತಾರೆ. ಅವರು ಯಾಕೆ ಹೋದರು, ಹೇಗೆ ಹೋದರು ಎನ್ನುವುದು ಅರಿವಾಗುವ ಹೊತ್ತಿಗೆ ರಾಜಕೀಯ ತನ್ನ ಮಗ್ಗಲು ಬದಲಿಸಿ ಕೆಳಗೆ ಬಿದ್ದವರನ್ನು ಅಣಕಿಸುತ್ತಿರುತ್ತದೆ. ಮುಂದೆ ಹೋದವನ ನೆರಳಿನಲ್ಲಿ ತಮ್ಮ ತಪ್ಪುಗಳನ್ನು ಹುಡುಕುತ್ತಿರುತ್ತದೆ. ಆ ಹುಡುಕಾಟ ಮುಗಿಯುವಷ್ಟರಲ್ಲಿ ಕಾಲ ಬೀಡುಬೀಸಾಗಿ ಹೆಜ್ಜೆ ಹಾಕಿರುತ್ತದೆ.

ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಕೇಂದ್ರ ಸಂಪುಟ ಸೇರಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದ ಫೈರ್‌ಬ್ರಾಂಡ್ ನಾಯಕ ಅನಂತಕುಮಾರ ದತ್ತಾತ್ರೇಯ ಹೆಗಡೆ ಅವರು ಇದೀಗ ಇಂಥದ್ದೊಂದು ಪೀಠಿಕೆ ಮೇಲೆ ಪೀಠ ಹಾಸಿಕೊಂಡು ಕೂತಿದ್ದಾರೆ. ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಅವರು ಮುಖ್ಯಮಂತ್ರಿ ಆಗುತ್ತಾರೋ, ಬಿಡುತ್ತಾರೋ ಅದೂ ಗೊತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ರಾಜ್ಯ ಬಿಜೆಪಿ ನಾಯಕರ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರು ಸದ್ದಿಲ್ಲದೆ ಬಂದು ಕೂತಿರುವುದಂತೂ ಎಲ್ಲರ ಬಾಯ್ಪಸೆ ಆರಿಸಿದೆ. ಅನೇಕ ನಾಯಕರ ಗಂಟಲು ಉಬ್ಬುವಂತೆ ಮಾಡಿದೆ. ಅವರು ಕೇಂದ್ರ ಸಚಿವರಾದ ಶೈಲಿಯೇ ರಾಜಕಾರಣದಲ್ಲಿ ಏನೂ ಬೇಕಾದರೂ ನಡೆಯಬಹುದೆಂಬುದರ ಸ್ಪಷ್ಟ ಕುರುಹು. ಅದನ್ನು ಅರಗಿಸಿಕೊಳ್ಳಲು ಒದ್ದಾಡುತ್ತಿರುವ ನಾಯಕರು ಇದೀಗ ಧುತ್ತೆಂದು ಎಲ್ಲೆಲ್ಲೋ ಹಾರಾಡುತ್ತಿರುವ ಅವರ ಹೆಸರು ಹಿಡಿದಿಡಲಾಗದೆ ವಿಲವಿಲ ಒದ್ದಾಡುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಮಾಡಿಟ್ಟ ಬಿಜೆಪಿ ವರಿಷ್ಠರು ಯಾವಾಗ ಯಾವ ದಾಳ ಬೇಕಾದರೂ ಉರುಳಿಸಬಹುದು ಎಂಬ ಅನಿರೀಕ್ಷತೆಯುಕ್ತ ಪ್ರಶ್ನೆ ಅವರನ್ನು ಆತಂಕ, ಆಶ್ಚರ್ಯದಲ್ಲಿ ಮುಳುಗಿಸಿಟ್ಟಿದೆ. ಕೈಗೆ ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗದೆ ಮೂವರು ಮುಖ್ಯಮಂತ್ರಿಗಳ ಜತೆಗೆ ಆಡಳಿತ ಸಮಾಪ್ತಿ ಮಾಡಿಕೊಂಡ ಬಿಜೆಪಿ ಸರಕಾರಕ್ಕೆ 2013 ರಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ತನ್ನ ಹಳೇ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇವತ್ತಿಗೂ ಸಾಧ್ಯವಾಗದೇ ಇನ್ನಿಲ್ಲದಂತೆ ಹೆಣಗುತ್ತಿದೆ. ಕರ್ನಾಟಕ ಜನತಾ ಪಾರ್ಟಿ ವಿಲೀನದೊಂದಿಗೆ ರಾಜ್ಯ ಬಿಜೆಪಿಗೆ ಮತ್ತೆ ಅಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಬಹುತೇಕ ನಾಯಕರು ಹಿಂದಿನಂತೆ ನಿರ್ಮಲ ಮನಸ್ಸಿನಿಂದ ಒಪ್ಪಿಕೊಂಡಿಲ್ಲ. ಅವರ ಬಿಜೆಪಿ ಮರು ಅಪ್ಪುಗೆಯಲ್ಲಿ ವಿಜೃಂಭಿಸಿದ್ದು ಒಗ್ಗಟ್ಟಿನ ಬದಲು ಆಂತರಿಕ ಕಲಹ, ಪರಸ್ಪರ ಕಾಲೆಳೆವ ಪರಿಪಾಠ. ಈ ಯುದ್ಧ ಆಂತರ್ಯದಲ್ಲಾಗಿದ್ದರೆ ಪರವಾಗಿರಲಿಲ್ಲ, ಹಾದಿಬೀದಿ ರಂಪವಾಗಿ ಸಾರ್ವಜನಿಕರ ಮನರಂಜನೆ ವಸ್ತುವಾಗಿ ಪರಿಣಮಿಸಿದೆ. ನಿವಾರಣೆ ಪ್ರಯತ್ನ ನಡೆದಷ್ಟೂ ವ್ರಣವಾಗಿದೆ.

ಯಡಿಯೂರಪ್ಪ ವಿರೋಧಿ ಹಲವು ನಾಯಕರ ಪ್ರೇರಣೆಯಿಂದ ಅಸ್ತಿತ್ವಕ್ಕೆ ಬಂದ ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್ ವೈಯಕ್ತಿಕವಾಗಿ ಈಶ್ವರಪ್ಪ ಅವರಿಗಾಗಲಿ, ಅವರನ್ನು ಬೆಂಬಲಿಸಿದ ನಾಯಕರಿಗಾಗಲಿ ಅಥವಾ ಒಟ್ಟಾರೆ ಬಿಜೆಪಿಗಾಗಲಿ ಯಾವುದೇ ಲಾಭ ತಂದುಕೊಡಲಿಲ್ಲ. ಬದಲಿಗೆ ಎಲ್ಲರನ್ನೂ ಒಟ್ಟೊಟ್ಟಿಗೆ ಮತ್ತಷ್ಟು ಪಾತಾಳಕ್ಕೆ ಸೆಳೆದೊಯ್ದಿತು. ಇದರ ಮಧ್ಯೆ ರಾಜ್ಯ ಸರಕಾರ ವಿರುದ್ಧದ ಸಹಜ ಆಡಳಿತವಿರೋಧಿ ಅಲೆ, ಅನೇಕ ಹಗರಣಗಳನ್ನು ಬಳಸಿಕೊಳ್ಳುವಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಸಾರಾಸಗಟು ವಿಫಲವಾಗಿದೆ. ರಾಷ್ಟ್ರೀಯ ನಾಯಕರು ಏನೆಲ್ಲ ಹೇಳಿದರೂ, ಎಷ್ಟೆಲ್ಲ ಸಮಾಲೋಚನೆಗಳನ್ನು ನಡೆಸಿದರೂ, ಹಲವು ಸಮಿತಿಗಳನ್ನು ಪುನಾರಚನೆ ಮಾಡಿದರೂ ಸಮಸ್ಯೆ ಇದ್ದ ಜಾಗ ಬಿಟ್ಟು ಕದಲಲಿಲ್ಲ.

ತಾವು ಬೆಳೆಯುವುದಕ್ಕಿಂತ ಅನ್ಯರು ಬೆಳೆದಾರೋ ಎಂಬ ನಾಯಕರಲ್ಲಿನ ಸಂಕಟ, ಈರ್ಷೆ ಬಿಜೆಪಿಯನ್ನು ಟೊಳ್ಳು ಮಾಡುತ್ತಾ ಬಂತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನೇಕ ಬಾರಿ ತಿದಿ ಹೊತ್ತಿದರೂ ಬೆಂಕಿಯಾಗಲಿ, ಬೆಳಕಾಗಲಿ ಹೊತ್ತಿಕೊಳ್ಳಲೇ ಇಲ್ಲ. ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದು ಬಲಕ್ರೋಡೀಕರಣದ ಬದಲು ಅನ್ಯ ನಾಯಕರ ಅಸಡ್ಡೆಗೆ ಅಸ್ತ್ರವಾಯಿತು. ಆದರೆ ಪ್ರಬಲ ಲಿಂಗಾಯತ ಸಮುದಾಯದ ಯಡಿಯೂರಪ್ಪ ಅವರನ್ನು ಬಿಟ್ಟು ರಾಜಕೀಯ ಮಾಡುವಂತಿಲ್ಲ. ಅವರನ್ನು ಮುಂದಿಟ್ಟುಕೊಂಡು ಹೋದರೆ ಬೇರೆಯವರು ಸಹಿಸುವಂತಿಲ್ಲ. ಬಿಜೆಪಿ ನಲುಗುತ್ತಿರುವುದೇ ಈ ಇಕ್ಕಟ್ಟಿನಲ್ಲಿ. ಹಾಗೇ ನೋಡಿದರೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದಾಗ ಅವರ ಜತೆ ಪ್ರಮುಖವಾಗಿ ಪೈಪೋಟಿಗೆ ನಿಂತದ್ದು ಇದೇ ರೀತಿ ಸಂಘಪರಿವಾರದ ಕಟ್ಟರ್ ನಿಷ್ಠ ಸಿ.ಟಿ. ರವಿ ಹೆಸರು. ಜಗದೀಶ ಶೆಟ್ಟರ್, ಡಿ.ವಿ. ಸದಾನಂದಗೌಡ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಅವರಂಥ ಹಿರಿಯ ನಾಯಕರು ಇದ್ದರೂ ತೇಲಿ ಬಂದ ಹೆಸರು ಮಾತ್ರ ಮಾಜಿ ಸಚಿವ ಸಿ.ಟಿ. ರವಿ ಅವರದು.

ಹಿಂದುತ್ವ, ಸಂಘನಿಷ್ಠೆ, ನೇರ ನಡೆನುಡಿ, ಬದ್ಧತೆ ಅವರನ್ನು ಮುಂದಕ್ಕೆ ತಂದು ನಿಲ್ಲಿಸಿದರೆ, ಉಳಿದವರು ತಮ್ಮ ಸುತ್ತ ತಾವೇ ಕಟ್ಟಿಕೊಂಡ ಚೌಕಟ್ಟಿನಿಂದ, ತಮಗೇ ತಾವೇ ಒಡ್ಡಿಕೊಂಡ ಇತಿಮಿತಿಯಿಂದ ರಾಜ್ಯಾಧ್ಯಕ್ಷ ಹುದ್ದೆ ಬಳಿ ಸುಳಿಯದಾದರು. ಇವರೆಲ್ಲರೂ ಬದ್ಧತೆ ಮತ್ತು ಹೃದಯವೈಶಾಲ್ಯತೆ, ಅನಗತ್ಯ ಸ್ವಪಚನ ಪಕ್ಕಕ್ಕಿಟ್ಟಿದಿದ್ದರೆ ಯಡಿಯೂರಪ್ಪನವರು ರಾಜ್ಯ ಬಿಜೆಪಿಗೆ ಬರಲಾಗುತ್ತಿರಲಿಲ್ಲ. ಅಧ್ಯಕ್ಷರಾಗಲು ಆಗುತ್ತಿರಲಿಲ್ಲ. ಕೆಲವೊಮ್ಮೆ ಅನ್ಯರ ಅರ್ಹತೆಗಿಂಥ ತಾವು ಸೃಷ್ಟಿಸಿಕೊಂಡ ಅನರ್ಹತೆ ಅವಕಾಶ ಪರರ ಪಾಲಾಗುವಂತೆ ಮಾಡುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸಂಪುಟಕ್ಕೆ ಅನಂತಕುಮಾರ ಹೆಗಡೆ ಅವರ ಸೇರ್ಪಡೆ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ನಾಯಕರು ಕೊಟ್ಟ ಸ್ಪಷ್ಟ ಎಚ್ಚರಿಕೆ ಸಂದೇಶವೇ ಸರಿ.

ಈ ಶಾಕ್‌ನಿಂದ ಇವತ್ತಿಗೂ ಅನೇಕ ರಾಜ್ಯ ನಾಯಕರಿಗೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗಿಲ್ಲ. ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟಿಲು, ಸುರೇಶ್ ಅಂಗಡಿ, ಪ್ರಭಾಕರ ಕೋರೆ ಮತ್ತಿತರ ಘಟಾನುಘಟಿಗಳ ನಡುವೆಯೂ ಸಂಪುಟ ಸೇರಿದ ಅನಂತ ಕುಮಾರ ಹೆಗಡೆ ಭವಿಷ್ಯ ರಾಜಕಾರಣದಲ್ಲಿ ಯಾವ ಬೆಳವಣಿಗೆಗಳೂ ಬೇಕಾದರೂ ನಡೆಯಬಹುದು ಎಂಬುದರ ಸಂಕೇತ. ಹೀಗಾಗಿಯೇ ಈಶ್ವರಪ್ಪ ಅವರಂಥ ಹಿರಿಯ ನಾಯಕರ ಹಲುಬುವಿಕೆಗೆ ಕರಾವಳಿ ಮೂಲೆಯ ‘ಬೆಂಕಿಚೆಂಡು’ ಅನಂತಕುಮಾರ ಹೆಗಡೆ ವಸ್ತುವಾಗಿದ್ದಾರೆ.

ತಾವು ನಂಬಿರುವ ತತ್ವ-ಸಿದ್ಧಾಂತಗಳ ಜತೆಗೆ ಎಂಥ ಸೂಕ್ಷ್ಮ ಸಂದರ್ಭದಲ್ಲೂ ರಾಜೀ ಮಾಡಿಕೊಳ್ಳದ, ಆನೆ ನಡೆದದ್ದೇ ಹಾದಿ ಎಂಬಂತೆ ಸಾಗುತ್ತಿರುವ ಅನಂತಕುಮಾರ ಹೆಗಡೆ ತಮ್ಮೆಲ್ಲ ಅಪಸವ್ಯಗಳನ್ನು ಮೀರಿ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಕಟ್ಟರ್ ಹಿಂದುತ್ವವಾದ, ಸಂಘಪರಿವಾರದೆಡೆ ಅಮಿತ ಬದ್ಧತೆ, ಮುಲಾಜಿಲ್ಲದ ನಡೆ-ನುಡಿಯಿಂದ ಮುಖಂಡರ ಮನಗೆದ್ದು, ಎಲ್ಲರ ನಿರೀಕ್ಷೆಗಳನ್ನು ಪಕ್ಕಕ್ಕೆ ಸರಿಸಿ ಕೇಂದ್ರ ಸಚಿವರಾಗಿರುವ ಅನಂತಕುಮಾರ ಹೆಗಡೆ ಅವರನ್ನು ವಿಧಾನನಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದಾರೆ.

ಹಾಗೆ ನೋಡಿದರೆ ಅನಂತಕುಮಾರ್ ಹೆಗಡೆ ಮೊದಲಿಂದಲೂ ಬೆಂಗಳೂರು ರಾಜಕಾರಣದಲ್ಲಿ ಕಾಣಿಸಿಕೊಂಡವರಲ್ಲ. 1994 ರಲ್ಲಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಘಪರಿವಾರ ನಾಯಕರ ಗಮನ ಸೆಳೆದು ಪ್ರವರ್ಧಮಾನಕ್ಕೆ ಬಂದ ರಾತ್ರಿ ಕಳೆದು ಹಗಲು ಹರಿಯುವಷ್ಟರಲ್ಲಿ ಯುವಕರ ಕಣ್ಮಣಿ ಆದರು. ದೇಶದಲ್ಲಿ ವಾಜಪೇಯಿ ಎಲೆ ಏಳುತ್ತಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಕೊರತೆ ಎದುರಿಸುತ್ತಿತ್ತು. ಅಷ್ಟರಲ್ಲಿ ಅನಂತಕುಮಾರ ಒಡನಾಡಿ, ಭಟ್ಕಳ ಬಿಜೆಪಿ ಶಾಸಕ ಡಾ. ಚಿತ್ತರಂಜನ್ ಹತ್ಯೆಯಾಗಿ ಹೋಯಿತು. ಈ ಹತ್ಯೆ ಬಿಜೆಪಿ ಪರ ಎಬ್ಬಿಸಿದ ಅಲೆಯಲ್ಲಿ ಅನಂತಕುಮಾರ ಹೆಗಡೆ ಲೋಕಸಭೆಗೆ ಆಯ್ಕೆಯಾಗಿ ಹೋದರು. ಆಗವರಿಗೆ ಕೇವಲ 28 ವರ್ಷ. ಅತ್ಯಂತ ಕಿರಿಯ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆ. ಬ್ರಾಹ್ಮಣ ಸಮುದಾಯ ಪ್ರತಿನಿಧಿಸುವ ಹೆಗಡೆ ಅವರಿಗೆ ಜಾತಿಬಲ ಇಲ್ಲ, ಗಾಢ್ ಫಾದರ್‌ಗಳಂತೂ ಇಲ್ಲವೇ ಇಲ್ಲ. ಆದರೂ ಐದು ಬಾರಿ ಸಂಸದರಾಗಿದ್ದಾರೆ.

ಕರಾವಳಿಯಲ್ಲಿ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಾ ಮತ್ತು ಆರ್.ವಿ. ದೇಶಪಾಂಡೆ ಒಳಜಗಳ ಅನಂತಕುಮಾರ್ ರಾಜಕೀಯ ಪಯಣಕ್ಕೆ ಕೊಂಚ ಕೊಡುಗೆ ಕೊಟ್ಟಿದೆ. ಹಾಗಂತೇ ಅದೇ ಪ್ಲಸ್ ಪಾಯಿಂಟ್ ಅಲ್ಲ. ಕೋಮುಸೂಕ್ಷ್ಮತೆಗಳನ್ನು ಪಕ್ಕಕ್ಕಿಟ್ಟು, ತನಗನಿಸಿದ ಆಣಿಮುತ್ತುಗಳನ್ನು ಸಿಡಿಲಮರಿಯಂತೆ ಉದುರಿಸುವ ಅನಂತಕುಮಾರ ಈ ಕಾರಣಕ್ಕಾಗಿಯೇ ಮತದಾರರ ಮನಗೆದ್ದಿದ್ದಾರೆ. ಈವರೆಗೂ ಅಷ್ಟೇಕೆ ಅವರು ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆ ಸ್ಥಳೀಯ ರಾಜಕಾರಣದಿಂದಲೂ ದೂರ. ಅನ್ಯ ರಾಜಕಾರಣಿಗಳಂತೆ ಕರೆಕರೆದೆಡೆಗೆಲ್ಲ ಹೋಗುವವರಲ್ಲ. ನನ್ನದೇನಿದ್ದರೂ ರಾಷ್ಟ್ರ ರಾಜಕಾರಣ. ಲೋಕಲ್‌ಗೆಲ್ಲ ಎಳೆಯಬೇಡಿ ಎನ್ನುತ್ತಾರೆ. ಮಿತಭಾಷಿ, ಉತ್ತಮ ವಾಗ್ಮಿ. ಶಿಲಾನ್ಯಾಸ, ಉದ್ಘಾಟನೆ, ಸಭೆ, ಸಮಾರಂಭ, ಮದುವೆ, ತಿಥಿ, ನಾಟಕ – ಇವುಗಳಿಂದ ಬಲುದೂರ. ಅಗ್ಗದ ಪ್ರಚಾರ ಬೇಕಿಲ್ಲ. ಹುಡಿಪುಡಿ ಕಾರ್ಯಕ್ರಮಕ್ಕೆ ಕರೆಯಬೇಡಿ, ಬರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸುತ್ತಾರೆ. ಪ್ರಶ್ನೆ ಮಾಡಿದರೆ ಹೊಡದೇ ಬಿಡುತ್ತಾರೆ. ‘ಕೈ-ಬಾಯಿ’ಯಿಂದಲೇ ಎಲ್ಲರಿಗೂ ಪರಿಚಿತ! ಅವರು ಯಾರಿಗೋ ಉಗಿದರು, ಯಾರಿಗೋ ಬಿಗಿದರು ಎಂದರೆ ಯುವ ಸಮುದಾಯದಲ್ಲಿ ಪುಳಕ. ಕಡಿಮೆ ಓದಿದ್ದರೂ ಉತ್ತಮ ಸಂಸದೀಯ ಪಟು.

ಕೇಂದ್ರದ ಹಲವು ಸ್ಥಾಯಿ ಸಮಿತಿಗಳ ಪ್ರತಿನಿಧಿ. ಬಜೆಟ್ ಮತ್ತು ಆರ್ಥಿಕ ವಿಚಾರಗಳಲ್ಲಿ ಪ್ರೌಢಿಮೆಯಿಂದ ವಾದ ಮಂಡಿಸಬಲ್ಲವರು. ಲೋಕಸಭೆಯಲ್ಲಿ ಅನೇಕ ಬಾರಿ ಇದಕ್ಕಾಗಿಯೇ ಗಮನ ಸೆಳೆದಿದ್ದಾರೆ. ಇಂಥ ಅನಂತಕುಮಾರ ಹೆಗಡೆ ಅವರನ್ನು ನವೆಂಬರ್ 2 ರಿಂದ ಆರಂಭವಾಗುವ ಬಿಜೆಪಿ ನವಪರಿವರ್ತನಾ ರ್ಯಾಲಿಯಿಂದ ಹಿಡಿದು ಮುಂಬರುವ ವಿಧಾನಸಭೆ ಚುನಾವಣೆವರೆಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ನಾಯಕರಿಗೆ ರಾಷ್ಟ್ರ ನಾಯಕರು ಸೂಚನೆ ಕೊಟ್ಟಿದ್ದು, ರಾಜ್ಯ ಬಿಜೆಪಿಯಲ್ಲಿ ಮುಂದಾಗಬಹುದಾದ ಮಹತ್ವದ ಬದಲಾವಣೆಗಳಿಗೆ ಇದೊಂದು ಮುನ್ಸೂಚನೆ ಎಂದು ಪರಿಭಾವಿಸಲಾಗುತ್ತಿದೆ.

ನಿಜ, ಅನಂತಕುಮಾರ ಹೆಗಡೆ ಯಾವತ್ತೂ ಓಲೈಕೆ ರಾಜಕಾರಣ ಮಾಡಿದವರಲ್ಲ. ರಾಜ್ಯ ನಾಯಕರಿಗೆ ಡೊಗ್ಗು ಸಲಾಮು ಹೊಡೆದವರಲ್ಲ. ಯಡಿಯೂರಪ್ಪ ಬಣ, ಅನಂತಕುಮಾರ ಬಣ, ಸಂತೋಷ್ ಬಣ, ಈಶ್ವರಪ್ಪ ಬಣ ಎಂದು ಯಾರ ಜತೆಗೂ ಗುರುತಿಸಿಕೊಂಡವರಲ್ಲ. ಅದೇ ರೀತಿ ದಿಲ್ಲಿಯಲ್ಲೂ ಬಕೆಟ್ ರಾಜಕೀಯ ಮಾಡಿದವರಲ್ಲ. ತಮ್ಮದೇ ಆದ ವ್ಯಕ್ತಿತ್ವ, ಖಡಕ್ ಮಾತು, ಹಿಡಿದ ಹಠ ಸಾಧನೆಯಿಂದ ಪ್ರಚಲಿತಕ್ಕೆ ಬಂದವರೇ ಹೊರತು ಅವರಿವರಿಗೆ ಮಸಲತ್ತು ಮಾಡಿಕೊಂಡು ಮೇಲೆರಿದವರಲ್ಲ. ಹಿಂದೂವಾದ, ಅಲ್ಪಸಂಖ್ಯಾತ ವಿರೋಧಿ ಕುರಿತ ನೂರಾರು ವಿವಾದಾತ್ಮಕ ಹೇಳಿಕೆಗಳಿಂದಲೇ ತಮಗೊಂದು ಐಡೆಂಟಿಟಿ ತಂದುಕೊಂಡಿರುವ ಅವರು ಆ ಕಾರಣಕ್ಕಾಗಿಯೇ ರಾಷ್ಟ್ರ ನಾಯಕರ ಹೃನ್ಮನ ಗೆದ್ದವರು. ‘ಅಲ್ಪಸಂಖ್ಯಾತರ ಒಂದೇ ಒಂದು ಮತ ನನಗೆ ಬೇಡ, ಅವರ ವೋಟಿನಿಂದ ನಾನು ಗೆಲ್ಲುವುದೂ ಬೇಕಿಲ್ಲ. ರಾಜಕೀಯ ಮಾಡುವುದು ಬೇಕಿಲ್ಲ. ನಾನು ಹುಟ್ಟಿರುವುದು ಹಿಂದೂವಾಗಿ. ಹಿಂದೂವಾಗಿಯೇ ಸಾಯುತ್ತೇನೆ’ ಎಂದು ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಹೇಳಿದ ನಾಯಕನೇನಾದರೂ ಇದ್ದರೆ ಅದು ಅನಂತಕುಮಾರ ಹೆಗಡೆ ಮಾತ್ರ.

ಒಂದು ಸಮುದಾಯದ ಮತಗಳನ್ನು ಸಾರಸಗಟಾಗಿ ನಿರಾಕರಿಸಿ ರಾಜಕಾರಣ ಮಾಡುವುದು ಅಷ್ಟು ಸುಲಭವೇನಲ್ಲ. ಆದರೆ ಹೆಗಡೆ ಅದನ್ನು ದಕ್ಕಿಸಿಕೊಂಡಿದ್ದಾರೆ. ಪದೇ ಪದೇ ಗೆದ್ದು ತೋರಿಸಿದ್ದಾರೆ. ಈ ಹೇಳಿಕೆ ನೀಡಿದ ನಂತರ ನಡೆದ ಕಳೆದ ಚುನಾವಣೆಯಲ್ಲಿ ಅವರು ಸೋತೇ ಬಿಡುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅವರು ಬರೀ ಗೆದ್ದದ್ದು ಮಾತ್ರವಲ್ಲ ಈಗ ಕೇಂದ್ರ ಸಂಪುಟದ ಕೌಶಲ್ಯ ರಾಜ್ಯ ಸಚಿವರಾಗಿದ್ದಾರೆ. ಅಲ್ಲದೇ ಇತ್ತೀಚೆಗೆ, ‘ಶಿಷ್ಟಾಚಾರದ ಹೆಸರಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸಿದರೆ ಸಮಾರಂಭದಲ್ಲೇ ಟಿಪ್ಪು ವಿರುದ್ಧ ಘೋಷಣೆ ಹಾಕುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇನೂ ಮಾಡಿಕೊಳ್ಳುತ್ತಾರೋ ನೋಡುವೆ’ ಎಂದು ತೊಡೆ ತಟ್ಟಿದವರು. ಕೇಂದ್ರ ಸಂಪುಟ ಸೇರಿದಾಗ ಹಿಂದುತ್ವವಾದ, ಸಂಘನಿಷ್ಠೆಗೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ಹೇಳಿದ್ದರು. ‘ಒಬ್ಬ ಸಚಿವನಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ನಿರ್ದಿಷ್ಟ ಕೋಮುದ್ವೇಷ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರೆ, ‘ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ. ಹಿಂದುತ್ವವಾದ, ಸಂಘನಿಷ್ಠೆ, ಇಸ್ಲಾಂ ವಿರೋಧ ನನ್ನ ಆತ್ಮಸಾಕ್ಷಿ’ ಎಂದು ಸಾರಿಕೊಂಡವರು!

ಈ ಕಾರಣಕ್ಕಾಗಿಯೇ ಅವರು ಆರೆಸ್ಸಸ್ ಮುಖಂಡರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೀಲಿಗಣ್ಣಿನ ಹುಡುಗನಾಗಿ ಕಂಗೊಳಿಸುತ್ತಿದ್ದಾರೆ. ಧರ್ಮ ಮತ್ತು ಕೋಮು ಆಧರಿತ ರಾಜಕಾರಣಕ್ಕೆ ಪ್ರಬಲ ಅಸ್ತ್ರವಾಗಿ ಗೋಚರಿಸಿದ್ದಾರೆ. ಇಂಥ ಅನಂತಕುಮಾರ ಹೆಗಡೆ ಅವರನ್ನು ಮುಂದಿಟ್ಟುಕೊಂಡು ರಾಜ್ಯ ನಾಯಕರಿಗೆ ರಾಜಕೀಯ ಪಾಠ ಮಾಡಲು ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದು, ಅವರನ್ನು ಇದ್ದಕ್ಕಿದ್ದಂತೆ ರಾಜ್ಯ ಬಿಜೆಪಿ ಮುನ್ನೆಲೆಗೆ ತಂದು ನಿಲ್ಲಿಸಿದೆ. ಅಲ್ಲದೆ ಮುಖ್ಯಮಂತ್ರಿ ಅಭ್ಯರ್ಥಿ ಪಟ್ಟಿಯಲ್ಲೂ ಹೆಸರು ಠಳಾಯಿಸುವಂತೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೇಂದ್ರ ಸಂಪುಟದಲ್ಲಿ ವಿರೋಧಿಗಳು ಇಲ್ಲವೆಂದೇನಿಲ್ಲ. ಆದರೆ ಸಂಘಪರಿವಾರದ ಶ್ರೀರಕ್ಷೆ ಅವರ ವಿರೋಧವನ್ನು ಆಂತರ್ಯದಲ್ಲೇ ಆಪೋಶನ ತೆಗೆದುಕೊಂಡಿದೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತೆ ಕಂಗೊಳಿಸುತ್ತಿರುವ ಮೋದಿ ಮುಂದೆ ಸಂಪುಟ ಎಂಬುದೇ ಮಸುಕಾಗಿ ಹೋಗಿದೆ. ಸರಕಾರದಲ್ಲಿ ಮೋದಿ ಮತ್ತು ಪಕ್ಷದಲ್ಲಿ ಅಮಿತ್ ಶಾ ಬಿಟ್ಟಿರೆ ಬೇರೇನೂ ಕಾಣುತ್ತಿಲ್ಲ. ಆರೆಸ್ಸೆಸ್ ಬೆಂಬಲದ ಪ್ರಖರತೆಯೇ ಹಾಗೆ. ಅಂಥ ಆರೆಸ್ಸೆಸ್ ಆಯ್ಕೆಯಾಗಿ ಸಂಪುಟ ಸೇರಿರುವ ಅನಂತಕುಮಾರ ಹೆಗಡೆ ಭವಿಷ್ಯದಲ್ಲೂ ಸಾಕಷ್ಟು ಕುತೂಹಲಗಳಿಗೆ ಅಸ್ತ್ರವಾದರೆ ಆಶ್ಚರ್ಯವೇನಿಲ್ಲ.

ಲಗೋರಿ: ಪರಹಿತ ಅಸಹಿಷ್ಣುತೆ ಸ್ವಹಿತಕ್ಕೆ ಸಂಚಕಾರ ತರುತ್ತದೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply