ಯೋಜನೆಗಳ ಹಣ ಚುನಾವಣೆಗೆ ಬಳಸಿಕೊಳ್ಳಲು ಕಾಂಗ್ರೆಸ್ ಷಡ್ಯಂತ್ರ! ಸಿದ್ದು ಸರ್ಕಾರದ ವಿರುದ್ಧ ಹೆಚ್ಡಿಕೆ ಆರೋಪ

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಡೆದಿರುವ ಹಗರಣಗಳನ್ನು ಬೆಳಕಿಗೆ ತರುತ್ತೇನೆ ಎಂದು ಕೂಗಾಡುತ್ತಿದ್ದ ಯಡಿಯೂರಪ್ಪನವರು ಈಗ ಮೌನವಾಗಿದ್ದಾರೆ. ಈ ಮಧ್ಯೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ‘ಕಾಂಗ್ರೆಸ್ ಸರ್ಕಾರ ವಿವಿಧ ಇಲಾಖೆಗಳ ಯೋಜನೆ ಹಣ ಲಪಟಾಸಿ ಚುನಾವಣೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ.

ವಿವಿಧ ಯೋಜನೆಗಳಿಗೆ ಮೀಸಲಿಟ್ಟಿರುವ ಸಾವಿರಾರು ಕೋಟಿ ಹಣವನ್ನು ಲಪಟಾಯಿಸಿ ಆ ದುಡ್ಡಿನಲ್ಲಿ ಮುಂಬರುವ ಚುನಾವಣೆ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಟಿದ್ದಾರೆಂದು ಎಂದು ಕುಮಾರಸ್ವಾಮಿ ಬೆಂಗಳೂರಿನಲ್ಲಿ ಆರೋಪ ಮಾಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಆರೋಪಗಳಿಗೆ ಸಂಬಂಧಪಟ್ಟ ದಾಖಲೆ ಬಿಡುಗಡೆ ಮಾಡಿದ ಹೆಚ್ಡಿಕೆ ಹೇಳಿದಿಷ್ಟು…

‘ವಿವಿಧ ಇಲಾಖೆಗಳ ಯೋಜನೆ ಹಣವನ್ನು ಸಾರ್ವಜನಿಕ ಬ್ಯಾಂಕುಗಳಲ್ಲಿ ಅನಧಿಕೃತವಾಗಿ ಠೇವಣಿ ಇಟ್ಟು ನಂತರ ಆ ಹಣವನ್ನು ಇತರ ಬ್ಯಾಂಕ್‍ಗಳ ನಿಷ್ಕ್ರಿಯ ಖಾತೆಗಳಿಗೆ ವರ್ಗಾಯಿಸುವ ಕಾರ್ಯ ನಡೆದಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ₹500 ಕೋಟಿ ಇದೇ ರೀತಿ ಲಪಟಾಯಿಸಲಾಗಿತ್ತು. ಈ ಬಗ್ಗೆ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ತನಿಖೆಗೆ ಆದೇಶ ಮಾಡಿದ್ದರು. ಈ ಕುರಿತ ವರದಿ ಬರುವ ಮುನ್ನವೇ ಅದೇ ಇಲಾಖೆಯಲ್ಲಿ ಮತ್ತೆ ಠೇವಣಿ ಇಟ್ಟು ನಿಷ್ಕ್ರಿಯ ಖಾತೆಗಳಿಗೆ ವರ್ಗಾಯಿಸುವ ಧಂಧೆ ಆರಂಭಗೊಂಡಿದೆ. ಪಂಚಾಯತ್ ಇಲಾಖೆ ಅಡಿಯಲ್ಲಿ ಬರುವ ಗ್ರಾಮೀಣ ಮೂಲಭೂತ ಸೌಕರ್ಯ ಇಲಾಖೆಯಲ್ಲಿದ್ದ ₹ 55 ಕೋಟಿ ಹಣವನ್ನು ಕಳೆದ ಆಗಸ್ಟ್ 24 ಮತ್ತು 30ರಂದು ಮಂಗಳೂರಿನ ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಠೇವಣಿ ಇಡಲಾಗಿದೆ.

ಠೇವಣಿ ಇಟ್ಟ ಅಲ್ಪ ಸಮಯದಲ್ಲೇ ಬೆಂಗಳೂರಿನ ವಿಜಯಾ ಬ್ಯಾಂಕಿನ ನಿರ್ವಹಣೆ ಸ್ಥಗಿತಗೊಂಡ ಖಾತೆಗೆ ₹ 50 ಲಕ್ಷ ವರ್ಗಾಯಿಸಲಾಗಿದೆ. ಇದು ಷಾ ಎಕ್ಸ್ ಪೋರ್ಟ್ ಎಂಬ ಕಂಪನಿಗೆ ಸೇರಿದ ಖಾತೆಯಾಗಿದ್ದು, ಇದೇ ಮಾದರಿಯಲ್ಲಿ ವಿವಿಧ ಇಲಾಖೆಯ ಹಣ ಠೇವಣಿ ಇಟ್ಟು ನಂತರ ನಿಷ್ಕ್ರಿಯ ಖಾತೆಗಳಿಗೆ ವರ್ಗಾಯಿಸಿ ಅದನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿ ಚುನಾವಣೆಗೆ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ರಾಜ್ಯ ಸರ್ಕಾರ ಈಗಾಗಲೇ ₹ 2 ಲಕ್ಷ ಕೋಟಿ ಸಾಲ ಮಾಡಿ ಜನರ ಮೇಲೆ ಭಾರ ಹೊರಿಸಿದೆ. ಇದರೊಂದಿಗೆ ರೈತರ ಕೃಷಿ ಸಾಲ ಮನ್ನಾ ಮಾಡಿ ಅದನ್ನು ತುಂಬಲಾಗದೆ, ಎಂಎಸ್‍ಐಎಲ್‍ನ ಹಣವನ್ನು ಅಪೆಕ್ಸ್ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಾರೆ. ಇದು ಕೇವಲ ಇಲಾಖೆಗಳಿಗೆ ಸೀಮಿತವಾಗಿಲ್ಲ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲೂ ಇಂತಹದ್ದೇ ಧಂದೆ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ, ಪಾರದರ್ಶಕ, ಬಿಗಿ ಆಡಳಿತ ನೀಡುತ್ತಿರುವುದಾಗಿ ಕೊಚ್ಚಿಕೊಳ್ಳುತ್ತಾರೆ. ಸರ್ಕಾರದ ಹಣವನ್ನು ಸ್ವೇಚ್ಛಾಚಾರವಾಗಿ ದುರ್ಬಳಕೆ ಮಾಡಿಕೊಂಡು ವಾಮ ಮಾರ್ಗದಲ್ಲಿ ಚುನಾವಣೆಗೆ ಬಳಕೆ ಮಾಡಿಕೊಳ್ಳಲು ಹೊರಟಿರುವುದು ಪಾರದರ್ಶಕ ಆಡಳಿತವೇ?’

Leave a Reply