ಮೋದಿಯದ್ದು ಕೀಳು ಮಟ್ಟದ ಭಾಷಣ ಎನ್ನುತ್ತಲೇ ಕೇಂದ್ರದ ವಿರುದ್ಧ ಮನ್ ಮೋಹನ್ ಸಿಂಗ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ದೇಶದೆಲ್ಲೆಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ನೋಟು ಅಮಾನ್ಯ ನಿರ್ಧಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ರತಿಷ್ಠಿತ ಗುಜರಾತ್ ಚುನಾವಣೆಗೆ ತಯಾರಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಸುರಿಮಳೆಗೈದು ಕೇಂದ್ರದ ವಿರುದ್ಧ ಅಲೆ ಎಬ್ಬಿಸಲು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಮನ ಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಅಖಾಡಕ್ಕೆ ಇಳಿಸಿದ್ದು, ಮೋದಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಗುಜರಾತಿನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಒಂದು ದಿನದ ಪ್ರಚಾರಕ್ಕಾಗಿ ಅಹಮದಾಬಾದಿಗೆ ತೆರಳಿರುವ ಮನ ಮೋಹನ್ ಸಿಂಗ್, ನೋಟು ಅಮಾನ್ಯದ ಜತೆಗೆ ಜಿಎಸ್ಟಿ ಸೇರಿದಂತೆ ಮೋದಿ ಸರ್ಕಾರದ ನಿರ್ಧಾರಗಳ ವಿರುದ್ಧ ಗುಡುಗಿದ್ದು ಹೀಗೆ…

‘ನೋಟು ಅಮಾನ್ಯ ನಿರ್ಧಾರ ಒಂದು ಸಂಘಟಿತ ದರೋಡೆಯ ಯತ್ನ. ಈ ನಿರ್ಧಾರ ತೆಗೆದುಕೊಂಡ 2016ರ ನವೆಂಬರ್ 8ರ ದಿನವನ್ನು ಕರಾಳ ದಿನ ಎಂದೇ ಪರಿಗಣಿಸಬೇಕು. ದೇಶದ ಜನರನ್ನು ಸಂಕಷ್ಟಕ್ಕೆ ನೂಕಿದ ಈ ನಿರ್ಧಾರ ಕೈಗೊಂಡು ಒಂದು ವರ್ಷ ಪೂರೈಸಿದೆ. ದೇಶದ ಶೇ.86 ರಷ್ಟು ನಗದನ್ನು ಅಮಾನ್ಯ ಮಾಡುವಂತಹ ಕೆಟ್ಟ ನಿರ್ಧಾರವನ್ನು ವಿಶ್ವದ ಯಾವುದೇ ರಾಷ್ಟ್ರವೂ ಕೈಗೊಂಡಿಲ್ಲ.

ಕೇಂದ್ರ ಸರ್ಕಾರದ ಜಿಎಸ್ಟಿ ಯಿಂದ ಗುಜರಾತಿನ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 2016-17ನೇ ಸಾಲಿನ ಮೊದಲಾರ್ಧದಲ್ಲಿ ಚೀನಾದಿಂದ ಆಮದು ಪ್ರಮಾಣದ ಮೊತ್ತ ₹ 1.96 ಲಕ್ಷ ಕೋಟಿಯಷ್ಟಿತ್ತು. 2017-18ಕ್ಕೆ ಅದು ₹ 2.41 ಲಕ್ಷ ಕೋಟಿಗೆ ಹೆಚ್ಚಿದೆ. ದೇಶದಲ್ಲಿ ತೆರಿಗೆಯ ಭೀತಿಯಿಂದ ಭಾರತೀಯ ಉದ್ದಿಮೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ.ಹೀಗಾಗಿ ಜಿಎಸ್ಟಿ ಹಾಗೂ ನೋಟು ಅಮಾನ್ಯ ನಿರ್ಧಾರ ದೇಶದ ಪಾಲಿಗೆ ದೊಡ್ಡ ಅನಾಹುತ ಎಂದು ಪರಿಗಣಿಸಬೇಕಾಗಿದೆ.

ಬುಲೆಟ್ ರೈಲನ್ನು ಪ್ರಶ್ನಿಸಿದ್ದನ್ನು ಅಭಿವೃದ್ಧಿ ವಿರೋಧಿ ನಡೆ ಎಂದು ಪರಿಗಣಿಸಲು ಸಾಧ್ಯವೇ? ಬುಲೆಟ್ ರೈಲನ್ನು ತರುವ ಬದಲಿಗೆ ಈಗಿರುವ ಬ್ರಾಡ್ ಗೇಜ್ ರೈಲು ಸಂಪರ್ಕವನ್ನೇ ಅಭಿವೃದ್ಧಿ ಪಡಿಸಬಹುದಿತ್ತಲ್ಲವೇ? ಅದು ಕೂಡ ಅಭಿವೃದ್ಧಿಯೇ ಅಲ್ಲವೇ?

ಜಿಎಸ್ಟಿ ಹಾಗೂ ನೋಟು ಅಮಾನ್ಯದಿಂದ ತೆರಿಗೆ ವಂಚನೆಯನ್ನು ತಪ್ಪಿಸಲು ಸಾಧ್ಯವಾಯಿತೇ? ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದವರ ವಿರುದ್ಧ ಮೋದಿ ಅವರು ಕೀಳು ಮಟ್ಟದ ಭಾಷಣ ಮಾಡುತ್ತಾರೆ. ಇದರಿಂದ ಎಲ್ಲರನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಾ ಕಳ್ಳರು ಹಾಗೂ ದೇಶದ್ರೋಹಿಗಳು ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ.’

1 COMMENT

Leave a Reply