ಚುನಾವಣಾ ರಣಕಹಳೆ ಊದಲು ಜೆಡಿಎಸ್ ಸಜ್ಜು, ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಒಪ್ಪಿಕೊಂಡ ದೊಡ್ಡ ಗೌಡ್ರು

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿಯ ಅಶ್ವಮೇಧ ಯಾಗ ಕುದುರೆಯನ್ನು ಕರ್ನಾಟಕದಲ್ಲಿ ನಾವು ಕಟ್ಟಿಹಾಕುತ್ತೇವೆ ಎಂದು ಈಗಾಗಲೇ ಸವಾಲೆಸೆದಿರುವ ಜೆಡಿಎಸ್ ಮುಂಬರುವ ಚುನಾವಣಾ ಸಮರಕ್ಕೆ ರಣ ಕಹಳೆ ಊದಲು ಸಜ್ಜಾಗಿದೆ. ಇದರ ಬೆನ್ನಲ್ಲೆ ಜೆಡಿಎಸ್ ನ ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತ ಎಂಬ ಮಾಹಿತಿಯು ಹೊರಬಿದ್ದದ್ದು ಸಾಕಷ್ಟು ಗಮನ ಸೆಳೆದಿದೆ.

ನಾಲ್ಕು ದಿನಗಳ ಹಿಂದಷ್ಟೇ ಬೆಂಗಳೂರಿನಿಂದ ಬಿಜೆಪಿ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಆರಂಭಿಸಿದೆ. ಇದರ ಬೆನ್ನಲ್ಲೇ ನಾಳೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಂಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಜೆಡಿಎಸ್ ಚುನಾವಣಾ ಯಾತ್ರೆ ‘ಕುಮಾರಪರ್ವ’ಕ್ಕೆ ನಾಳೆಯಿಂದ ಚಾಲನೆ ದೊರೆಯಲಿದೆ.

ಬಿಜೆಪಿಯ ಪರಿವರ್ತನಾ ಯಾತ್ರೆ ಈಗಾಗಲೇ ಅನೇಕ ವಿವಾದಗಳಿಂದ ಮಂಕಾಗುತ್ತಿರುವ ಸಮಯದಲ್ಲಿ ಜೆಡಿಎಸ್ ಇದರ ಲಾಭವನ್ನು ಜೆಡಿಎಸ್ ಹೇಗೆ ಪಡೆಯಲಿದೆ? ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೇಗೆ ತನ್ನ ಅಸ್ತ್ರ ಪ್ರಯೋಗಿಸಲಿದೆ? ಉತ್ತರ ಕರ್ನಾಟಕ ಭಾಗದ ಮತದಾರರನ್ನು ಸೆಳೆಯಲು ಜೆಡಿಎಸ್ ರೂಪಿಸಿರುವ ತಂತ್ರವೇನು? ಎಂಬ ಅಂಶಗಳು ಕುತೂಹಲಕ್ಕೆ ಕಾರಣವಾಗಿವೆ. ಇದರ ಮಧ್ಯೆ ಮುಖ್ಯಮಂತ್ರಿಗಳ ಕ್ಷೇತ್ರ ಚಾಂಮುಡೇಶ್ವರಿಯಿಂದ ಇಂದು ಜೆಡಿಎಸ್ ಕಾರ್ಯಕರ್ತರ ಬೈಕ್ ರ್ಯಾಲಿಗೆ ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ ಅವರು ಚಾಲನೆ ನೀಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಕುರಿತ ಕುತೂಹಲಕ್ಕೆ ತೆರೆ ಬಿದ್ದಿದ್ದು, ಪ್ರಜ್ವಲ್ ಸ್ಪರ್ಧೆಗೆ ದೇವೇಗೌಂಡರು ಒಪ್ಪಿಗೆ ನೀಡಿದ್ದಾರೆ ಎಂದು ಭವಾನಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ಬೆಲೂರಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಭವಾನಿ ರೇವಣ್ಣ ಅವರು ಹೇಳಿದಿಷ್ಟು…

‘ಪ್ರಜ್ವಲ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾನೆ. ಇಷ್ಟು ದಿನಗಳ ಕಾಲ ದೇವೇಗೌಡರು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹೀಗಾಗಿ ನಾವು ಈ ಬಗ್ಗೆ ಏನನ್ನೂ ಹೇಳಿರಲಿಲ್ಲ. ಈಗ ದೇವೇಗೌಡರು ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ. ಪ್ರಜ್ವಲ್ ಬೇಲೂರು ಅಥವಾ ರಾಜರಾಜೇಶ್ವರಿ ನಗರದಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಕ್ಷೇತ್ರದ ಆಯ್ಕೆ ಅಂತಿಮ ತೀರ್ಮಾನ ದೇವೇಗೌಡರಿಗೆ ಬಿಟ್ಟ ವಿಚಾರ. ಇನ್ನು ನನ್ನ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ ಆ ಬಗ್ಗೆ ಏನನ್ನು ಹೇಳಲಾರೆ. ಮುಂಬರುವ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. 2018ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಆ ವಿಶ್ವಸ ನಮ್ಮಲ್ಲಿದೆ.’

ಒಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬಂಪರ್ ಬೆಳೆ ಬೆಳೆಯಲು ತೆನೆ ಹೊತ್ತ ಮಹಿಳೆ ಪಕ್ಷದವರು ಸಕಲ ತಯಾರಿ ಮಾಡಿಕೊಳ್ಳುತ್ತಿರೋದು ಸ್ವಷ್ಟವಾಗಿದೆ.

Leave a Reply