‘ಮುಂದಿನ ಚುನಾವಣೆಯಲ್ಲಿ ಸಿದ್ರಾಮಯ್ಯ ನಮಗೆ ನಗಣ್ಯ’ ಚಾಂಮುಂಡೇಶ್ವರಿ ಕ್ಷೇತ್ರದಲ್ಲಿ ಗುಡುಗಿದ ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು ನಾವು ಇಲ್ಲಿಂದ ನಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆಯೇ ಹೊರತು, ಸಿದ್ದರಾಮಯ್ಯನವರ ವಿರುದ್ಧ ಸಮರಸಾರಲು ಅಲ್ಲ. ಮುಂದಿನ ಚುನಾವಣೆಯಲ್ಲಿ ಅವರು ನಮ್ಮ ಪಾಲಿಗೆ ನಗಣ್ಯ…’ ಇದು ಚಾಂಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕುಮಾರಪರ್ವ ಚುನಾವಣಾ ಯಾತ್ರೆ ಆರಂಭದ ವೇಳೆ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಗುಡುಗಿದ ರೀತಿ.

ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಷ್ಟ್ರೀಯ ಪಕ್ಷಗಲ ವಿರುದ್ಧ ರಣಕಹಳೆ ಊದಿರುವ ಜೆಡಿಎಸ್, ಇಂದಿನಿಂದ ವಿಕಾಸ ಯಾತ್ರೆ ಹಾಗೂ ಕುಮಾರ ಪರ್ವ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದೆ. ಅತ್ತ ಭ್ರಷ್ಟಾಚಾರದ ಹೆಸರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಒಬ್ಬರ ಮೇಲೊಬ್ಬರು ಕೆಸರೆರೆಚಾಟ ಮಾಡಿಕೊಳ್ಳುವಲ್ಲಿ ನಿರತರಾಗಿದ್ದರೆ. ಇತ್ತ ಕುಮಾರಸ್ವಾಮಿ ನಾಡಿನ ಜನತೆಗೆ ಅದರಲ್ಲೂ ರೈತರಿಗೆ ಜೆಡಿಎಸ್ ಹಾಗೂ ದೇವೇಗೌಡ ಕುಟುಂಬ ಏನು ಮಾಡಿದೆ ಎಂಬುದನ್ನು ಹೇಳಿಕೊಳ್ಳುತ್ತಲೇ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅವರ ಮಾತಿನ ಪ್ರಮುಖ ಅಂಶ ಹೀಗಿವೆ…

  • ಸಿದ್ದರಾಮಯ್ಯನವರು ತಾನು ಅನ್ನಭಾಗ್ಯ, ಕ್ಷೀರ ಭಾಗ್ಯ ಇತರೆ ಭಾಗ್ಯ ಕೊಟ್ಟೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವತ್ತು ಕ್ಷೀರ ಭಾಗ್ಯ ಭಾಷಣ ಮಾಡುವ ಸಿದ್ದರಾಮಯ್ಯ ರಾಜ್ಯದಲ್ಲಿ ಕ್ಷೀರ ಕ್ರಾಂತಿ ಸಾಧ್ಯವಾಗಿದ್ದು ರೇವಣ್ಣ ಅವರ ದುಡಿಮೆಯಿಂದ ಎಂಬುದನ್ನು ಮರೆತಿದ್ದಾರೆ. ಇವತ್ತು ರೈತರು ಅಲ್ಪಸ್ವಲ್ಪ ಜೀವನ ಮಾಡಲಿಕ್ಕೆ ಸಾಧ್ಯವಾಗಿರೋದು ಹಾಲಿನ ಉತ್ಪನ್ನದಿಂದ. ರೇವಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾಗ 13 ಜಿಲ್ಲೆ ಹಾಲು ಉತ್ಪಾದಕರ ಸಂಘ 13-14 ಕೋಟಿ ನಷ್ಟದಲ್ಲಿದ್ದವು. ಆದರೆ ರೇವಣ್ಣ ಕೆಎಂಎಪ್ ಅಧ್ಯಕ್ಷರಾದ ನಂತರ ₹ 4 ರಿಂದ 5 ಸಾವಿರ ಕೋಟಿ ಆಸ್ತಿ ಹೊಂದುವಂತೆ ಮಾಡಿದ್ದಾರೆ. ಈ ಸಾಧನೆಯ ಶ್ರೇಯಸ್ಸು ರೇವಣ್ಣ ಅವರಿಗೆ ಸೇರಬೇಕು. ಇದನ್ನು ನೆನೆಸಿಕೊಳ್ಳುವ ಕನಿಷ್ಠ ಸೌಜನ್ಯ ಸಿದ್ದರಾಮಯ್ಯನವರಿಗಿಲ್ಲ.
  • ಇತ್ತೀಚೆಗೆ ಬಿಜೆಪಿ ನಾಯಕರು ಸಾರ್ವಜನಿಕ ಭಾಷಣದ ವೇಳೆ ರಾಜ್ಯದ ರೈತರಿಗೆ ಗೌಡರ ಕುಟುಂಬದ ಕೊಡುಗೆ ಏನು ಎಂದು ಪ್ರಶ್ನೆ ಹಾಕಿದ್ದಾರೆ. ಆ ಪ್ರಶ್ನೆಗೆ ಇಲ್ಲಿ ನೆರೆದಿರುವ ರೈತರೇ ಉತ್ತರ ಕೊಡುತ್ತಾರೆ.
  • ಕಳೆದ 10 ವರ್ಷಗಳ ಆಡಳಿತದಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷಗಳ ನಾಯಕರು ಇವರ ಕಷ್ಟಕ್ಕೆ ಸಂಬಂದಿಸದೇ ವೈಯಕ್ತಿಕ ದಾಳಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ನಾನು ಅವರಂತೆ ವೈಯಕ್ತಿಕ ದಾಳಿಗಾಗಿ ಸಮಯ ವ್ಯಯ ಮಾಡುವುದಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರು ಐದು ವರ್ಷ ಕಾಂಗ್ರೆಸ್ ನಾಲ್ಕೂವರೆ ವರ್ಷ ಆಡಳಿತ ನಡೆಸಿದ್ದು, ಈವರೆಗೂ ಭ್ರಷ್ಟಾಚಾರದ ವಿರುದ್ಧ ಏನೂ ಮಾಡದವರು ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಏನು ಮಾಡಲು ಸಾಧ್ಯ?
  • ನಾಡಿನಲ್ಲಿ ರಾಜ್ಯದ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಮುಂಗಾರು ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಾರದಿದ್ದಾಗ ನಾಡಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ನಮ್ಮ ನಾಯಕರು ಹೋರಾಟ ಮಾಡಿದರು. ಆದರೆ ಸರ್ಕಾರ ನಮ್ಮ ಕೂಗು ಕೇಳಿಸಿಕೊಳ್ಲಿಲ್ಲ. ಈಗ ಮಳೆ ಬಂದಿದ್ದು, ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಸರ್ಕಾರ ಮೊದಲೇ ನಿರ್ಧರಿಸಿದ್ದರೆ ಮಂಡ್ಯ ಜಿಲ್ಲೆ ರೈತರು ಈ ವರ್ಷದ ಮೊದಲ ಬೆಳೆ ಬೆಳೆಯಬಹುದಿತ್ತು.
  • ನಾನು ರೈತನ ಮಗ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು, ರೈತರ ಸಮಸ್ಯೆ ಬಗ್ಗೆ ಕುಮಾರಸ್ವಾಮಿಗೇನು ಗೊತ್ತು ಅಂತಾ ಕೇಳುತ್ತಾರೆ. ನಮ್ಮ ತಂದೆತಾಯಿ ಈ ಬಗ್ಗೆ ನಮಗೆ ಎಲ್ಲ ಜ್ಞಾನ ನೀಡಿದ್ದಾರೆ. ನಾವು ಗೊಬ್ಬರ ಹೊತ್ತಿದ್ದೇವೆ ಸಿದ್ದರಾಮಯ್ಯನವರೆ. ನಿಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಜಾಹೀರಾತಿಗಾಗಿ ನೂರಾರು ಕೋಟಿ ಖರ್ಚು ಮಾಡುತ್ತೀರಿ. ವಿಧಾನಸೌಧ ವಜ್ರಮಹೋತ್ಸವ ಮಾಡಲು ಕೋಟಿಗಟ್ಟಲೆ ಖರ್ಚು ಮಾಡಲು ನಿಮ್ಮತ್ರ ದುಡ್ಡಿದೆ. ಆದರೆ ನನ್ನ ರೈತರು ಬೆಳೆ ನಷ್ಟಯಿಂದ ಸಾಯುತ್ತಿದ್ದರೆ ಅವರಿಗೆ ಪರಿಹಾರ ನೀಡಲು ನಿಮ್ಮ ಬಳಿ ದುಡ್ಡಿಲ್ಲ.
  • ರೈತರ ಸಾಲ ಮನ್ನಾ ಮಾಡಿ ಅಂತಾ ಕೇಳಿದ್ರೆ, ನೀವು ಬಿಜೆಪಿ ನಾಯಕರತ್ತ ಬೆರಳು ತೋರಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲಿ, ನಾನು ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮಾಡುತ್ತೇನೆ ಎನ್ನುತ್ತೀರಾ. ಸಾಲ ಮನ್ನಾ ರೈತರ ಸಮಸ್ಯೆಗೆ ಪರಿಹಾರವಲ್ಲ ನಿಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೆರೆ ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ನೆರವು ನೀಡುವ ಉದ್ದೇಶಕ್ಕಾದರೂ ರೈತರ ಸಾಲ ಮನ್ನಾ ಮಾಡಲೇಬೇಕು.
  • ನಾನು ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಎರಡನೇ ಜನ್ಮ ಪಡೆದಿದ್ದೇನೆ. ಜೀವನದಲ್ಲಿ ನಾನು ಎಲ್ಲವನ್ನು ಕಂಡಿದ್ದೇನೆ. ಅನುಭವಿಸಿದ್ದೇನೆ. ಹೀಗಾಗಿ ನಾನು ನನಗೋಸ್ಕರ ಬದುಕುವ ಅಗತ್ಯವಿಲ್ಲ. ನನ್ನ ಮುಂದಿನ ಬದುಕು ಕೇವಲ ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸಲು ಮಾತ್ರ ಮೀಸಲಿಡುತ್ತೇನೆ.
  • ಹತ್ತು ವರ್ಷಗಳ ಹಿಂದೆ ನಾನು ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟಿಲ್ಲ, ಮಾತಿಗೆ ತಪ್ಪಿದೆ ಎಂದು ನನಗೆ ನೀವು 10 ವರ್ಷಗಳ ಶಿಕ್ಷೆ ನೀಡಿದ್ದೀರಿ. ಆದರೆ ಯಡಿಯೂರಪ್ಪನವರು ಕೆಜೆಪಿ ಪಕ್ಷದ ಸಭೆಯಲ್ಲೇ ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ‘ಕುಮಾರಸ್ವಾಮಿ ನನಗೆ ಅಧಿಕಾರ ಕೊಟ್ಟರು ಆದರೆ ಬಿಜೆಪಿಯ ನಾಯಕರೇ ಅದಕ್ಕೆ ಅಡ್ಡಿಪಡಿಸಿದರು’ ಎಂದು ಒಪ್ಪಿಕೊಂಡಿದ್ದಾರೆ. ನಾನು ಕೊಟ್ಟ ಮಾತಿಗೆ ತಪ್ಪಿಲ್ಲ. ಆದರೂ ಶಿಕ್ಷೆ ಅನುಭವಿಸಿದ್ದೇನೆ.

Leave a Reply