ನಾಳೆಯಿಂದ ಪರಿವರ್ತನಾ ಸಮಾವೇಶ ಆರಂಭ, ಚುನಾವಣೆ ತಂತ್ರಗಾರಿಕೆ ಪೂರ್ಣ ಹಿಡಿತ ಸಾಧಿಸಿದೆ ಬಿಜೆಪಿ ಹೈಕಮಾಂಡ್

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ಬಾರಿ ಮತ್ತೆ ತಮ್ಮ ಪಕ್ಷ ಅಧಿಕಾರದ ಗದ್ದುಗೆ ಏರುವಂತೆ ಮಾಡಲು ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ಹೆಣೆಯುತ್ತಿದೆ. ಕೆಲ ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದು ಪರೋಕ್ಷವಾಗಿ ಚುನಾವಣ ಸಮರಕ್ಕೆ ರಣಕಹಳೆ ಊದಿದ್ದರು. ಈಗ ಪರಿವರ್ತನಾ ಸಮಾವೇಶದ ಮೂಲಕ ಬಿಜೆಪಿ ಅಧಿಕೃತವಾಗಿ ಚುನಾವಣಾ ಕದನ ಆರಂಭಿಸಲಿದೆ.

ರಾಜ್ಯ ಚುನಾವಣೆಗೆ 7 ತಿಂಗಳಷ್ಟೇ ಬಾಕಿ ಉಳಿದಿದೆ. ಈ ಹಂತದಲ್ಲಿ ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ ಎಬ್ಬಿಸಲು ಬಿಜೆಪಿ ಅನೇಕ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ. ಆ ಪೈಕಿ ಈಗ ಮೊದಲಿಗೆ ಪ್ರಯೋಗವಾಗುತ್ತಿರೋದು ಈ ನವ ಕರ್ನಾಟಕ ಪರಿವರ್ತನಾ ಸಮಾವೇಶ. ರಾಜ್ಯ ಸರ್ಕಾರದ ಹಗರಣಗಳನ್ನು ಒಂದೊಂದಾಗಿ ಜನರ ಮುಂದಿಡುವುದಾಗಿ ಈಗಾಗಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಹೀಗಾಗಿ ನಾಳೆಯಿಂದ ಆರಂಭವಾಗಲಿರುವ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಯಾವ ರೀತಿ ತಮ್ಮ ದಾಳ ಪ್ರಯೋಗಿಸಲಿದೆ ಎಂಬ ಕುತೂಹಲ ಹೆಚ್ಚಿದೆ.

ಅಮಿತ್ ಶಾ ಅವರು ಕಳೆದ ಬಾರಿ ರಾಜ್ಯಕ್ಕೆ ಆಗಮಿಸಿದ್ದಾಗಲೇ ಬೂತ್ ಮಟ್ಟದ ಕಾರ್ಯಕರ್ತರ ಸಂಘಟನೆಯಿಂದ ಹಿಡಿದು ರಾಜ್ಯ ಬಿಜೆಪಿ ನಾಯಕರಲ್ಲಿದ್ದ ಅನೇಕ ಬಿಕ್ಕಟ್ಟುಗಳಿಗೆ ಮದ್ದು ನೀಡಿದ್ದರು. ಅಲ್ಲದೆ ಪಕ್ಷದ ಸಂಘಟನೆ ಮರೆತಿದ್ದ ರಾಜ್ಯ ನಾಯಕರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಇನ್ನು ಮೊನ್ನೆ ಪ್ರಧಾನಿ ಅವರು ರಾಜ್ಯಕ್ಕೆ ಆಗಮಿಸಿ ವಾಪಸ್ಸಾದ ಬಳಿಕೆ ಟ್ವೀಟ್ ಮೂಲಕ ಕರ್ನಾಟಕ ಸರ್ಕಾರದ ವಿರುದ್ಧ ಟೀಕೆ ಮಾಡಿ ಬಿಜೆಪಿ ಚುನಾವಣ ಹೋರಾಟಕ್ಕೆ ಪರೋಕ್ಷವಾಗಿ ಚಾಲನೆ ನೀಡಿದ್ದರು. ಆ ಹೋರಾಟ ನಾಳೆಯಿಂದ ದೊಡ್ಡ ರೂಪ ಪಡೆದುಕೊಳ್ಳಲು ಸಜ್ಜಾಗಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರ ನಾಯಕರ ಪಾತ್ರ. ಹಿಂದಿನ ಚುನಾವಣೆಗಳಲ್ಲಿ ರಾಜ್ಯ ಬಿಜೆಪಿ ನಾಯಕರ ಪಾತ್ರ ದೊಡ್ಡ ಮಟ್ಟದಲ್ಲಿ ಕಾಣುತ್ತಿತ್ತು. ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಹೆಸರಿಗೆ ಮಾತ್ರ ಎನ್ನುವಂತೆ ಈ ಸಮಾವೇಶದ ಜವಾಬ್ದಾರಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರದ್ದಾಗಿದ್ದು, ಸಮಾವೇಶದ ಒಂದೊಂದು ನಿರ್ಧಾರವೂ ರಾಷ್ಟ್ರ ನಾಯಕರ ಅಣತಿಯಂತೆ ತೆಗೆದುಕೊಳ್ಳಲಾಗಿದೆ. ಈ ಸಮಾವೇಶಕ್ಕೆ ದೊಡ್ಡ ಮಟ್ಟದಲ್ಲಿ ರಾಷ್ಟ್ರ ನಾಯಕರ ದಂಡು ಬರುತ್ತಿದ್ದು, ಇದರೊಂದಿಗೆ ಚುನಾವಣಾ ಪ್ರಚಾರದಿಂದ ಹಿಡಿದು ತಂತ್ರಗಾರಿಕೆ ಅಭ್ಯರ್ಥಿ ಪಟ್ಟಿ ಸಿದ್ಧಪಡಿಸುವವರೆಗೂ ಬಿಜೆಪಿ ಹೈಕಮಾಂಡ್ ಸಂಪೂರ್ಣವಾಗಿ ಬಿಗಿ ಹಿಡಿತ ಸಾಧಿಸಿರುವುದು ಸ್ಪಷ್ಟವಾಗಿದೆ.

ನಾಳೆ ಬೆಂಗಳೂರಿನಲ್ಲಿ ಆರಂಭವಾಗಲಿರುವ ಈ ಯಾತ್ರೆ ಸುದೀರ್ಘ 75 ದಿನಗಳ ಕಾಲ ನಡೆಯಲಿದ್ದು, ಬಿಜೆಪಿ ನಾಯಕರು 224 ಕ್ಷೇತ್ರಗಳನ್ನು ಸುತ್ತಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಾ ಜನರನ್ನು ಸೆಳೆಯುವ ಯೋಜನೆ ರೂಪಿಸಿದ್ದಾರೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಈ ಯಾತ್ರೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ರಾಷ್ಟ್ರಮಟ್ಟದ ಪ್ರಮುಖ ಬಿಜೆಪಿ ನಾಯಕರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸಾಥ್ ನೀಡಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ಮುಖ್ಯಮಂತ್ರಿ ವಸುಂದರ ರಾಜೆ, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕರ್, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್, ಉಮಾ ಭಾರತಿ ಸೇರಿದಂತೆ ವಿವಿಧ ನಾಯಕರು ರಾಜ್ಯದ ಪ್ರವಾದಲ್ಲಿ ಒಂದೊಂದು ದಿನ ಪಾಲ್ಗೊಳ್ಳಲಿದ್ದಾರೆ.

Leave a Reply