ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮೋದಿ ಬೆಂಬಲಿಸಲು ಅಮಿತ್ ಶಾ ಕರೆ

ಡಿಜಿಟಲ್ ಕನ್ನಡ ಟೀಮ್:

‘ಈ ಪರಿವರ್ತನಾ ಯಾತ್ರೆ ಕೇವಲ ಸರ್ಕಾರ, ಮುಖ್ಯಮಂತ್ರಿಗಳ ಬದಲಾವಣೆಗೆ ಮಾತ್ರ ಸೀಮಿತವಲ್ಲ. ಒಟ್ಟಾರೆ ಕರ್ನಾಟಕದ ಪರಿಸ್ಥಿತಿಯ ಪರಿವರ್ತನೆಗಾಗಿ ಈ ಯಾತ್ರೆ ನಡೆಸಲಾಗುತ್ತಿದೆ…’ ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಿವರ್ತನಾ ಯಾತ್ರೆಯ ಉದ್ದೇಶವನ್ನು ವಿವರಿಸಿದ ಪರಿ.

ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡುವ ಮೂಲಕ ಅಮಿತ್ ಶಾ ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ರಣಕಹಳೆ ಊದಿದ್ದಾರೆ. ಮುಂದಿನ ಎರಡು ತಿಂಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಯಾತ್ರೆ ರಾಜ್ಯಾದ್ಯಂತ ನಡೆಯಲಿದೆ. ಈ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಅಮಿತ್ ಶಾ, ಕೇಂದ್ರ ಸಚಿವ ಅನಂತ ಕುಮಾರ್ ಹಾಗೂ ಬಿ.ಎಸ್ ಯಡಿಯೂರಪ್ಪ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡಸಿತು. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು, ಕೇಂದ್ರ ಅನುದಾನ, ಯೋಜನೆಗಳ ಜಾರಿಯಲ್ಲಿ ವಿಫಲವಾಗಿರುವುದು, ರೈತರ ಸಮಸ್ಯೆಯ ವಿಚಾರಗಳನ್ನು ಪ್ರಮುಖವಾಗಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ವೇಳೆ ಯಾವ ನಾಯಕರು ಕಾಂಗ್ರೆಸ್ ವಿರುದ್ಧ ಕೆಂಡಕಾರಿದ್ದು ಹೇಗೆ ನೋಡಣ ಬನ್ನಿ…

ಅಮಿತ್ ಶಾ:

‘ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ 75 ದಿನಗಳ ಕಾಲ ನಡೆಯಲಿರುವ ಈ ಯಾತ್ರೆ ರಾಜ್ಯದ 224 ಕ್ಷೇತ್ರಗಳನ್ನು ತಲುಪಲಿದ್ದು ಆ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಟ್ಟಿದ್ದೇವೆ. ಈ ಯಾತ್ರೆ ಕೇವಲ ಸರ್ಕಾರ, ಮುಖ್ಯಮಂತ್ರಿ, ವಿಧೇಯಕ, ಮಂತ್ರಿಗಳನ್ನು ಬದಲಿಸಲು ನಡೆಸುತ್ತಿರುವ ಯಾತ್ರೆಯಲ್ಲ. ಬದಲಿಗೆ ರಾಜ್ಯದ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಬದಲಾಗಬೇಕು. ಕಾನೂನು ಸುವ್ಯವಸ್ಥೆ, ರೈತರು, ಯುವಕರು, ಮಹಿಳೆಯರ ಪರಿಸ್ಥಿತಿ ಸುಧಾರಿಸಬೇಕು. ಅದಕ್ಕಾಗಿ ಈ ಯಾತ್ರೆ.

ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗಾಗಿ ರಾಜ್ಯಕ್ಕೆ 2.50 ಲಕ್ಷ ಕೋಟಿ ಅನುದಾನ ನೀಡಿದೆ. ಆ ಪೈಕಿ 1.50 ಲಕ್ ಕೋಟಿ ಖರ್ಚಾಗಿದೆಯೇ ಸಿದ್ದರಾಮಯ್ಯನವರೆ? ಮುದ್ರಾ ಯೋಜನೆಯಡಿ 30 ಸಾವಿರ ಕೋಟಿ, ಅಮೃತ ಯೋಜನೆಯಡಿ 4953 ಕೋಟಿ, ಮೆಟ್ರೋಗೆ 2617 ಕೋಟಿ, ಸ್ಮಾರ್ಟ್ ಸಿಟಿಗಾಗಿ 960 ಕೋಟಿ, ಈ ವರ್ಷ ರೈಲ್ವೆಗಾಗಿ 2197 ಕೋಟಿ ಹಣವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರೆ ಈ ಹಣ ಜನರಿಗೆ ಸೂಕ್ತ ರೀತಿಯಲ್ಲಿ ತಲುಪಿಲ್ಲ. ಅದಕ್ಕೆ ಕಾರಣ, ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ. ಹಿಂದುಳಿದ ವರ್ಗದಳ ನಾಯಕ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯನವರೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನತ್ಮಕ ಸ್ಥಾನಮಾನ ನೀಡಲು ಮೋದಿ ಅವರ ಸರ್ಕಾರ ವಿಧೇಯಕ ತಂರಲು ಮುಂದಾದಾಗ ರಾಜ್ಯಸಬೆಯಲ್ಲಿ ಕಾಂಗ್ರೆಸ್ ಪಕ್ಷ ಅಡ್ಡಿ ಪಡಿಸಿದ್ದು ಏಕೆ? ಮೋದಿ ಅವರ ಶೋಷಿತರಿಗೆ, ಹಿಂದುಳಿದವರಿಗೆ, ಯುವಕರಿಗೆ, ಮಹಿಳೆಯರ ಕಲ್ಯಾಣಕ್ಕಾಗಿ 130 ಯೋಜನೆ ನೀಡಿದೆ ಆ ಪೈಕಿ ಎಷ್ಟು ಕರ್ನಾಟಕದ ಜನರಿಗೆ ತಲುಪಿದೆ?

ಸಿದ್ದರಾಮಯ್ಯನವರಿಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಉತ್ಸಾಹ ಇಲ್ಲ. ಬದಲಿಗೆ ನ.10ರ ಟಿಪ್ಪು ಜಯಂತಿ ಬಗ್ಗೆ ಆಸಕ್ತಿ ಇದೆ. ಇದರ ಮೂಲಕ ಮತ ರಾಜಕೀಯ ಮಾಡಲು ಹೊರಟಿದ್ದೀರಿ. ಇದರಿಂದ ಜನರಿಗೆ ಆಗುವ ಅನುಕೂಲವಾದರೂ ಏನು?

ಮೋದಿ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಅದನ್ನು ಜನರಿಗೆ ತಲುಪಿಸಲು ಉತ್ತಮ ಸರ್ಕಾರದ ಅಗತ್ಯ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನೀವೆಲ್ಲರು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ.’

ಬಿ.ಎಸ್.ಯಡಿಯೂರಪ್ಪ:

‘ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಬೇಕು. ರಾಜ್ಯದ ಪರಿಸ್ಥಿತಿ, ರೈತರ ಪರಿಸ್ಥಿತಿ ಸುಧಾರಿಸಬೇಕು ಎಂಬ ಉದ್ದೇಶದೊಂದಿಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು ಈ ಯಾತ್ರೆಯನ್ನು ನಡೆಸಿ 224 ಕ್ಷೇತ್ರಗಳಿಗೂ ಹೋಗುವಂತೆ ಸೂಚನೆ ನೀಡಿದ್ದಾರೆ. ನವ ಕರ್ನಾಟಕ ನಿರ್ಮಾಣಕ್ಕಾಗಿ ಈ ಯಾತ್ರೆ ನಡೆಸುತ್ತಿದ್ದೇವೆ. ರೈತರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು, ಪ್ರತಿ ರೈತನ ಹೊಲಕ್ಕೆ ನೀರು ತಲುಪಬೇಕು, ಜನರಿಗೆ 24 ಗಂಟೆ ವಿದ್ಯುತ್ ನೀಡಬೇಕು. ರೈತರ ಆದಾಯ ದುಪ್ಪಟ್ಟಾಗಬೇಕು ಎಂಬುದು ಮೋದಿ ಅವರ ಕನಸು. ಅದನ್ನು ಈಡೇರಿಸಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ನಿಮ್ಮೆಲ್ಲರ ಸಹಕಾರ ಬೇಕಿದೆ.

ಸೈನಿಕರು ದೇಶದ ಗಡಿ ಕಾಯುತ್ತಿದ್ದಾರೆ. ಈ ಯುವಕರಿಗೆ ಆ ಅವಕಾಶವಿಲ್ಲ. ಆದರೆ ನಮ್ಮ ರಾಜ್ಯ ಹಾಗೂ ಸಮಾಜದ ಪರಿಸ್ಥಿತಿ ಬದಲಾಯಿಸುವ ಅವಕಾಶವಿದೆ. ನಮ್ಮ ಯುವ ಕಾರ್ಯಕರ್ತರು ಸೈನಿಕರಿದ್ದಂತೆ. ನಿಮ್ಮ ಆಶಿರ್ವಾದದಿಂದ ಈ ರಥ ಏರುತ್ತಿದ್ದೇನೆ. ನಮ್ಮ ಗುರಿ, ಬೇಜವಾಬ್ದಾರಿ, ರೈತ, ಮಹಿಳಾ ವಿರೋಧಿ ಹಾಗೂ ಭ್ರಷ್ಟ ಸರ್ಕಾರವನ್ನು ತೆಗೆದು ಹಾಕುವುದು.

ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು 3 ಲಕ್ಷ ಫಲಾನುಭವಿಗಳಿಗೆ ನೀಡುತ್ತಿದ್ದೆ. ಆದರೆ ಸಿದ್ದರಾಮಯ್ಯನವರು ಅದನ್ನು ಒಂದೂವರೆ ಲಕ್ಷಕ್ಕೆ ಇಳಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅತ್ಯಾಚಾರ, ಕೊಲೆ, ಮಹಿಳೆಯರ ಹತ್ಯೆ, ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಅತಿಯಾಗಿದೆ. ಲೋಕಾಯುಕ್ತ ಸಂಸ್ಥೆಯನ್ನು ಮೂಲೆಗುಂಪು ಮಾಡಿ ಎಸಿಬಿ ತಂದಿದ್ದಾರೆ. ಜಾರ್ಜ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡರೂ ರಾಜೀನಾಮೆ ಪಡೆಯದೇ ಸಚಿವ ಸ್ಥಾನದಲ್ಲಿ ಮುಂದುವರಿಸಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ.

ಇಂದಿನಿಂದ ಯುದ್ಧ ಆರಂಭವಾಗಿದೆ. ನಮಗೆ ಯುದ್ಧ ಎಂದರೆ ಅದು ಚುನಾವಣೆ. ಈ ಯುದ್ಧ ಗೆಲ್ಲಬೇಕಾದರೆ ಅಮಿತ್ ಶಾ ಅವರಂತೆ ಪ್ರತಿಯೊಂದು ಬೂತ್ ಗಳನ್ನು ಗೆಲ್ಲಬೇಕು. ಈ ನಿಟ್ಟಿನಲ್ಲಿ ನೀವೆಲ್ಲರು ನಮ್ಮ ಜತೆ ಕೈಜೋಡಿಸಬೇಕು.’

ಅನಂತಕುಮಾರ್:

‘ಕಾಂಗ್ರೆಸ್ ನಲ್ಲಿದ್ದ ಸಿ.ಪಿ ಯೋಗೇಶ್ವರ್, ಶಾಸಕರಾದ ರಾಜೀವ್ ಸೇರಿದಂತೆ ಮತ್ತಿತರರು ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಪರಿವರ್ತನೆ ಆರಂಭವಾಗಿದೆ. ಸಿದ್ದರಾಮಯ್ಯ ಹೇಳುವಂತೆ ಬಿಜೆಪಿಯಲ್ಲಿ ಪರಿವರ್ತನೆ ಆಗಬೇಕಿಲ್ಲ. ರಾಜ್ಯ, ವ್ಯವಸ್ಥೆ, ಸರ್ಕಾರ, ಮುಖ್ಯಮಂತ್ರಿಗಳು ಬದಲಾಗಬೇಕು.

ರಾಜ್ಯದ ಆರೂವರೆ ಕೋಟಿ ಜನರು ಸಿದ್ರಾಮಯ್ಯ ಸಾಕು- ಯಡಿಯೂರಪ್ಪ ಬೇಕು, ರಾಹುಲ್ ಸಾಕು- ಮೋದಿ ಬೇಕು, ಕಾಂಗ್ರೆಸ್ ಜನರಿಗೆ ಕೈಕೋಟ್ಟಿದ್ದು ಸಾಕು- ಬಿಜೆಪಿ ಬೇಕು ಎನ್ನುತ್ತಿದ್ದಾರೆ. ನಾನು ಯಡಿಯೂರಪ್ಪನವರು 30 ವರ್ಷಗಳ ಸ್ನೇಹಿತರು. ಅವರು ರಾಜ್ಯದ ಮೂಲೆ ಮೂಲೆ ಸುತ್ತಿ ರಾಜಕಾರಣ ಮಾಡಿದವರು. ದೇಶದ ಇತಿಹಾಸದಲ್ಲಿ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ ನಾಯಕನಿದ್ದರೆ ಅದು ಯಡಿಯೂರಪ್ಪನವರು ಮಾತ್ರ.

ರಾಜ್ಯದಲ್ಲಿ 19 ಹಿಂದೂ ಕಾರ್ಯಕರ್ತರ ಹತ್ಯೆ, ಎರಡೂವರೆ ಸಾವಿರದಷ್ಟು ರೈತರ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿಯಂತಹ ಅದಿಕಾರಿಗಳ ಸಾವು ನೋಡಿ ಜನರಿಗೆ ಬೇಸರವಾಗಿದೆ. ದೇಶದಲ್ಲಿ ಮೋದಿ ಅವರ ಮಾಡೆಲ್ ಹೇಗೆ ಖ್ಯಾತಿ ಪಡೆದಿದೆಯೋ ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪನವರ ಮಾಡೆಲ್ ಖ್ಯಾತಿ ಪಡೆಯಲಿದೆ.’

Leave a Reply