ಮೋದಿ, ಸಿದ್ದರಾಮಯ್ಯ ಟ್ವೀಟ್ ಸಮರದಲ್ಲಿರೋದು ಚುನಾವಣೆ ರಾಜಕಾರಣ!

ಡಿಜಿಟಲ್ ಕನ್ನಡ ವಿಶೇಷ:

ಕರ್ನಾಟಕಕ್ಕೆ ಒಂದು ದಿನದ ಭೇಟಿ ಸಂದರ್ಭವನ್ನುಸಮೀಪದಲ್ಲೇ ಇರುವ ಚುನಾವಣೆ ರಣಕಹಳೆ ಮೊಳಗಿಸಲು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಸಮರ ಸಾರುವ ಮೂಲಕ ಅದನ್ನು ಮತ್ತೊಂದು ಹಂತಕ್ಕೆ ಎತ್ತೊಯ್ದಿದ್ದಾರೆ.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ-ಪುನಸ್ಕಾರ ಸೇರಿದಂತೆ ಭಾನುವಾರ ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು ಕೊಟ್ಟ ಒಟ್ಟಾರೆ ಸಂದೇಶ ‘ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅನಧಿಕೃತ ಚಾಲನೆ’ ಎಂಬುದೇ ಆಗಿತ್ತು. ಆದರೆ ಇಲ್ಲಿಂದ ಮರಳುತ್ತಿದ್ದಂತೆ ಮೋದಿ ಅವರು ‘ಕರ್ನಾಟಕದಲ್ಲಿ ಅಭಿವೃದ್ಧಿ ರಾಜಕಾರಣದ ಅವಶ್ಯಕತೆ ಇದೆ’ ಎಂದು ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ. ಜತೆಗೆ ರಾಜ್ಯ ಸರಕಾರದ ಮೇಲೆ ಮುರಿದುಕೊಂಡು ಬೀಳುವಂತೆ ಇಲ್ಲಿನ ಬಿಜೆಪಿ ನಾಯಕರಿಗೂ ತಿದಿ ಒತ್ತಿದ್ದಾರೆ.

ಸೇರಿಗೆ ಸವ್ವಾಸೇರು ಎಂಬತೆ ಪ್ರಧಾನಿ ಟ್ವೀಟ್ ಗೆ ಮರುಟ್ವೀಟ್ ಮೂಲಕವೇ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು, ‘ನಾವು ಅಭಿವೃದ್ಧಿಗಾಗಿ ರಾಜಕೀಯ ಮಾಡುತ್ತೇವೆಯೇ ಹೊರತು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. ಅದೇನಿದ್ದರೂ ಕೇಂದ್ರ ಸರಕಾರದ ತಂತ್ರ. ಕರ್ನಾಟಕದಲ್ಲಿ ಮೂರು ಲಕ್ಷ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುತ್ತಿದ್ದೇವೆ. ಒಂದು ಕೋಟಿ ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ. ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಕೊಟ್ಟಿದ್ದೇವೆ. ಇದನ್ನು ಅಭಿವೃದ್ಧಿ ಅನ್ನುತ್ತಾರೋ, ಮತ್ತೇನನ್ನುತ್ತಾರೆ ಎಂಬುದನ್ನು ಪ್ರಧಾನಿಯವರೇ ಹೇಳಬೇಕು’ ಎಂದು ಪ್ರಶ್ನಿಸಿದ್ದಾರೆ.

ಅಲ್ಲಿಗೆ ಕರ್ನಾಟಕದಲ್ಲಿ ಚುನಾವಣೆ ಪ್ರಚಾರ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ. ಮೋದಿ ಅವರು ಇಲ್ಲಿಗೆ ಬಂದದ್ದೇ ತಣ್ಣಗೆ ಮಲಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಕಾವು ಕೊಡಲೆಂದೇ. ತಾವು ಊದಿರುವ ಪಾಂಚಜನ್ಯ ನಾದವನ್ನು ಮೂಲೆಮೂಲೆಗೆ ತಲುಪಿಸಲೆಂದು. ಅದನ್ನವರು ಎತ್ತ ಕೊಂಡೊಯ್ಯುತ್ತಾರೆ, ಕಾಂಗ್ರೆಸ್ನವರು ಹೇಗೆ ವಾಪಸ್ಸು ಕೊಡುತ್ತಾರೆ ಎಂಬುದು ಇದೀಗ ರಾಜಕೀಯ ಪಡಸಾಲೆಯ ಕುತೂಹಲ!

Leave a Reply