‘ಬದಲಾವಣೆಯೇ ನಮ್ಮ ಗುರಿ…’ ಎನ್ನುತ್ತಲೇ ಕೆಪಿಜೆಪಿ ಮೂಲಕ ಉಪ್ಪಿ ರಾಜಕೀಯ ಎಂಟ್ರಿ

ಡಿಜಿಟಲ್ ಕನ್ನಡ ಟೀಮ್:

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಬೇಕು, ರಾಜಕೀಯ ಪ್ರಜಾಕೀಯವಾಗಬೇಕು, ರಾಜಕೀಯ ನಾಯಕರು ಪ್ರಜಾ ಸೇವಕರಾಗಬೇಕು… ಎಂಬ ಆಲೋಚನೆಗಳನ್ನು ಹೊತ್ತುಕೊಂಡು ಇಡೀ ವ್ಯವಸ್ಥೆಯನ್ನೇ ಬದಲಾಯಿಸುವ ಉದ್ದೇಶದೊಂದಿಗೆ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ (ಕೆಪಿಜೆಪಿ) ವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಇದರೊಂದಿಗೆ ಎರಡು ತಿಂಗಳ ಹಿಂದೆ ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರ ಪ್ರಕಟಿಸಿದ್ದ ಬುದ್ಧಿವಂತ ಈಗ ಅಧಿಕೃತವಾಗಿ ರಾಜಕೀಯ ರಣರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ.

ನಾಯಕನಟನಾಗಿ ಅಭಿನಯಿಸಿದ ತಮ್ಮ ಮೊತ ಚಿತ್ರ ‘ಎ’ ನಲ್ಲಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ನೊಂದಿಗೆ ಎಂಟ್ರಿ ಕೊಟ್ಟು ಜನರನ್ನು ಸೆಳೆದಿದ್ದ ಉಪೇಂದ್ರ ಈಗ, ತಮ್ಮ ಪಕ್ಷದ ಹೆಸರಿನಲ್ಲಿ ಪ್ರಜ್ಞಾವಂತ ಜನತಾ ಪಕ್ಷ ಎಂದು ಸೇರಿಸುವ ಮೂಲಕ ಮತ್ತೆ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪ್ರಜೆಗಳನ್ನು ತಲುಪುವ ಪ್ರತ್ರಕರ್ತರಿಂದಲೇ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಅವರು ತಮ್ಮ ಪಕ್ಷದ ಹೆಸರು ಪ್ರಕಟಿಸಿ ಹೇಳಿದಿಷ್ಟು…

‘ನಮ್ಮ ಸಮಾಜದಲ್ಲಿ ಬದಲಾವಣೆಯಾಗಬೇಕಾಗಿರುವುದು ಸಾಕಷ್ಟಿದೆ. ಪ್ರಜಾಕೀಯಕ್ಕೆ ಬರಲು ನಿರ್ಧರಿಸಿದ ನಂತರ ಅನೇಕ ಮಂದಿ ತಮ್ಮ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಆರಂಭಿಸಿದರು. ಅವರ ಆಲೋಚನೆಗಳನ್ನು ಕೇಳಿದ ನಂತರ ನಾನು ಒಂದು ಖಾಲಿ ಡಬ್ಬಿ ಎಂಬುದು ಅರಿವಾಯಿತು. ಉದಾಹರಣೆಗೆ ಕೃಷ್ಣ ಎಂಬ ಯುವಕ ನನ್ನ ಬಳಿ ಬಂದು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಬಗ್ಗೆ ತಮ್ಮ ಆಲೋಚನೆಯನ್ನು ಹಂಚಿಕೊಂಡರು. ರಾಜ್ಯದಲ್ಲಿ ಹಾಲು ಉತ್ಪಾದನೆಯನ್ನು ಹೇಗೆ ಕೆಎಂಎಫ್ ಮೂಲಕ ನಿರ್ವಹಿಸಲಾಗುತ್ತಿದೆಯೋ ಅದೇ ರೀತಿ ಇಡೀ ರಾಜ್ಯದ ಕೃಷಿ ಕ್ಷೇತ್ರದಲ್ಲೂ ಕೊ ಆಪರೇಟಿವ್ ವ್ಯವಸ್ಥೆ ಜಾರಿಗೆ ತಂದರೆ ರೈತರ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದರು. ಅವರ ಆಲೋಚನೆ ಕೇಳಿ ನನಗೆ ಅಚ್ಚರಿಯಾಯಿತು.

ಇನ್ನು ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆ ಅಗತ್ಯವಿದೆ. ಎಂಜಿನಿಯರ್ ವಿದ್ಯಾರ್ಥಿಗಳು ನಾಲ್ಕು ವರ್ಷ ಥಿಯರಿ ಓದಿ ಕೆಲಸ ಕೇಳಲು ಹೋದರೆ, 6 ತಿಂಗಳ ತರಬೇತಿ ಮಾಡಿಕೊಂಡು ಬರಲು ಹೇಳುತ್ತಾರೆ. ನಮ್ಮ ಯುವಕರು ಓದುವುದಕ್ಕೂ ನಂತರ ಅವರು ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಹ ಪರಿಸ್ಥಿತಿ ಇದೆ. 6 ತಿಂಗಳು ತರಬೇತಿ ಪಡೆದು ಕೆಲಸ ಗಿಟ್ಟಿಸಿಕೊಳ್ಳುವುದಾದರೆ, ಲಕ್ಷಾಂತರ ಹಣ ಖರ್ಚು ಮಾಡಿ ನಾಲ್ಕು ವರ್ಷ ಏಕೆ ಓದಬೇಕು? ಇದೇ ರೀಕಿ ಹಲವು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯವಿದೆ.

ನಾಯಕರು, ನೇತಾರರ ಎಂಬದಕ್ಕೆ ಜೋತು ಬಿದ್ದಿರುವ ನಾವು ಅದರಿಂದ ಆಚೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೊಡ್ಡ ಮಟ್ಟದ ಬದಲಾವಣೆ ಅಗತ್ಯವಿದೆ. ಅದಕ್ಕಾಗಿ ನಾನು ವೇದಿಕೆ ಸಿದ್ಧ ಮಾಡಿದ್ದೇನೆ. ನೀವೇಲ್ಲರೂ ಬಂದು ಕೈ ಜೋಡಿಸಬೇಕು.

ನಾವು ಪ್ರಜಾಕೀಯ ಎಂಬ ಆ್ಯಪ್ ಬಿಡುಗಡೆ ಮಾಡುತ್ತಿದ್ದು, ವೆಬ್ ಸೈಟನ್ನು ಸಿದ್ಧಪಡಿಸುತ್ತಿದ್ದೇವೆ. ನವೆಂಬರ್ 10ರಂದು ಅದನ್ನು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಅದರಲ್ಲಿ ನಮ್ಮ ಎಲ್ಲಾ ಮಾಹಿತಿ ಸಿಗಲಿದೆ. ಅದು ನಿಮ್ಮ ಕೈಯಲ್ಲಿದ್ದರೆ ನೀವು ನಮ್ಮ ಜತೆ ಇದ್ದಹಾಗೆ. ಅದರ ಮೂಲಕ ನೀವು ನೇರವಾಗಿ ನಮ್ಮನ್ನು ಸಂಪರ್ಕರಿಸಬಹುದು. ಈ ಆ್ಯಪ್ ಹಾಗೂ ವೆಬ್ ಸೈಟನ್ನು ನಾವು ತಯಾರಿಸಿಲ್ಲ. ಜನರೇ ತಾವಾಗಿಯೇ ಮುಂದೆ ಬಂದು ಇವೆಲ್ಲವನ್ನು ಮಾಡಿಕೊಟ್ಟಿದ್ದಾರೆ. ನನ್ನ ಚಿತ್ರ ಬುದ್ಧಿವಂತರಿಗೆ ಅಂತಾ ಹೇಗೆ ಹೇಳ್ತಿನೋ ಅದೇ ರೀತಿ ನಮ್ಮ ಪಕ್ಷ ಪ್ರಜ್ಞಾವಂತರಿಗೆ.

ನಾವು ಉತ್ತಮ ಮೂಲ ಸೌಕರ್ಯ ಕಲ್ಪಿಸಬೇಕು, ಮೋದಿ ಅವರು ಸ್ಮಾರ್ಟ್ ಸಿಟಿ ಮಾಡುವ ಕಲ್ಪನೆ ಹೊಂದಿದ್ದಾರೆ. ನಾವು ಮೊದಲು ಸ್ಮಾರ್ಟ್ ವಿಲೇಜ್ ಮಾಡಬೇಕು. ಆಗ ನಗರಗಳು ತಾನಾಗಿಯೇ ಅಭಿವೃದ್ಧಿ ಹೊಂದುತ್ತವೆ. ಎಲ್ಲರಿಗೂ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಸಿಗಬೇಕು. ನಾವು ಕಾರ್ಮಿಕರನ್ನು ಸೃಷ್ಟಿಸುತ್ತಿದ್ದೇವೆ. ಆದರೆ ಅವರಿಗೆ ಸರಿಯಾಗಿ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ.

ನನ್ನ ಬಳಿ ಅತ್ಯುತ್ತಮ ಆಲೋಚನೆ ಇಟ್ಟುಕೊಂಡು ಬರುವವರು ಚುನಾವಣೆಗೆ ನಾವು ನಿಲ್ಲಲು ಸಾಧ್ಯವೇ ಎಂಬ ಹಿಂಜರಿಕೆ ಹೊಂದಿರುತ್ತಾರೆ. ಅಂತಹವರಿಗೆ ನಾನು ಹೇಳುವುದಿಷ್ಟೇ… ನಾನು ನಿಮಗೆ ರಾಯಭಾರಿಯಾಗಿರುತ್ತೇನೆ. ನಾನು ಪ್ರಚಾರ ಮಾಡುತ್ತೇನೆ. ನೀವು ಹಿಂಜರಿಯಬೇಕಿಲ್ಲ. ನಿಮ್ಮಲ್ಲಿ ಉತ್ತಮ ಆಲೋಚನೆಗಳಿದ್ದರೆ ಅದನ್ನು ನಮ್ಮ ಬಳಿ ಬಂದು ಹಂಚಿಕೊಳ್ಳಿ ನಮ್ಮ ಜತೆ ಸೇರಿಕೊಳ್ಳಿ ಅಷ್ಟೇ. ಸದ್ಯಕ್ಕೆ ಸಾವಿರಾರು ಮಂದಿ ಇಂತಹ ಆಲೋಚನೆಗಳನ್ನು ಹೊತ್ತು ನನ್ನ ಬಳಿ ಬಂದಿದ್ದಾರೆ. ಅವರ ಆಲೋಚನೆ ಕಾರ್ಯಗತ ಮಾಡಲು ಸಾಧ್ಯವೇ ಎಂಬುದನ್ನು ತಜ್ಞರೊಟ್ಟಿಗೆ ಪರಿಶೀಲಿಸಿದ ನಂತರವೇ ಅವರನ್ನು ಅಭ್ಯರ್ಥಿಗಳನ್ನಾಗಿ ನೇಮಿಸುತ್ತೇವೆ. ಈಗಾಗಲೇ ನಮ್ಮ ಬಳಿ ಇಂತಹ 40-50 ಅಭ್ಯರ್ಥಿಗಳಿದ್ದಾರೆ.

ರಾಜಕಾರಣ ಮಾಡಿದ್ರೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಪ್ರಜಾಕಾರಣ ಮಾಡಿದರೆ ಎಲ್ಲರೂ ಮಿತ್ರರಾಗಿರುತ್ತೇವೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಮಗೆ ಸಿಗುವ ಒಂದು ಅವಕಾಶ. ಅದನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ತಾವು ಭವಿಷ್ಯದಲ್ಲಿ ಯಾವ ಕಾರ್ಯವನ್ನು ಹೇಗೆ ಮಾಡುತ್ತೇವೆ. ತಮ್ಮ ಯೋಜನೆಗೆ ಎಷ್ಟು ಬಜೆಟ್ ಬೇಕು. ಅದರಿಂದ ಎಷ್ಟು ವರ್ಷದಲ್ಲಿ ಎಷ್ಟು ಜನರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ಹೇಳಬೇಕು. ಅದನ್ನು ಬಿಟ್ಟು ನೀವು ಅಷ್ಟು ಕೋಟಿ ತಿಂದಿರಿ ಎಂದು ಆರೋಪ ಪ್ರತ್ಯಾರೋಪ ಮಾಡುವುದು ಉತ್ತಮ ಬೆಳವಣಿಗೆಯಲ್ಲ.

ನಮ್ಮ ಸಿದ್ಧಾಂತ ಎಂದರೆ ಅದು ಪ್ರಜಾಪ್ರಭುತ್ವದಲ್ಲಿ ಶೇ.100ರಷ್ಟು ಪಾರದರ್ಶಕತೆ ತರಬೇಕು. ನಾವೇನು ಮಾಡುತ್ತೇವೆ ಎಂಬುದು ಜನರಿಗೆ ಕಾಣಿಸುತ್ತಿದ್ದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ. ನಾನು ಸೋಲು ಗೆಲವಿನ ಲೆಕ್ಕಾಚಾರದೊಂದಿಗೆ ಈ ಪ್ರಯತ್ನಕ್ಕೆ ಮುಂದಾಗಿಲ್ಲ. ನಾನು ಬದಲಾವಣೆಯತ್ತ ಒಂದು ಹೆಜ್ಜೆ ಇಟ್ಟಿದ್ದೇನೆ. ಇದುವೇ ನನ್ನ ಗೆಲವು. ನಮಗೆ ಜನಗಳೇ ಹೈಕಮಾಂಡ್. ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದ ಮೇಲೆ ಬೇರೆ ಪಕ್ಷದ ಆಮೀಷಕ್ಕೆ ಒಳಗಾಗಿ ಆ ಪಕ್ಷ ಸೇರಿದರೆ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೀಗಾಗಿ ಎಲ್ಲ ಅಭ್ಯರ್ಥಿಗಳಿಂದ ಅಫಿಡೆವಿಟ್ ಬರೆಸಿಕೊಂಡು ಅದನ್ನು ಜನರ ಮುಂದೆ ಇಡುತ್ತೇವೆ.

ಪ್ರತಿ ಬಾರಿ ಚುನಾವಣೆ ನಡೆದಾಗಲೂ ಜನ ನಿರೀಕ್ಷೆಗಳನ್ನು ಇಟ್ಟುಕೊಂಡೇ ಮತಹಾಕುತ್ತಾರೆ. ನಂತರ ನಿರಾಸೆ ಅನುಭವಿಸುತ್ತಾರೆ. ಇಂತಹ ನಿರಾಸೆ ನನ್ನಿಂದ ಆಗಲು ಬಿಡುವುದಿಲ್ಲ. ನನ್ನ ಹಾಗೂ ಅಭ್ಯರ್ಥಿಗಳ ಆಲೋಚನೆ ಸರಿಯಾಗಿ ಕಾರ್ಯಗತವಾಗುವುದಿಲ್ಲ ಎಂದು ಗೊತ್ತಾದರೆ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮತ್ತೆ ಐದು ವರ್ಷ ಸಮಯ ತೆಗೆದುಕೊಂಡು ಮತ್ತಷ್ಟು ಪೂರ್ವ ತಯಾರಿ ನಡೆಸುತ್ತೇವೆಯೇ ಹೊರತು ಆತುರದಲ್ಲಿ ಸ್ಪರ್ಧಿಸಿ ನಂತರ ಏನೂ ಮಾಡದೇ ಜನರಿಗೆ ಮತ್ತೆ ನಿರಾಸೆ ನೀಡುವುದಿಲ್ಲ. ಈಗಾಗಲೇ ಇಂತಹ ನಿರಾಸೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ಈಗ ನಾವೂ ಅದನ್ನೇ ಮಾಡಿದರೆ ಜನ ಸಂಪೂರ್ಣವಾಗಿ ಭರವಸೆ ಕಳೆದುಕೊಳ್ಳುತ್ತಾರೆ.

ನಿನ್ನೆ ಹೋರಾಟ ಮಾಡಿ ಇಂದು ರಾಜಕೀಯಕ್ಕೆ ಬರಬೇಕು ಎಂಬುದಿಲ್ಲ. ನಮ್ಮ ಈ ಪ್ರಯತ್ನವೇ ಒಂದು ಹೋರಾಟ.’

Leave a Reply