ಇಂಡಿಗೋ ಏರ್ ಲೈನ್ಸ್ ನಲ್ಲಿ ಪಿ.ವಿ ಸಿಂಧುವಿಗೆ ಕಿರುಕುಳ, ಟ್ವಿಟರ್ ನಲ್ಲಿ ಒಲಿಂಪಿಕ್ಸ್ ತಾರೆ ಹೇಳಿಕೊಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಇಂದು ತಮ್ಮ ಟ್ವೀಟರ್ ಮೂಲಕ ಇಂಡಿಗೋ ಏರ್ ಲೈನ್ಸ್ ನಲ್ಲಿ ತಾವು ಅನುಭವಿಸಿದ ಕೆಟ್ಟ ಅನುಭವ ಹಾಗೂ ಸಿಬ್ಬಂದಿ ವಿರುದ್ಧದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಗೋ 6ಇ 608 ವಿಮಾನದಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ ಸಿಂಧು ಇಂಡಿಗೋ ಏರ್ ಲೈನ್ಸ್ ಅಧಿಕಾರಿಯೊಬ್ಬರು ತಮ್ಮ ವಿರುದ್ಧ ಕೆಟ್ಟದಾಗಿ ಹಾಗೂ ಒರಟಾಗಿ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸರಣಿ ಟ್ವೀಟ್ ಗಳ ಮೂಲಕ ಸಿಂಧು ತಮಗಾದ ಅನುಭವವನ್ನು ಹೇಳಿಕೊಂಡಿರುವುದು ಹೀಗೆ…

‘ನವೆಂಬರ್ 4ರಂದು ಮುಂಬೈಗೆ 6ಇ 608 ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿರುವಾಗ ಇಂಡಿಗೋ ವಿಮಾನಯಾನದ ಸಿಬ್ಬಂದಿ ಅಜಿತೇಶ್ ಎಂಬಾತ ನನ್ನ ವಿರರುದ್ಧ ಅತ್ಯಂತ ಕೆಟ್ಟದಾಗಿ ಹಾಗೂ ಒರಟಾಗಿ ನಡೆದುಕೊಂಡರು. ಆಗ ಅಶಿಮಾ ಎಂಬ ಗಗನಸಖಿ ಮಧ್ಯಪ್ರವೇಶಸಿ ಆತನಿಗೆ ಪ್ರಯಾಣಿಕರ ಜತೆ ಸರಿಯಾಗಿ ವರ್ತಿಸುವಂತೆ ಸಲಹೆ ನೀಡಿದಳು. ಆದರೆ ಆತ ಆಕೆಯ ವಿರುದ್ಧವೇ ಕೂಗಾಟ ನಡೆಸಲು ಆರಂಭಿಸಿದ. ಸಿಬ್ಬಂದಿಗಳ ಈ ರೀತಿಯ ವರ್ತನೆ ಪ್ರತಿಷ್ಠಿತ ವಿಮಾನಯಾನಗಳ ಘನತೆಯನ್ನು ಹಾಳು ಮಾಡಲಿವೆ.’

ಸಿಂಧು ಅವರ ಟ್ವೀಟಿಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಅನೇಕರು ಈ ಪ್ರಕರಣವನ್ನು ಕ್ಷಮಿಸಲು ಕೋರಿದರು. ಇನ್ನು ಇಂಡಿಗೋ ಏರ್ ಲೈನ್ಸ್ ನಿಂದಲೂ ಪ್ರತಿಕ್ರಿಯೆ ಬಂದಿದ್ದು, ಈ ವಿಷಯದ ಕುರಿತಾಗಿ ಮಾತನಾಡಬೇಕು ಎಂದು ಸಿಂಧು ಅವರಲ್ಲಿ ಮನವಿ ಮಾಡಿಕೊಂಡಿದೆ.

Leave a Reply