ಭಾರತದ ವಿಚಾರದಲ್ಲಿ ಮಗು ಚಿವುಟಿ ತೊಟ್ಟಿಲು ತೂಗೋ ತಂತ್ರ ಮಾಡುತ್ತಿದೆ ಚೀನಾ

ಡಿಜಿಟಲ್ ಕನ್ನಡ ಟೀಮ್:

ನಮ್ಮಲ್ಲಿ ‘ಮಗು ಚಿವುಟಿ ತೊಟ್ಟಿಲು ತೂಗೋದು’ ಎಂಬ ಗಾದೆ ಮಾತಿದೆ. ಸದ್ಯ ಈ ಗಾದೆ ಮಾತು ಭಾರತದ ವಿಚಾರದಲ್ಲಿ ಚೀನಾದ ನಿಲುವಿಗೆ ಹೇಳಿ ಮಾಡಿಸಿದಂತಿದೆ. ಹೌದು, ಮೊನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಗುಂಪಿಗೆ ಸೇರಿಸುವ ಪ್ರಕ್ರಿಯೆಯನ್ನು ತಡೆ ಪರೋಕ್ಷವಾಗಿ ಭಾರತಕ್ಕೆ ಹಿನ್ನಡೆಯುಂಟು ಮಾಡಿರುವ ಚೀನಾ ಇಂದು ‘ಚೀನಾ ಪಾಲಿಗೆ ಭಾರತ ಅತ್ಯಂತ ಪ್ರಮುಖ ನೆರೆ ರಾಷ್ಟ್ರ. ಅದರೊಂದಿಗೆ ಉತ್ತಮ ಸಂಬಂಧ ಹೊಂದುತ್ತೇವೆ’ ಎಂದು ಹೇಳುತ್ತಿದೆ.

ಪಾಕಿಸ್ತಾನದ ಜೈಷ್ ಇ ಮೊಹಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕು ಎಂಬುದು ಭಾರತದ ಅನೇಕ ವರ್ಷಗಳ ಪ್ರಯತ್ನ. ಇದಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಿರುವ ಚೀನಾ, ಪಾಕಿಸ್ತಾನ ಜತೆಗೂಡಿ ಮಸೂದ್ ಅಜರ್ ರಕ್ಷಣೆಗೆ ನಿಂತಿದೆ. ಹೀಗೆ ಭಾರತದ ಪ್ರಯತ್ನಕ್ಕೆ ಕಲ್ಲು ಹಾಕುತ್ತಿರುವ ಚೀನಾ, ಸ್ನೇಹ ಸಂಬಂಧದ ಮಾತುಗಳನ್ನಾಡುತ್ತಾ ಮೂಗಿಗೆ ತುಪ್ಪ ಸವರಲು ಪ್ರಯತ್ನಿಸುತ್ತಿದೆ.

ಶುಕ್ರವಾರ ಭಾರತದ ಜತೆಗಿನ ಸಂಬಂಧದ ಕುರಿತಾಗಿ ಮಾತನಾಡಿರುವ ಚೀನಾ ವಿದೇಶಾಂಗ ಸಹಾಯಕ ಸಚಿವ ಚೆನ್ ಕ್ಸಿಯಾಡಂಗ್ ಹೇಳಿರುವುದಿಷ್ಟು… ‘ಚೀನಾ ಪಾಲಿಗೆ ಭಾರತ ಅತ್ಯುತ್ತಮ ನೆರೆ ರಾಷ್ಟ್ರ. ಹೀಗಾಗಿ ಭಾರತದ ಜತೆಗಿನ ಸಂಬಂಧ ವೃದ್ಧಿಗೆ ಚೀನಾ ಎದುರುನೋಡುತ್ತಿದೆ. ಭಾರತದ ಜತೆ ಕೈ ಜೋಡಿಸಿ ಕೆಲಸ ಮಾಡಿ ಹೊಸ ಅಧ್ಯಾಯ ಬರೆಯಲು ಚೀನಾ ಸಿದ್ಧವಿದೆ.’

ಹೀಗೆ ಭಾರತದ ವಿಚಾರವಾಗಿ ಮಾತುಗಳಿಂದಲೇ ಮುತ್ತುಗಳನ್ನು ಉದುರಿಸುತ್ತಿರುವ ಚೀನಾ, ಮತ್ತೊಂದೆಡೆ ಮಸೂದ್ ಅಜರ್ ವಿಚಾರದಲ್ಲಿ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಭಾರತದ ಪ್ರಯತ್ನವನ್ನು ತಡೆಯುತ್ತಿದೆ. ಇದರೊಂದಿಗೆ ಚೀನಾದ ಶಕುನಿ ನಡೆ ಬಟಾಬಯಲಾಗಿದೆ.

Leave a Reply