ಚುನಾವಣೆ ಹೊತ್ತಲ್ಲಿ ಗುಜರಾತಿನ ಮುಸಲ್ಮಾನರು ಬಿಜೆಪಿಯಿಂದ ನಿರೀಕ್ಷಿಸುತ್ತಿರೋದು ‘ನಿಜವಾದ ಸದ್ಭಾವನೆ’!

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಅಲ್ಲಿನ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮುಸಲ್ಮಾನರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅದರೊಂದಿಗೆ ಈ ಬಾರಿಯ ಚುನಾವೆಯಲ್ಲಾದರೂ ಬಿಜೆಪಿ ‘ನಿಜವಾದ ಸದ್ಭಾವನಾ’ ತೋರುವುದೇ ಎಂಬ ನಿರೀಕ್ಷೆ ಗುಜರಾತಿನ ಬಿಜೆಪಿ ಮುಸಲ್ಮಾನ ಕಾರ್ಯಕರ್ತರದ್ದಾಗಿದೆ.

2011ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಇಮೇಜ್ ಬದಲಿಸಿಕೊಳ್ಳಲು ಹಾಗೂ ಅಲ್ಪಸಂಖ್ಯಾತರ ಮನವೋಲೈಸುವ ನಿಟ್ಟಿನಲ್ಲಿ ಸದ್ಭಾವನಾ ಮಿಷನ್ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆದರೆ 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಯಾವುದೇ ಮುಸಲ್ಮಾನ ಅಭ್ಯರ್ಥಿ ಕಣಕ್ಕಿಳಿಯದೇ ಆ ಕಾರ್ಯಕ್ರಮ ವಿಫಲವಾಯಿತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಾದರೂ ಬಿಜೆಪಿಯಿಂದ ನಿಜವಾದ ಸದ್ಭಾವನಾವನ್ನು ನಿರೀಕ್ಷಿಸುತ್ತಿದ್ದಾರೆ ಗುಜರಾತಿನ ಮುಸಲ್ಮಾನರು.

2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ 350ಕ್ಕೂ ಹೆಚ್ಚು ಮುಸಲ್ಮಾನ ಅಬ್ಯರ್ಥಿಗಳು ಬಹುಮತದಿಂದ ಗೆದ್ದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಮುಸಲ್ಮಾನರಿಗೆ ಕಮಲ ಪಾಳೆಯದಲ್ಲಿ ಟಿಕೆಟ್ ಸಿಗಬಹುದು ಎಂಬ ಭರವಸೆ ಮೂಡಿದೆ. ಅಂದಹಾಗೆ 2010 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮುಸಲ್ಮಾನ ಅಬ್ಯರ್ಥಿಗಳು ಜಯ ಸಾಧಿಸಿದ್ದರು. ಆದರೂ 2012ರ ಚುನಾವಣೆಯಲ್ಲಿ ಯಾವೊಬ್ಬ ಮುಸ್ಲಿಂ ಅಭ್ಯರ್ಥಿ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷದಿಂದ ಕಣಕ್ಕಿಳಿದಿರಲಿಲ್ಲ. ಹೀಗಾಗಿ ಈ ಬಾರಿಯಾದರೂ ಗುಜರಾತ್ ಬಿಜೆಪಿಯಲ್ಲಿ ನಿಜವಾದ ಸದ್ಭಾನವನಾ ನಿರೀಕ್ಷೆ ಈಡೇರುವುದೇ ಕಾದು ನೋಡಬೇಕು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ದೊಡ್ಡದಾಗಿಯೇ ಕೇಳಿಬರುತ್ತಿದೆ. ಪಟೇಲ್ ಸಮುದಾಯದ ಬಂಡಾಯ, ವಿಜಯ್ ರುಪಾನಿ ಅವರ ಆಡಳಿತ ವಿರುದ್ಧ ಎದ್ದಿರುವ ಸ್ವಲ್ಪ ಮಟ್ಟದ ಅಲೆ ಹಾಗೂ ಇತರೆ ಸವಾಲುಗಳನ್ನು ಎದುರಿಸುತ್ತಿರುವ ಬಿಜೆಪಿ ತಮ್ಮ ಪಕ್ಷದೊಳಗಿನ ಮುಸಲ್ಮಾನ ಕಾರ್ಯಕರ್ತರನ್ನು ಹೇಗೆ ನೋಡಿಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಬಿಜೆಪಿಯ ಈ ಮುಸಲ್ಮಾನ ಕಾರ್ಯಕರ್ತರು ತಮ್ಮ ಬೆಂಬಲ ಹಿಂಪಡೆದಿದ್ದೇ ಆದರೆ ಅದು ನೇರವಾಗಿ ಕಾಂಗ್ರೆಸ್ ಅಥವಾ ಇತರೆ ಪಕ್ಷಗಳಿಗೆ ಲಾಭವಾಗುವುದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಮೆಹಬೂಬ್ ಅಲಿ ಚಿಸ್ತಿ ಮುಸಲ್ಮಾನ ಅಬ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಬಿಜೆಪಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ‘ಇತ್ತೀಚೆಗೆ ನಡೆದ ಸಂಸದೀಯ ಮಂಡಳಿಯ ಸಭೆಯಲ್ಲೂ ಅನೇಕ ಮುಸಲ್ಮಾನ ನಾಯಕರು ಪಕ್ಷದ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಜಮಲ್ ಪುರ ಖಡಿಯಾ, ವೆಜಲ್ಪುರ, ವರ್ಗಾ, ವಂಕನೇರ್, ಭುಜ್ ಮತ್ತು ಅಬ್ದಾಸ ಕ್ಷೇತ್ರಗಳಲ್ಲಿ ಮುಸಲ್ಮಾನ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಬೇಡಿಕೆ ಮುಂದೆ ಬಂದಿದೆ’ ಎಂದು ವಿವರಿಸಿದ್ದಾರೆ ಮೆಹಬೂಬ್.

ಶೇ.61 ರಷ್ಟು ಮುಸಲ್ಮಾನರ ಮತಗಳನ್ನು ಹೊಂದಿರುವ ಜಮಲ್ಪುರ ಖಡಿಯಾ ಕ್ಷೇತ್ರದಲ್ಲಿ ಬಿಲ್ಡರ್ ಆಗಿರುವ ಉಸ್ಮಾನ್ ಘಂಚಿ ಬಿಜೆಪಿಯಿಂದ ಸ್ಪರ್ಧಿಸಲು ಉತ್ಸುಕರಾಗಿದ್ದು, ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಇವರ ಟಿಕೆಟ್ ಮನವಿಗೆ ಐವರು ಪ್ರಮುಖ ಮೌಲ್ವಿಗಳ ಬೆಂಬಲವೂ ವ್ಯಕ್ತವಾಗಿದ್ದು ಇವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅದೇ ರೀತಿ ಮಾಜಿ ಐಪಿಎಸ್ ಅಧಿಕಾರಿ ಐಎ ಸೈಯೆದ್ ಕೂಡ ಸ್ಪರ್ಧಿಸಲು ಉತ್ಸುಕರಾಗಿದ್ದು, ‘ಕಳೆದ 9 ವರ್ಷಗಳಿಂದ ಬಿಜೆಪಿಯ ಜತೆ ಇದ್ದೇನೆ. ಪಕ್ಷ ನನಗೆ ಟಿಕೆಟ್ ಕೊಟ್ಟರೆ ನಾನೂ ಸ್ಪರ್ಧಿಸಲು ಸಿದ್ಧ’ ಎಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಮುಸಲ್ಮಾನ ಅಭ್ಯರ್ಥಿಗಳು ಸಿದ್ಧವಿದ್ದು, ಇವರ ನಿರೀಕ್ಷೆಗೆ ಪಕ್ಷದ ಪ್ರಮುಖ ನಾಯಕರು ಹೇಗೆ ಸ್ಪಂಧಿಸುವರು ಎಂಬುದು ಸದ್ಯದ ಕುತೂಹಲ.

Leave a Reply