‘ಆಧಾರ್ ಕಡ್ಡಾಯ ದೇಶದ ಭದ್ರತೆಗೆ ಅಪಾಯ…’ ಹೀಗೆ ಹೇಳ್ತಿರೋದು ಕಾಂಗ್ರೆಸಿನವರಲ್ಲ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ!

ಡಿಜಿಟಲ್ ಕನ್ನಡ ಟೀಮ್:

‘ಆಧಾರ್ ಕಾರ್ಡ್ ಕಡ್ಡಾಯ ನಿರ್ಧಾರದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಲಿದೆ…’ ಇದು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಯಲ್ಲ. ಬದಲಿಗೆ ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರೇ ನೀಡುತ್ತಿರುವ ಎಚ್ಚರಿಕೆ.

ಹೌದು… ಮೊಬೈಲ್ ಸಿಮ್ ಕಾರ್ಡಿನಿಂದ ಬ್ಯಾಂಕ್ ಖಾತಿವರೆಗೂ, ಪಡಿತರ ಚೀಟಿಯಿಂದ ಅಡುಗೆ ಅನಿಲ ಸಬ್ಸಿಡಿವರೆಗೂ ಎಲ್ಲಾ ಹಂತದಲ್ಲೂ ಆಧಾರ್ ಕಾರ್ಡನ್ನು ಕಡ್ಡಾಯ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಅಷ್ಟೇ ಅಲ್ಲ ಭದ್ರತೆಯ ವಿಷಯದ ದೃಷ್ಟಿಯಿಂದ ಆಧಾರ್ ಕಡ್ಡಾಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಈ ಹಿಂದೆ ಅನೇಕ ಬಾರಿ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆದ್ರೆ ಈಗ ಸುಬ್ರಮಣಿಯನ್ ಸ್ವಾಮಿ ಅವರು ಸರ್ಕಾರದ ನಿರ್ಧಾರದಿಂದ ಭದ್ರತೆಗೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ ಹೇಳೋದಿಷ್ಟು…

‘ಆಧಾರ್ ಕಡ್ಡಾಯದ ನಿರ್ಧಾರ ಮುಂದಿನ ದಿನಗಳಲ್ಲಿ ಹೇಗೆ ದೇಶದ ಭದ್ರತೆಗೆ ಮಾರಕವಾಗಲಿದೆ ಎಂಬುದನ್ನು ವಿವರಿಸಿ ಪ್ರಧಾನಿಯವರಿಗೆ ಶೀಘ್ರದಲ್ಲೇ ಪತ್ರ ಬರೆಯುತ್ತೇನೆ. ಈ ಆಧಾರ್ ಕಡ್ಡಾಯದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಖಂಡಿತವಾಗಿಯೂ ನಿರಾಕರಿಸಲಿದೆ. ಈ ಬಗ್ಗೆ ನನಗೆ ವಿಶ್ವಾಸವಿದೆ.’

ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಆಧಾರ್ ಕಡ್ಡಾಯ ನಿರ್ಧಾರದ ವಿಚಾರಣೆಗೆ ಸಂವಿಧಾನ ಪೀಠ ನೇಮಕ ಮಾಡುವುದಾಗಿ ತಿಳಿಸಿದ್ದು, ನವೆಂಬರ್ ಕೊನೆವಾರದಿಂದ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಅಲ್ಲದೆ ಮೊಬೈಲ್ ಫೋನ್ ಹಾಗೂ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ ನಿರ್ಧಾರವನ್ನು ಪ್ರಶ್ನಿಸಲಾಗಿದ್ದ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯ ಕೇಂದ್ರದ ಪ್ರತಿಕ್ರಿಯೆ ಏನು ಎಂದು ಕೇಳಿತ್ತು. ಈ ಬೆಳವಣಿಗೆಗಳಾದ ಮರುದಿನವೇ ಸುಬ್ರಮಣಿಯನ್ ಸ್ವಾಮಿ ಅವರ ಈ ಹೇಳಿಕೆ ನಿಜಕ್ಕೂ ಮೋದಿ ಸರ್ಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯುಂಟು ಮಾಡಿದೆ.

ಸುಬ್ರಮಣಿಯನ್ ಸ್ವಾಮಿಯವರು ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಯವರಿಗೆ ಬರೆಯಲಿರುವ ಪತ್ರದಲ್ಲಿ ಈ ಬಗ್ಗೆ ಹೇಗೆ ವಿವರಿಸಲಿದ್ದಾರೆ. ನಂತರ ಮೋದಿ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಹುಟ್ಟುಕೊಂಡಿದೆ.

Leave a Reply