ನಿಜಕ್ಕೂ ಪರಿವರ್ತನೆ ಆಗಬೇಕಿರುವುದು ಬಿಜೆಪಿ ನಾಯಕರಲ್ಲಿ!

ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ…

ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಹೊರಟು, ದಿಕ್ಕುತಪ್ಪಿದ ಹುಚ್ಚು ಕುದುರೆಯಂತೆ ಅಡ್ಡಾದಿಡ್ಡಿ ಅಲೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ನೋಡಿದಾಗ ಅಣ್ಣ ಬಸವಣ್ಣನವರ ಈ ವಚನ ಬೇಡವೆಂದರೂ ನೆನಪಿಗೆ ಬರುತ್ತದೆ ಮತ್ತು ಬಿಜೆಪಿ ನಾಯಕರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ. ಪರಿವರ್ತನೆ ಆಗಬೇಕಿರುವುದು ಜನರಲ್ಲಿ ಅಲ್ಲ, ಅವರಲ್ಲಿ ಅರಿವು ಮೂಡಿಸುತ್ತೇವೆ ಎಂದು ಹೊರಟಿರುವ ಬಿಜೆಪಿಯ ಅರಿವುಗೇಡಿ ನಾಯಕರಲ್ಲಿ ಎಂಬುದನ್ನು ಢಾಳಾಗಿ ಸಾರುತ್ತಿದೆ.

ಇನ್ನೊಬ್ಬರು ಸರಿಯಿಲ್ಲ ಎಂದು ಹೇಳಬೇಕಾದರೆ ಮೊದಲು ಅದನ್ನು ಹೇಳುವವನು ಸರಿಯಿರಬೇಕು. ಅವನು ಸರಿಯಿದ್ದರೆ ಮಾತ್ರ ಬೇರೆಯವರಿಗೆ ಬೋಧನೆ ಮಾಡುವ ಅರ್ಹತೆ ಪಡೆಯುತ್ತಾನೆ. ಅವನಿಗೆ ಅರಿವು ಇದ್ದರೆ ಬೇರೆಯವರಿಗೆ ಅದನ್ನು ಧಾರೆ ಎರೆಯಬಹುದು. ಇಲ್ಲದಿದ್ದರೆ ಅವನ ಬೋಧನೆ ಅನ್ಯರಿಗೆ ಪುಕ್ಕಟೆ ಮನರಂಜನೆ. ಇವತ್ತು ಬಿಜೆಪಿ ನಾಯಕರ ಪರಿಸ್ಥಿತಿ ಇದೇ ಆಗಿದೆ. ತಾವೇನು ಮಾಡುತ್ತಿದ್ದೇವೆ ಎಂಬುದರ ಸ್ಪಷ್ಟ ಕಲ್ಪನೆಯೇ ಅವರಿಗೆ ಇಲ್ಲ. ಸಿದ್ದರಾಮಯ್ಯ ಸರಕಾರದ ತೂಕ ಅಳೆಯಲು ಹೊರಟಿರುವ ಈ ನಾಯಕರಿಗೆ ತಮ್ಮ ಕೈಯಲ್ಲಿರುವುದು ತಳವಿಲ್ಲದ ಕೊಳಗ ಎಂಬುದೇ ಮರೆತು ಹೋಗಿದೆ. ಹೀಗಾಗಿ ಅವರು ಅಳೆದಷ್ಟು ಬಿಜೆಪಿ ಮರ್ಯಾದೆಯೇ ಕಳೆದು ಹೋಗುತ್ತಿದೆ.

ನಿಜ, ಸಿದ್ದರಾಮಯ್ಯ ಸರಕಾರ ಕಿತ್ತೊಗೆದು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂಬ ಸಂಕಲ್ಪದೊಂದಿಗೆ ಮೂರು ದಿನಗಳ ಹಿಂದೆ ಶುರುವಾಗಿರುವ ಪರಿವರ್ತನಾ ಯಾತ್ರೆ ಬಿಜೆಪಿಯೊಳಗೆ ಕೊತಕೊತನೆ ಕುದಿಯುತ್ತಿರುವ ಅಪರಿಮಿತ ಅಸಮಾಧಾನದ ಬುಗ್ಗೆಗೆ ಮತ್ತೊಮ್ಮೆ ನಿಲುವುಗನ್ನಡಿ ಹಿಡಿದಿದೆ. ಬೆಂಗಳೂರು ತುಮಕೂರು ರಸ್ತೆ ವಸ್ತುಪ್ರದರ್ಶನ ಮೈದಾನದಲ್ಲಿ ಮೂರು ಲಕ್ಷ ಜನರ ನಿರೀಕ್ಷೆಯೊಂದಿಗೆ ಹಮ್ಮಿಕೊಂಡಿದ್ದ ಯಾತ್ರೆ ಉದ್ಘಾಾಟನೆಗೆ ಮೂವತ್ತು ಸಾವಿರ ಜನರೂ ಬರಲಿಲ್ಲ. ರಾಜಕೀಯ ಸಮಾವೇಶಗಳಿಗೆ ಜನ ಬರುತ್ತಾರೆ ಎನ್ನುವುದಕ್ಕಿಂತ ಜನರನ್ನು ಸೇರಿಸಲಾಗುತ್ತದೆ ಎಂಬುದೇ ಸರಿ. ಎಲ್ಲ ಪಕ್ಷದವರೂ ಮಾಡುವುದು ಅದೇ ಕೆಲಸವನ್ನೇ. ಬಿಜೆಪಿ ನಾಯಕರಿಗೆ ಜನ ಸೇರಿಸೋ ಸಮಾವೇಶ ಮಾಡಿ ಅನುಭವ ಇಲ್ಲ ಎಂದೇನೂ ಇಲ್ಲ. ಆದರೆ ನಾಯಕರ ಮನಸ್ಸು ಒಂದುಗೂಡದೆ ಜನರನ್ನು ಕಲೆ ಹಾಕುವುದು ಹೇಗೆ? ನಾಯಕರ ಮಾತು ನಂಬಿ ಮೂರು ಲಕ್ಷ ಜನರ ನಿರೀಕ್ಷೆಯೊಂದಿಗೆ ಬಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಲಿ ಕುರ್ಚಿಗಳಿಗೆ ಕೈಮುಗಿದು ಮುಖ ಮುಚ್ಚಿಕೊಂಡು ದಿಲ್ಲಿಗೆ ಮರಳಿದ್ದಾರೆ. ಹಾಗೆ ಮರಳುವ ಮುನ್ನ ಇಲ್ಲಿನ್ನೂ ನಾಯಕರ ಜಗಳ ಮುಗಿದಿಲ್ಲವಾ? ಇನ್ನು ಮುಂದಾದರೂ ಒಟ್ಟಿಗೆ ಹೋಗುವುದಿಕ್ಕೆ ಆಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾಾರೆ. ರಾಜ್ಯ ಬಿಜೆಪಿಯಲ್ಲಿ ಏನಾಗುತ್ತಿದೆ ಎಂಬುದಕ್ಕೆ ಶಾ ಪ್ರಶ್ನೆಯೇ ಉತ್ತರ.

ಕಾಂಗ್ರೆಸ್ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಹೊರಟಿರುವ ಬಜೆಪಿ ವರಿಷ್ಠರಿಗೆ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಬಿಜೆಪಿ ನಾಯಕರನ್ನು ದಿಲ್ಲಿಗೆ ಕರೆಸಿ ಬುದ್ದಿ ಹೇಳಿದರು, ಅವರೇ ಕರ್ನಾಟಕಕ್ಕೆ ಬಂದು ಬುದ್ಧಿ ಹೇಳಿದರೂ ಏಕೋ, ಏನೋ ಅವರ ಚರ್ಮಕ್ಕದು ಇಳಿಯುತ್ತಿಲ್ಲ. ಕಿವಿಮಾತು ಹೇಳಿದರೂ, ಗದರಿಸಿ ಹೇಳಿದರೂ ಕೇಳುತ್ತಿಲ್ಲ. ಇಡೀ ದೇಶದಲ್ಲಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿರುವ ವರಿಷ್ಠರಿಗೆ ಕರ್ನಾಟಕದ ಲೆಕ್ಕಾಚಾರ ಕೈಗೇ ಸಿಗುತ್ತಿಲ್ಲ. ಅವರು ಏನೆಲ್ಲ ದಾಳ ಉರುಳಿಸಿದರೂ ಕಾಯಿ ಮುಂದಕ್ಕೆ ಹೋಗುತ್ತಿಲ್ಲ. ಅವರು ಕೊಟ್ಟ ಸಲಹೆ, ಸೂಚನೆಗಳು ದೂರು ಸ್ವರೂಪದಲ್ಲಿ ಮತ್ತೆ ಅವರ ಮನೆಬಾಗಿಲಿಗೇ ಬಂದು ನಿಲ್ಲುತ್ತಿವೆ. ಕರ್ನಾಟಕ ನಾಯಕರಿಗೆ ಒಬ್ಬರ ಮೇಲೊಬ್ಬರ ಮೇಲೆ ದೂರು ಹೇಳುವುದರಲ್ಲಿ ಇರುವ ಸುಖ ಪಕ್ಷ ಕಟ್ಟುವುದರಲ್ಲಿ ಕಾಣುತ್ತಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ, ಇತ್ತೀಚೆಗೆ ನಡೆದ ಮರುಚುನಾವಣೆಯಲ್ಲಿ ಒಳಜಗಳದಿಂದಾಗಿಯೇ ಹೀನಾಯ ಸೋಲು ಕಂಡಿದ್ದರೂ ಬುದ್ದಿ ಬಂದಿಲ್ಲ. ಚುನಾವಣೆ ಸಮೀಕ್ಷೆಗಳು  ಪ್ರಮುಖ ಪ್ರತಿಪಕ್ಷವಾಗಿದ್ದರೂ ಸಹಜ ಆಡಳಿತವಿರೋಧಿ ಅಲೆಯ ಎಳೆ ಹಿಡಿದುಕೊಳ್ಳಲು ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಆಡಳಿತ ಪಕ್ಷದ ಸವಾರಿಗೆ ಬಿಜೆಪಿಯೇ ಕುದುರೆ ಆಗಿ ಹೋಗಿದೆ. ಬಿಜೆಪಿ ಸರಕಾರದ ಗಣಿ ಅಕ್ರಮ, ಡಿನೋಟಿಫಿಕೇಷನ್ ಮತ್ತಿತರ ಹಗರಣಗಳನ್ನು ಹಿಡಿದುಕೊಂಡು ಆ ಪಕ್ಷದ ನಾಯಕರಿಗೆ ಪಾಠ ಕಲಿಸಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಕೊಟ್ಟ ಅನೇಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಚುನಾವಣೆ ಹೊಸ್ತಿಲಲ್ಲಿ ಆಡಳಿತ ಪಕ್ಷವೊಂದು ಎದುರಿಸಬಹುದಾದ ಸಮಸ್ಯೆಗಳಿಗೆ ಪ್ರತಿಪಕ್ಷ ಬಿಜೆಪಿ ತೆರೆದುಕೊಂಡಿರುವುದು ಅದರ ಅಂತರ್ಯುದ್ಧದ ಆಳ-ಅಗಲ ಎಷ್ಟಿದೆ ಎಂಬುದರ ಪ್ರತೀಕ.

2013 ರ ಚುನಾವಣೆ ಹೊತ್ತಿಗೆ ಒಡೆದು ಚೂರಾದ ರಾಜ್ಯ ಬಿಜೆಪಿ ನಾಯಕರ ಮನಸುಗಳು 2018 ರ ಚುನಾವಣೆ ಸಮೀಪಿಸುತ್ತಿದ್ದರೂ ಸರಿಯಾಗಿಲ್ಲ. ಸರಿ ಹೋಗುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಯಡಿಯೂರಪ್ಪ ಬಣ ಮತ್ತು ಉಳಿದವರ ಬಣ ಎಂದು ಸಮಾನಾಂತರವಾಗಿ ಎರಡು ಹೋಳಾಗಿ ಹೋಗಿದೆ. ಅವರ ಕಾಲು ಎಳೆಯಲು ಇವರು, ಇವರ ಕಾಲು ಎಳೆಯಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದೂ ಆಯಿತು, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದೂ ಆಯಿತು. ಅವರಿಗೆ ಪ್ರಬಲ ಲಿಂಗಾಯತ ಸಮುದಾಯದ ಬಲವಿದೆ. ಬಿಜೆಪಿಗೂ ಅದೇ ಶ್ರೀರಕ್ಷೆ. ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಸಿಎಂ ಉಮೇದುವಾರಿಕೆಯನ್ನು ಯಾರೂ ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಇಷ್ಟವಿರಲಿ, ಇಲ್ಲದಿರಲಿ, ವರಿಷ್ಠರು ಹೇಳಿದ ಮೇಲೆ ಅದು ಮುಗಿದು ಹೋದ ಅಧ್ಯಾಯ. ಆದರೆ ಇಷ್ಟೆಲ್ಲ ಘೋಷಣೆ ಆದ ನಂತರವೂ ಸ್ವತಃ ಯಡಿಯೂರಪ್ಪನವರಿಗೇ ಏನೋ ಒಂದು ರೀತಿ ಅಸಮಾಧಾನ, ಅನ್ಯ ನಾಯಕರ ಮೇಲೆ ಅನುಮಾನ. ಮುಂದಿನ ಮುಖ್ಯಮಂತ್ರಿ ನೀವೇ ಎಂದು ವರಿಷ್ಠರೇ ಹೇಳಿದ ಮೇಲೂ ಅಪನಂಬಿಕೆ ಸುಳಿಗೆ ಸಿಕ್ಕು ನಲುಗುತ್ತಿದ್ದಾರೆ. ವರಿಷ್ಠರು ನಂಬಿದ್ದರೂ, ಯಡಿಯೂರಪ್ಪನವರು ತಮ್ಮನ್ನು ತಾವು ನಂಬುತ್ತಿಲ್ಲ. ಅವರ ಹುಂಬತನ, ಯಾರನ್ನೂ ಗಣನೆಗೆ ತೆಗೆದು ಕೊಳ್ಳದ ಗುಣ ಗೊತ್ತಿದ್ದರೂ, ಅದರ ಸ್ವಂತ ಅನುಭವ ತಮಗೇ ಆಗಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆಸುವ ಮತ್ತೊಬ್ಬ ನಾಯಕ ಕಾಣದೇ ಎಲ್ಲ ಅಪಸವ್ಯಗಳನ್ನು ವರಿಷ್ಠರು ನುಂಗಿಕೊಂಡಿದ್ದಾರೆ. ಇಷ್ಟಾದರೂ ಯಡಿಯೂರಪ್ಪನವರಿಗೆ ಸಮಾಧಾನವಿಲ್ಲ. ಅವರು ವರಿಷ್ಠರನ್ನು ನಂಬುತ್ತಿಲ್ಲವೋ, ತಮ್ಮನ್ನು ತಾವೇ ನಂಬುತ್ತಿಲ್ಲವೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಸ್ಥಾನದ ಮೇಲೆ ಹಾರಿ ಹೋದ ಅನಂತಕುಮಾರ ಹೆಗಡೆ ಹೆಸರು ಅವರನ್ನು ವಿಚಲಿತರನ್ನಾಗಿ ಮಾಡಿಬಿಡುತ್ತದೆ. ಸಂತೋಷ್, ಈಶ್ವರಪ್ಪ, ಅನಂತಕುಮಾರ್ ದುಸ್ವಪ್ನದಂತೆ ಕಾಡುತ್ತಿರುತ್ತಾರೆ. ಅವರ ಶಕ್ತಿ, ಸಾಮರ್ಥ್ಯ ಎಲ್ಲವನ್ನೂ ಇಂಥ ಅಸ್ಪಷ್ಟ ಕಲ್ಪನೆಗಳೇ ನುಂಗಿ ಹಾಕುತ್ತಿರುವುದರಿಂದ ಯಡಿಯೂರಪ್ಪನವರ ಪ್ರಭಾವ ಮೂಲಸ್ವರೂಪದಲ್ಲಿ ಲಭ್ಯವಾಗದೆ ಬಿಜೆಪಿ ಅಕಾಲ ವೃದ್ಧಾಪ್ಯದಿಂದ ನಲುಗುತ್ತಿದೆ.

ಗೊಂದಲ, ಅಪನಂಬಿಕೆ, ಅನಗತ್ಯ ಈರ್ಷ್ಯೆಯಿಂದ ನಲುಗುತ್ತಿರುವ ಯಡಿಯೂರಪ್ಪನವರು ಶೋಭಾ ಕರಂದ್ಲಾಜೆ, ಬಿ.ಜೆ. ಪುಟ್ಟಸ್ವಾಮಿ ಅವರಂಥ ಒಂದಿಬ್ಬರು ನಾಯಕರನ್ನು ಬಿಟ್ಟರೆ ಬೇರಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಡಿಯೂರಪ್ಪ ನಂಬುವ ನಾಯಕರು ಅನ್ಯನಾಯಕರಿಗೆ ಸಹ್ಯವಾಗುತ್ತಿಲ್ಲ. ಅವರು ತಮ್ಮನ್ನು ನಂಬದಿದ್ದರೂ ಪರವಾಗಿಲ್ಲ, ಆದರೆ ತಮಗಾಗದವರನ್ನು ನಂಬುತ್ತಿದ್ದಾರೆ ಎಂಬುದೇ ಅವರ ಸಂಕಟವನ್ನು ದುಪ್ಪಟ್ಟು ಮಾಡಿಟ್ಟಿದೆ. ಪರಿವರ್ತನಾ ಯಾತ್ರೆ ಉದ್ಘಾಟನೆ ಅಡಾಸೆದ್ದು ಹೋಗಲು ಇಂಥ ಒಣಪ್ರತಿಷ್ಠೆ ಸಮರವೇ ಪ್ರಮುಖ ಕಾರಣ. ಆರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಆಶೋಕ್‌ಗೆ ಈ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಯಡಿಯೂರಪ್ಪನವರಿಗೆ ಅದೇನೆನಿಸಿತೋ ಏನೋ ನಂತರ ಶೋಭಾ ಕರಂದ್ಲಾಜೆ ಅವರಿಗೆ ಈ ಜವಾಬ್ದಾರಿ ವಹಿಸಿಬಿಟ್ಟರು. ಬಿಜೆಪಿಯ ಉಳಿದ ನಾಯಕರಿಗೆ ಅಷ್ಟು ಸಾಕಾಯಿತು. ಅವರಿಗೆ ಯಡಿಯೂರಪ್ಪನವರ ಮೇಲೆ ಸಿಟ್ಟು ಇಲ್ಲದಿದ್ದರೂ, ಶೋಭಾ ಅವರಿಗೆ ಆದ್ಯತೆ ಕೊಡುತ್ತಾರೆ, ಎಲ್ಲದಕ್ಕೂ ಅವರ ಮಾತನ್ನೇ ಕೇಳುತ್ತಾರೆ ಎಂಬ ಕಾರಣಕ್ಕೆ ಅವರನ್ನು ಸಹಿಸಿಕೊಳ್ಳುವುದಿಲ್ಲ. ಇದು ಇವತ್ತಿನ ಸಮಸ್ಯೆಯಲ್ಲ. ಹಳೇ ರಾಗ. ಇದು ಯಡಿಯೂರಪ್ಪನವರಿಗೂ ಚೆನ್ನಾಗಿ ಗೊತ್ತು. ಆಪ್ತ ವಲಯದಲ್ಲಿ ಇರುವವರನ್ನು ಮತ್ತೆ ಆಪ್ತರು ಎಂದು ತೋರಿಸಿಕೊಳ್ಳುವ ಪ್ರಮೇಯ ಇರುವುದಿಲ್ಲ. ಅವರು ಯಾವಾಗಲೂ ಅಪ್ತರಾಗಿಯೇ ಇರುತ್ತಾರೆ. ಆದರೆ ಆ ವಲಯದಿಂದ ಹೊರಗಿರುವವರನ್ನು ಒಳಗೆ ತರುವುದು ನಾಯಕನಾದವನ ಜವಾಬ್ದಾರಿ. ಆದರೆ ಏಕೋ ಏನೋ ಯಡಿಯೂರಪ್ಪನವರಿಗೆ ಇದೇ ದೊಡ್ಡ ಸಮಸ್ಯೆ. ಯಾರಿಗೆ ಯಾರನ್ನು ಕಂಡರೆ ಆಗುವುದಿಲ್ಲವೋ ಅವರಿಗೆ ಆದ್ಯತೆ ನೀಡುವುದು, ಉಳಿದವರ ಮುನಿಸನ್ನು ಮತ್ತಷ್ಟು ಕೆರಳಿಸುವುದು ಅಭ್ಯಾಸವಾಗಿ ಹೋಗಿದೆ. ಪರಿವರ್ತನೆ ಯಾತ್ರೆ ಉದ್ಘಾಟನೆಯಲ್ಲೂ ಅದನ್ನೇ ಮಾಡಿದರು. ಯಾವಾಗ ಅವರು ಶೋಭಾ ಅವರಿಗೆ ಆದ್ಯತೆ ಕೊಟ್ಟರೋ ಉಳಿದವರು ಮುಗುಮ್ಮಾದರು. ಜನರನ್ನು ಕರೆತರುವ ಕಾಯಕಕ್ಕೆ ವಿದಾಯ ಹೇಳಿದರು. ಇವರು ಯಾವ ಪರಿವರ್ತನೆಯನ್ನಾದರೂ ತರಲಿ, ಅದ್ಯಾವ ಜಾಗೃತಿಯನ್ನಾದರೂ ಮೂಡಿಸಲಿ ಜನ ಸ್ವಂತಬುದ್ಧಿ, ಆಸ್ಥೆಯಿಂದ ಕಾರ್ಯಕ್ರಮ, ಸಮಾವೇಶಕ್ಕೆ ಬರುವ ಕಾಲ ಹೋಗಿ ಬಹಳ ಸಮಯ ಸಂದಿದೆ. ಅವರನ್ನು ಕರೆದುಕೊಂಡು ಬಂದೇ ಯಶಸ್ಸು ತೋರಿಸಿಕೊಳ್ಳಬೇಕು. ನಾಯಕರು ಉಲ್ಟಾ ಹೊಡೆದರು. ಜನ ಬರದೆ ಸಮಾವೇಶ ಮಗುಚಿ ಬಿತ್ತು. ದೇಶದ ರಾಜಕಾರಣವೇ ಒಂದಾದರೆ ಕರ್ನಾಟಕದ ರಾಜಕಾರಣವೇ ಬೇರೆ ಎಂದು ಅಮಿತ್ ಶಾ ಅವರಿಗೆ ಮತ್ತೊಮ್ಮೆ ಜ್ಞಾನೋದಯವಾಯ್ತು!

ಏನೆಲ್ಲ ಮಾಡಿದರೂ ಕರ್ನಾಟಕದಲ್ಲಿ ಬಿಜೆಪಿಯನ್ನು ಸರಿದಾರಿಗೆ ತರಲು ಆಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬೇಜಾರೆದ್ದು ಹೋಗಿದ್ದಾರೆ. ಆಗಸ್‌ಟ್‌‌ನಲ್ಲಿ ರಾಜ್ಯಕ್ಕೆ ಬಂದು ನಾಯಕರ ಜತೆ ಸರಣಿ ಸಭೆಗಳನ್ನು ನಡೆಸಿದ ಅಮಿತ್ ಶಾ ಒಂದಷ್ಟು ಖಡಕ್ ಎಚ್ಚರಿಕೆಗಳನ್ನು ಕೊಟ್ಟು ಹೋಗಿದ್ದರು. ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಚುನಾವಣೆ ಪ್ರಚಾರ ತಂತ್ರಗಾರಿಕೆವರೆಗೂ ತಾವೇ ಜವಾಬ್ದಾರಿ ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಅವರು ಹಾಗೆ ಹೇಳಿದ್ದರ ಹಿಂದೆ ನಾಯಕರಲ್ಲಿನ ಅಸಮಾಧಾನ ಸಂಪನ್ನಗೊಂಡು, ವರಿಷ್ಠರ ನೆರಳಲ್ಲಾದರೂ ಒಟ್ಟಿಗೆ ಹೋಗಬಹುದು ಎಂಬ ನಿರೀಕ್ಷೆ ಇತ್ತು. ಹಾಗೆ ಬಂದು ಹೋಗುವಾಗ ಯಡಿಯೂರಪ್ಪನವರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಹೋಗಿದ್ದರು. ಈಶ್ವರಪ್ಪ ಸೇರಿದಂತೆ ಇತರರಿಗೂ ಸಹಕರಿಸಿಕೊಂಡು ಹೋಗುವಂತೆ ತಾಕೀತು ಮಾಡಿದ್ದರು. ಅವರು ಹಾಗೆ ಹೇಳಿ ಹೋದರು, ನರೇಂದ್ರ ಮೋದಿ ಅವರು ಮುಂದಿನ ಚುನಾವಣೆ ರಣಕಹಳೆಯನ್ನೂ ಮೊಳಗಿಸಿದರು. ಅವರ ನಂತರ ಮತ್ತೆ ಬಂದ ಅಮಿತ್ ಶಾ ಪರಿವರ್ತನೆ ಯಾತ್ರೆಗೆ ಊದಬೇಕೆಂದಿದ್ದ ಪಾಂಚಜನ್ಯಕ್ಕಿಂಥ ನಾಯಕರ ಅಪಸ್ವರವೇ ಜೋರಾಗಿ ಕೇಳಿಸಿದೆ.

ಪರಿವರ್ತನಾ ಯಾತ್ರೆ ಗೊಂದಲಗಳು ಇನ್ನೂ ನಿವಾರಣೆ ಆಗಿಲ್ಲ. ಅದು ಕಾಲಿಟ್ಟ ಜಾಗದಲ್ಲೆಲ್ಲ ಗೊಂದಲಗಳೇ ಹೊರಹೊಮ್ಮುತ್ತಿವೆ. ಸ್ಥಳೀಯ ರಾಜಕಾರಣ ಯಾತ್ರೆಯ ಉದ್ದೇಶವನ್ನೇ ನುಂಗಿ ಹಾಕುತ್ತಿದೆ. ಸೊಗಡು ಶಿವಣ್ಣ ಅವರಂಥ ಹಿರಿಯ ನಾಯಕರು ಬಹಿರಂಗವಾಗಿಯೇ ಯಡಿಯೂರಪ್ಪ ಮತ್ತು ಅವರು ಬೆಂಬಲಿತ ನಾಯಕರನ್ನು ಟೀಕಿಸುತ್ತಿದ್ದಾರೆ. ಯಾತ್ರೆಯುದ್ದಕ್ಕೂ ಸಿದ್ದರಾಮಯ್ಯ ಸರಕಾರದ ಒಂದೊಂದೇ ಹಗರಣಗಳನ್ನು ಬಿಚ್ಚಿಡುತ್ತಾ ಹೋಗುತ್ತೇವೆ ಎಂದು ಹೇಳಿದ್ದ ನಾಯಕರಿಗೆ ಇದೀಗ ತಮ್ಮ ಹುಳುಕುಗಳನ್ನು ಮುಚ್ಚಿಟ್ಟುಕೊಂಡರೆ ಸಾಕೆನ್ನುವ ಪರಿಸ್ಥಿತಿ. ಯಾತ್ರೆಗೆ ಜನ ಬರುತ್ತಿಲ್ಲ. ಅವರನ್ನು ಕರೆತರಲು ಹೂಡುತ್ತಿರುವ ಅನೇಕ ಆಟಗಳು ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಂಡು ಬಿಜೆಪಿ ನಾಯಕರ ಮರ್ಯಾದೆಯನ್ನೇ ಮತ್ತಷ್ಟು ಹರಾಜು ಹಾಕುತ್ತಿವೆ. ಒಬ್ಬ ನಾಯಕನ ಗೌರವ ಹಾಳಾದರೆ ಮತ್ತೊಬ್ಬ ನಾಯಕನಿಗೆ ಅದೊಂದು ಅಮಿತಾನಂದ ವಿಚಾರ. ಪಕ್ಷದ ಏಳ್ಗೆಯಲ್ಲಿ ತಮ್ಮ ಏಳ್ಗೆ ಇದೆ ಎಂಬುದಕ್ಕಿಂತ ಮತ್ತೊಬ್ಬನ ಏಳ್ಗೆಯಲ್ಲಿ ತಮ್ಮ ಅವನತಿ ಎಂಬ ವಿಕೃತ ಭಾವನೆಗೆ ನಾಯಕರು ತಮ್ಮನ್ನು ಅಡಿಯಾಳು ಮಾಡಿಕೊಂಡಿದ್ದಾರೆ. ಯಾತ್ರೆ ಯಶಸ್ಸಿಗೆ ಏನು ಮಾಡಬೇಕು ಎನ್ನುವುದಕ್ಕಿಂತ ಅದರ ವೈಫಲ್ಯಕ್ಕೆ ಕಾರಣರಾರು ಎನ್ನುವುದನ್ನು ದೂರುವುದರಲ್ಲೇ ಅವರ ಜವಾಬ್ದಾರಿ ಕಳೆದು ಹೋಗುತ್ತಿದೆ.

75 ದಿನ ಪೂರೈಸಬೇಕಿರುವ ಪರಿವರ್ತನಾ ಯಾತ್ರೆ ನಾಲ್ಕೈದು ದಿನ ಕಳೆಯುವ ಹೊತ್ತಿಗೆ ನಾಯಕರ ಆಸಕ್ತಿ ಆಪೋಶನ ತೆಗೆದುಕೊಂಡಿದೆ. ಪರಸ್ಪರ ಕಾಲೆಳೆಯುವುದರಲ್ಲೇ ಇರುವ ಉತ್ಸಾಹ ಯಾತ್ರೆ ಉದ್ದೇಶ ಮೇಲೆತ್ತಿಕೊಂಡು ಹೋಗುವುದರಲ್ಲಿ ಇಲ್ಲ. ನಾಯಕರ ಈ ವರ್ತನೆಯಿಂದ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ. ಅವರಲ್ಲಿ ಆಶಾಭಾವ ಮೂಡಿಸುವ ಬದ್ಧತೆ ನಾಯಕರಲ್ಲಿ ಕಾಣುತ್ತಿಲ್ಲ. ಹೀಗಾಗಿ ಈ ಯಾತ್ರೆ, ಅವಧಿ ಪೂರೈಕೆಗಷ್ಟೇ ಸೀಮಿತವಾಗುವ ಲಕ್ಷಣಗಳು ಹೆಚ್ಚಾಗಿವೆ.

ಲಗೋರಿ :  ಯಾತ್ರೆ ಮಾಡಿದವರಿಗೆಲ್ಲ ‘ಪುಣ್ಯ’ ಸಿಗಲ್ಲ!

Leave a Reply