ಉಗ್ರರು- ಶಸ್ತ್ರಾಸ್ತ್ರಗಳ ಅಭಾವದಿಂದ ಹಿಜ್ಬುಲ್ ಮುಜಾಹಿದ್ದೀನ್ ಕಣ್ಣು ಬಿದ್ದಿರೋದು ಕಾಶ್ಮೀರ ಪೊಲೀಸರ ಮೇಲೆ!

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಭದ್ರತಾ ಪಡೆಗಳ ಪರಿಣಾಮಕಾರಿ ಕಾರ್ಯಾಚರಣೆಯಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರು ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಅನುಭವಿಸುತ್ತಿದೆ. ಈ ಕೊರತೆ ನೀಗಿಸಿಕೊಳ್ಳಲು ಸಂಘಟನೆ ಕಾಶ್ಮೀರ ಪೊಲೀಸರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆ ಗುಪ್ತಚರ ಇಲಾಖೆ.

ಕಳೆದ ವಾರವಷ್ಟೇ ಶೋಫಿಯಾನ ಪ್ರದೇಶದ ಪೊಲೀಸ್ ಪೇದೆ ಅಹ್ಮದ್ ದರ್ ನಾಪತ್ತೆಯಾಗಿದ್ದು, ಆತ ಉಗ್ರ ಸಂಘಟನೆ ಸೇರಿಕೊಂಡಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇನ್ನು ಕಳೆದ ಮೇ ಹಾಗೂ ಜೂನ್ ತಿಂಗಳಲ್ಲಿ ಇಬ್ಬರು ಪೊಲೀಸ್ ಪೇದೆಗಳು ಪರಾರಿಯಾಗಿ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಈ ಬೆಳವಣಿಗೆಗಳ ಕುರಿತಾಗಿ ಕಳೆದ ತಿಂಗಳು ಕಾಶ್ಮೀರ ಪೊಲೀಸ್ ಇಲಾಖೆ ಜತೆ ಚರ್ಚಿಸಿರುವ ಗುಪ್ತಚರ ಇಲಾಖೆ ಈ ಮಾಹಿತಿ ನೀಡಿದೆ. ಪೇದೆಗಳೇ ಉಗ್ರ ಸಂಘಟನೆ ಸೇರುತ್ತಿರುವ ಬೆಳವಣಿಗೆಯನ್ನು ಪೊಲೀಸ್ ಇಲಾಖೆ ಒಪ್ಪಿಕೊಂಡಿದೆಯಾದರೂ ‘ಇದು ದೊಡ್ಡ ಸಮಸ್ಯೆಯಾಗಿಲ್ಲ. ಈ ಬೆಳವಣಿಗೆಗಳಿಗೆ ಬ್ರೇಕ್ ಹಾಕಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಸ್ಪಷ್ಟನೆ ನೀಡಿದೆ.

ಕಳೆದ ಒಂದು ವರ್ಷದಿಂದ ಭಾರತೀಯ ಭದ್ರತಾ ಪಡೆ ಕಾಶ್ಮೀರದಲ್ಲಿ ಭರ್ಜರಿಯಾಗಿ ಉಗ್ರರ ಭೇಟೆಯಾಡುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಹಿಜ್ಬುಲ್ ಸಂಘಟನೆಯ ಪ್ರಮುಖ ಕಮಾಂಡರ್ ಬುಹ್ರಾನ್ ವಾನಿ ಹತ್ಯೆಯಿಂದ ಹಿಡಿದು ಮೊನ್ನೆ ಮೊನ್ನೆ ಸದೆಬಡೆದ ಜೆಇಎಂನ ಖಲೀದ್ ಹಾಗೂ ಲಷ್ಕರ್ ಸಂಘಟನೆಯ ವಾಸೀಮ್ ವರೆಗೂ ಭದ್ರತಾ ಪಡೆಗಳ ಕಾರ್ಯಾಚರಣೆ ವಿಸ್ತರಿಸಿದೆ. ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಪ್ರಮುಖ ಉಗ್ರಗಾಮಿಗಳನ್ನು ಭದ್ರತಾ ಪಡೆ ಹತ್ಯೆ ಮಾಡುತ್ತಾ ಬಂದಿದೆ. ಈಗ ಭದ್ರತಾ ಪಟ್ಟಿಯಲ್ಲಿ ಇನ್ನು ಕೆಲವು ಹೆಸರುಗಳಿದ್ದು, ಅವರುಗಳನ್ನು ಬಡಿದು ಹಾಕಲು ಸೇನೆ ಹಗಲಿರುಳು ಶ್ರಮಿಸುತ್ತಿದೆ. ಈ ಪಟ್ಟಿಯಲ್ಲಿರುವವರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದರೆ ಉಗ್ರ ಸಂಘಟನೆಗಳ ಪ್ರಮುಖ ಕೊಂಡಿಗಳನ್ನು ಕತ್ತರಿಸಿದಂತಾಗಲಿದೆ. ಇನ್ನು ಗಡಿಯಲ್ಲಿ ಉಗ್ರರ ನುಸುಳುವಿಕೆ ವಿರುದ್ಧವೂ ಸೇನೆ ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ಒಂದು ವರ್ಷದಲ್ಲಿ 170 ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ. ಇದರಿಂದ ಸಹಜವಾಗಿಯೇ ಉಗ್ರ ಸಂಘಟನೆಗಳಲ್ಲಿ ಭಯೋತ್ಪಾದಕರು ಹಾಗೂ ಶಸ್ತ್ರಾಸ್ತ್ರಗಳ ಅಭಾವ ಹೆಚ್ಚಾಗುವಂತಾಗಿದೆ. ಈ ಕಾರಣದಿಂದ ಪೊಲೀಸ್ ಪೇದೆಗಳನ್ನು ತನ್ನತ್ತ ಸೆಳೆದುಕೊಂಡು ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರಗಳನ್ನು ದೋಚಲು ಹಿಜ್ಬುಲ್ ಮುಜಾಹಿದ್ದೀನ್ ನಂತಹ ಸಂಘಟನೆಗಳು ಪ್ರಯತ್ನಿಸುತ್ತಿವೆ.

ಮೇ ತಿಂಗಳಲ್ಲಿ ಪೊಲೀಸ್ ಪೇದೆ ಸೈಯೆದ್ ಮುಷ್ತಾಕ್ ಇಲಾಖೆಯನ್ನು ಬಿಟ್ಟು ಉಗ್ರರ ಜತೆ ಸೇರಿಕೊಳ್ಳುವಾಗ ತನ್ನ ಸೇವೆಗಾಗಿ ನೀಡಿದ್ದ ರೈಫಲ್ ಜತೆಗೆ ಐಎನ್ಎಸ್ಎಎಸ್ ರೈಫಲ್ ಗಳನ್ನು ತೆಗೆದುಕೊಂಡು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿಕೊಂಡಿದ್ದ. ಇದಾದ ಒಂದು ತಿಂಗಳಲ್ಲಿ ಪ್ರಾದೇಶಿಕ ಸೇನೆಯ ವ್ಯಕ್ತಿ ಸಹ ಇದೇ ರೀತಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಪ್ರಮುಖವಾಗಿ ಶಸ್ತ್ರಾಸ್ತ್ರ ಪೂರೈಕೆಯಾಗುವುದು ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನ ಗಡಿಯ ಮೂಲಕವಾಗಿ. ಈಗ ಗಡಿಯಲ್ಲಿ ಸೇನೆಯ ಕಟ್ಟೆಚ್ಚರ ಈ ಶಸ್ತ್ರಾಸ್ತ್ರ ಸರಬರಾಜಿಗೆ ದೊಡ್ಡ ಸವಾಲಾಗಿ ನಿಂತಿದೆ. ಹೀಗಾಗಿ ಈ ಸಂಘಟನೆಗೆ ಅಗತ್ಯ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿಲ್ಲ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

Leave a Reply