ಜೈ ಕನ್ನಡಾಂಬೆ, ರಾಜ್ಯೋತ್ಸವ ಕರಾಳ ದಿನಾಚರಣೆಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ಕೊಟ್ಟಿದೆ ನೋಡಂಬೆ!

ಡಿಜಿಟಲ್ ಕನ್ನಡ ಟೀಮ್:

ಇದನ್ನು ದುರಂತ ಎನ್ನಬೇಕೋ? ಕನ್ನಡಿಗರ ದುರಾದೃಷ್ಟ ಎನ್ನಬೇಕೋ? ನಮ್ಮನ್ನಾಳುವವರ ಸಮಯಸಾಧಕತನ ಅನ್ನಬೇಕೋ, ಕನ್ನಡಾಂಬೆಯ ವಿಧಿಬರಹ ಅನ್ನಬೇಕೋ ಗೊತ್ತಾಗುತ್ತಿಲ್ಲ!

ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರಸ್ತಾಪಕ್ಕೆ ಜಿಲ್ಲಾಡಳಿತವೇ ಅನುಮತಿ ಕೊಟ್ಟಿದೆ ಎಂದರೆ ಯಾರ ಹಣೆಬರಹ ಜರಿದುಕೊಳ್ಳಬೇಕು ಹೇಳಿ.

ಹೌದು, ನಂಬಲು ಸಾಧ್ಯವಾಗದಿದ್ದರೂ ಇದು ನಿಜ. ನ. 1 ರಂದು ಇಡೀ ರಾಜ್ಯ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಅತ್ತ ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನ ಆಚರಿಸಿಕೊಂಡು ಬರುತ್ತಿದೆ. ನಾಳೆಯೂ ಕರಾಳ ದಿನ ಆಚರಿಸಲು ನಿರ್ಧರಿಸಿದ್ದು, ದುರಾದೃಷ್ಟವೆಂದರೆ ಇದಕ್ಕೆ ಜಿಲ್ಲಾಡಳಿತವೇ ಅನುಮತಿ ನೀಡಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೇ ಜಾತಿ, ಭಾಷೆ, ರಾಜ್ಯದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಬಾರದು, ಭಿತ್ತಿಪತ್ರಗಳನ್ನು ಹಂಚಬಾರದು, ಬೈಕ್ ರಾಲಿ ವೇಳೆ ಮಾರಕಾಸ್ತ್ರ ಹೊಂದಿರಬಾರದು, ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಎಂಇಎಸ್ ನೇರ ಹೊಣೆ –  ಹೀಗೆ ಅನೇಕ ಷರತ್ತುಗಳನ್ನೇನೋ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಾಕಿದೆ. ಷರತ್ತುಗಳನ್ನು ಹಾಕುತ್ತೇವೆ ಎನ್ನುವ ಮಾತ್ರಕ್ಕೆ ಕನ್ನಡವಿರೋಧಿ ಚಟುವಟಿಕೆಗೆ ಠಸ್ಸೆ ಒತ್ತುವುದು ಸರಿಯೇ? ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೀಗೊಂದು ಕರಾಳ ದಿನ ಆಚರಿಸಿದರೆ ಅನುಮತಿ ಸಿಗುತ್ತದೆಯೇ? ಅನುಮತಿ ಕೊಟ್ಟು ತಪ್ಪು ಮಾಡಬೇಡಿ ಎಂದರೆ ಹೇಗಾಗುತ್ತದೆ? ಜಿಲ್ಲಾಡಳಿತಕ್ಕೆ ಅಷ್ಟೂ ತಲೆ ಬೇಡವೇ? ಹಿಂದೆ ಎಂಇಎಸ್ ಕಾರ್ಯಕರ್ತರು ಇದೇ ರೀತಿ ಅನುಮತಿ ಪಡೆದು ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದು ಅವರಿಗೇಕೆ ಅದಕ್ಕೇಕೆ ಮರೆತು ಹೋಗಿದೆ? ಕನ್ನಡ ನೆಲದಲ್ಲಿ ನಿಂತು ಕರ್ನಾಟಕದ ವಿರುದ್ಧವೇ ಭಾಷಣ ಮಾಡುವುದು, ಘೋಷಣೆ ಹಾಕುವುದು ಎಷ್ಟರಮಟ್ಟಿಗೆ ಸರಿ?  ಇನ್ನು ಕನ್ನಡ ಭಾಷೆ, ನಾಡು ನುಡಿ ಮೇಲೆ ತಮಗೆ ಇನ್ನಿಲ್ಲದ ಕಾಳಜಿ ಇದೆ ಎಂದು ಬೊಗಳೆ ಬಿಡುವ ರಾಜ್ಯ ಸರ್ಕಾರ ಈ ಬಗ್ಗೆ ಮೌನ ವಹಿಸಿರುವುದಾದರೂ ಏಕೆ? ವೋಟ್ ಬ್ಯಾಂಕ್ ರಾಜಕೀಯಕ್ಕೆ ಕನ್ನಡಾಂಬೆಯನ್ನೇ ಬಲಿ ಕೊಡಬಹುದೇ?

ಕೆಲವು ಮರಾಠಿ ಪುಂಡರ ಹಾವಳಿ ಇಷ್ಟಕ್ಕೆ ನಿಂತಿಲ್ಲ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿ ‘ಬೆಳಗಾಂ ಬಿಲಾಂಗ್ಸ್ ಟು ಮಹಾರಾಷ್ಟ್ರ’ ಎಂಬ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕೇವಲ ಬೆಳಗಾವಿ ಮಾತ್ರವಲ್ಲದೇ ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ, ಸಂತಪೂರ್, ಹುಮ್ನಾಬಾದ್ ನಂತಹ ಪ್ರದೇಶಗಳು ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆಗ್ರಹಿಸಿದ್ದಾರೆ.

1 COMMENT

  1. ಸ್ವಾತಂತ್ರ್ಯ ದಿನಾಚರಣೆ ದಿನ ಕಿಡಿಗೇಡಿಗಳು ಕರಾಳ ದಿನ ಆಚರಣೆಗೆ ಅನುಮತಿ ಕೇಳಿದರೆ, ಸರ್ಕಾರ ಅದಕ್ಕೂ ಅನುಮತಿ ಕೊಟ್ಟರೆ ಗತಿ ಏನು?
    ಇವರ ಈ ನಡೆಗೆ ಕನ್ನಡಿಗರ ಧಿಕ್ಕಾರವಿರಲಿ.
    ಜೈ ಕರ್ನಾಟಕ, ಜೈ ಹಿಂದ್.

Leave a Reply