ಕೇಜ್ರಿವಾಲ್ ಪರ ಚಿದಂಬರಂ ವಕಾಲತ್ತು, ಕೇಂದ್ರದ ವಿರುದ್ಧ ಹೊರಾಟಕ್ಕೆ ಘಟಾನುಘಟಿಗಳ ನಿಯೋಜನೆ

ಡಿಜಿಟಲ್ ಕನ್ನಡ ಟೀಮ್:

ದೆಹಲಿಯ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಪ್ರಮುಖರು ಎಂಬ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೊಸ ಕಾನೂನು ಸಮರ ಆರಂಭಿಸಲು ಸಿದ್ಧವಾಗಿದೆ. ಈ ಹೋರಾಟದಲ್ಲಿ ಕೇಂದ್ರವನ್ನು ಮಣಿಸಲು ಕೇಜ್ರಿವಾಲರ ಪರವಾಗಿ ಘಟಾನುಘಟಿ ವಕೀಲರ ತಂಡವೇ ಕಣಕ್ಕಿಳಿಯುತ್ತಿದ್ದು, ಆ ಪೈಕಿ ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮುಖ್ಯಮಂತ್ರಿ ಕೇಜ್ರಿವಾಲರಿಗೂ ದೆಹಲಿ ಲೆ.ಗವರ್ನರ್ ನಡುವೆ ಭಿನ್ನಾಭಿಪ್ರಾಯ ಇಂದು ನಿನ್ನೆ ಉದ್ಭವಿಸಿದ ಸಮಸ್ಯೆಯಲ್ಲ. ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಈ ಬಿಕ್ಕಟ್ಟು ಸಾಗುತ್ತಲೇ ಬಂದಿದೆ. ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠದ ಮುಂದೆ ಈ ವಿಚಾರಣೆ ನಡೆಯಲಿದ್ದು, ದೆಹಲಿ ಸರ್ಕಾರದ ಪರವಾಗಿ ಒಂಬತ್ತು ನ್ಯಾಯವಾದಿಗಳ ತಂಡ ವಾದ ಮಂಡಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿದಂಬರಂ, ‘ನಮ್ಮ ಸಂವಿಧಾನದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಸರ್ವೋಚ್ಚ ಎಂದು ಪರಿಗಣಿಸಲಾಗಿಲ್ಲ. ಅಲ್ಲದೆ ಕೇಂದ್ರಾಡಳಿತ ಪ್ರದೇಶವಾದ ದೆಹಲಿ ಸರ್ಕಾರ ಅಧಿಕಾರವಿಲ್ಲದ ಸಂಸ್ಥೆ ಎಂದು ಹೇಳಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿದಂಬರಂ ಅವರು ಸಚಿವರಾಗಿದ್ದಾಗ ಕೇಜ್ರಿವಾಲರೇ ಟೀಕೆ ಮಾಡಿದ್ದರು. ಈಗ ವಕಾಲತ್ತಿಗೆ ಅವರನ್ನೇ ನೇಮಿಸಲಾಗುತ್ತಿರುವುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರದ ವಕ್ತಾರ, ‘ಪಿ.ಚಿದಂಬರಂ ಅವರು ದೆಹಲಿ ಸರ್ಕಾರ ಹಾಗೂ ಕೇಂದ್ರದ ನಡುವಣ ಸಮಸ್ಯೆಯನ್ನು ತೀರಾ ಹತ್ತಿರದಿಂದ ನೋಡಿದ್ದು, ಅವರೊಬ್ಬ ವೃತ್ತಿಪರ ವಕೀಲರು. ಹೀಗಾಗಿ ಅವರನ್ನು ದೆಹಲಿ ಸರ್ಕಾರ ಪರವಾಗಿ ವಾದ ಮಂಡಿಸಲು ನೇಮಿಸಲಾಗಿದೆ’ ಎಂದಿದ್ದಾರೆ.

ಅತ್ತ ಚಿದಂಬರಂ ಹಾಗೂ ಅವರ ಪುತ್ರನ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದ್ದು, ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೇ ಎಂಬುದು ಚಿದಂಬರಂ ಅವರ ವಾದ. ಹೀಗಾಗಿ ಕೇಂದ್ರದ ವಿರುದ್ಧ ಕಾನೂನು ಸಮರದಲ್ಲಿ ಕೇಜ್ರಿವಾಲರಿಗೆ ಸಾರಥಿಯಾಗಲು ಚಿದಂಬರಂ ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply