ಕಿವೀಸ್ ವಿರುದ್ಧ ಮೊದಲ ಟಿ20 ಜಯದ ನಿರೀಕ್ಷೆಯಲ್ಲಿ ಟೀಂ ಇಂಡಿಯಾ, ನೆಹ್ರಾಗೆ ಸಿಗುವುದೇ ಗೆಲುವಿನ ವಿದಾಯ?

ಡಿಜಿಟಲ್ ಕನ್ನಡ ಟೀಮ್:

ಟಿ-20 ಮಾದರಿಯಲ್ಲಿ ಮೊದಲ ವಿಶ್ವಚಾಂಪಿಯನ್ ಎಂಬ ಕೀರ್ತಿ ಹೊಂದಿರುವ ಟೀಂ ಇಂಡಿಯಾ ಈ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಈವರೆಗೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ ಎಂಬುದು ಅಚ್ಚರಿಯ ಸಂಗತಿ. ಇಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ವಿರುದ್ಧದ ಗೆಲುವಿನ ದಾಹ ನೀಗಿಸಿಕೊಳ್ಳಲು ಅವಕಾಶ ಬಂದೊದಗಿದೆ.

ಸುಮಾರು ಎರಡು ದಶಕಗಳಿಂದ ಕ್ರಿಕೆಟ್ ಆಡಿಕೊಂಡು ಬಂದಿರುವ ಆಶೀಶ್ ನೆಹ್ರಾ 18 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದ್ದಾರೆ. ಗಾಯ, ಫಿಟ್ನೆಸ್, ಶಸ್ತ್ರಚಿಕಿತ್ಸೆ ಹೀಗೆ ಅನೇಕ ಏಳು ಬೀಳುಗಳನ್ನು ಕಂಡಿರುವ ಆಶೀಶ್ ನೆಹ್ರಾ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಲು ತೀರ್ಮಾನಿಸಿದ್ದಾರೆ. ಟೀಂ ಇಂಡಿಯಾಗೆ ಸುದೀರ್ಘ ಸೇವೆ ಸಲ್ಲಿಸಿರುವ ನೆಹ್ರಾಗೆ ಗೆಲುವಿನ ಬೀಳ್ಕೊಡುಗೆ ನೀಡಲು ಟೀಂ ಇಂಡಿಯಾ ಆಟಗಾರರು ಎದುರು ನೋಡುತ್ತಿದ್ದಾರೆ.

ಟೀಂ ಇಂಡಿಯಾದ ಈ ಗೆಲುವಿನ ಲೆಕ್ಕಾಚಾರ ಅಷ್ಟು ಸುಲಭವಾಗಿಲ್ಲ. ಮೂರು ಏಕದಿನ ಪಂದ್ಯಗಳ ಸರಣಿಯನ್ನು ಗೆದ್ದು ಆತ್ಮ ವಿಶ್ವಾಸದಲ್ಲಿರುವ ಭಾರತ ತಂಡ ಈಗ ಟಿ20 ಸರಣಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ತವಕದಲ್ಲಿದೆ. ಆದರೆ ವಿಶ್ವದ ನಂಬರ್ ಟಿ20 ತಂಡವಾಗಿರುವ ನ್ಯೂಜಿಲೆಂಡ್ ತಂಡವನ್ನು ಮಣಿಸುವುದು ಕೊಹ್ಲಿ ಪಡೆಗೆ ಅಷ್ಟು ಸುಲಭವಿಲ್ಲ. ಘಟಾನುಘಟಿ ದಾಂಡಿಗರನ್ನು ಹೊಂದಿರುವ ಕಿವೀಸ್ ಪಡೆ, ವೇಗ ಹಾಗೂ ಸ್ಪಿನ್ ಬೌಲಿಂಗ್ ವಿಭಾಗದಲ್ಲೂ ಸಮತೋಲನದಿಂದ ಕೂಡಿದೆ. ಈ ಮಾದರಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವುದು ಕೊಹ್ಲಿ ತಂಡಕ್ಕೆ ಸವಾಲಾಗಿದೆ. ಇನ್ನು ಭಾರತ ತಂಡದಲ್ಲೂ ಧವನ್, ರೋಹಿತ್, ಕೊಹ್ಲಿ, ಧೋನಿ, ಪಾಂಡ್ಯ, ಕಾರ್ತಿಕ್ ಪ್ರಮುಖ ಬ್ಯಾಟ್ಸ್ ಮನ್ ಗಳಾದರೆ, ನೆಹ್ರಾ, ಚಹಲ್, ಭುವನೇಶ್ವರ್, ಅಕ್ಷರ್ ಬೌಲಿಂಗ್ ಅಸ್ತ್ರಗಳಾಗಿದ್ದಾರೆ. ಇನ್ನು ಟೀಂ ಇಂಡಿಯಾಗೆ ತವರಿನ ಅಂಗಳದಲ್ಲಿ ಅಭಿಮಾನಿಗಳ ಬೆಂಬಲವಿದೆ.

ಒಟ್ಟಿನಲ್ಲಿ ಎರಡು ಸಮಬಲ ತಂಡಗಳು ಚುಟುಕು ಕ್ರಿಕೆಟ್ ನಲ್ಲಿ ಸೆಣಸುತ್ತಿರುವುದು ಅಭಿಮಾನಿಗಳಿಗೆ ರೋಚಕತೆಯನ್ನು ಉಣಬಡಿಸುವ ನಿರೀಕ್ಷೆ ಹುಟ್ಟಿಸಿದೆ.

Leave a Reply