ತಮಿಳುನಾಡಿನಲ್ಲಿ ಮೋದಿಯ ಗೂಗ್ಲಿಗೆ ಎಲ್ಲರೂ ಶಾಕ್!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ತಮಿಳುನಾಡು ಪ್ರವಾಸದಲ್ಲಿ ಬಿಟ್ಟಿರುವ ಗೂಗ್ಲಿ ಎಸೆತಕ್ಕೆ ಇಡೀ ರಾಜಕೀಯ ವಲಯವೇ ಹುಬ್ಬೇರುವಂತೆ ಮಾಡಿದೆ. ಎಐಎಡಿಎಂಕೆ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ಮೋದಿ ನೆರೆಯಿಂದ ತತ್ತರಿಸಿರುವ ಚೆನ್ನೈಗೆ ಸೂಕ್ತ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಅನಿರೀಕ್ಷಿತವಾಗಿ ಡಿಎಂಕೆ ಮುಖಂಡ ಎಂ.ಕರುಣಾನಿಧಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದು ಎಲ್ಲರಿಗೂ ಶಾಕ್ ಕೊಟ್ಟಿದೆ.

ಹೌದು, ಮೋದಿ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದಾರೆ. ಕೇವಲ ಭೇಟಿ ಮಾಡಿದಷ್ಟೇ ಅಲ್ಲದೆ, ನವದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬಂದು ವಿಶ್ರಾಂತಿ ಪಡೆಯುವಂತೆಯೂ ಮೋದಿ ಕರುಣಾನಿಧಿಗೆ ಆಹ್ವಾನ ನೀಡಿರೋದು ಗಮನ ಸೆಳೆದಿದೆ.

ಮೋದಿ ಅವರ ಕರುಣಾನಿಧಿ ನಿವಾಸ ಭೇಟಿಯನ್ನು ರಾಜಕೀಯವಾಗಿ ನೋಡಬಾರದು ಎಂದು ಕರುಣಾನಿಧಿ ಪುತ್ರಿ ಹಾಗೂ ರಾಜ್ಯಸಭಾ ಸಂಸದೆ ಕನಿಮೋಳಿ ಅವರು ಸ್ಪಷ್ಟನೆ ನೀಡಿದ್ದರೂ ಮೋದಿ ಅವರ ಈ ನಡೆ ರಾಜಕೀಯ ವಿಶ್ಲೇಷಣೆಗೆ ಒಳಪಡುತ್ತದೆ.

ಕಾರಣ, ಜಯಲಲಿತಾ ಸಾವಿನ ನಂತರ ತಮಿಳುನಾಡು ರಾಜಕೀಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗುವ ಸೂಚನೆ ತೋರುತ್ತಿದೆ. ಎಐಎಡಿಎಂಕೆ ಪಕ್ಷದಲ್ಲೇ ಅನೇಕ ಬದಲಾವಣೆ ಹಾಗೂ ಬೆಳವಣಿಗೆಗಳು ನಡೆದಿವೆ. ಇನ್ನು ರಾಜಕೀಯವಾಗಿ ತುಟಿ ಬಿಚ್ಚದ ಕಮಲ್ ಹಾಸನ್ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ತಮಿಳುನಾಡು ರಾಜಕೀಯ ಎಂದರೆ ಕೇವಲ ಜಯಲಲಿತಾ ವರ್ಸಸ್ ಕರುಣಾನಿಧಿ ಎಂಬ ಚಿತ್ರಣ ಈಗ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಅಧಿಕಾರ ಸಾಧಿಸಿರುವ ಬಿಜೆಪಿ ತಮ್ಮ ಯುಪಿಎ ಸರ್ಕಾರದ ಮಿತ್ರಪಕ್ಷ ಎಐಎಡಿಎಂಕೆ ಪಕ್ಷವನ್ನು ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ಈಗ ಡಿಎಂಕೆ ಪಕ್ಷವನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ಕಾಂಗ್ರೆಸಿಗೆ ಹೊಡೆತ ನೀಡುವ ಪ್ರಯತ್ನ ಮಾಡುತ್ತಿದ್ದಾರೆಯೇ ಮೋದಿ ಎಂಬ ಅನುಮಾನ ಹುಟ್ಟುಕೊಂಡಿದೆ. ಇನ್ನು ದಕ್ಷಿಣ ಭಾರತದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಲು ಬಿಜೆಪಿ ನಾಯಕರು ಸಕಲ ಪ್ರಯತ್ನ ನಡೆಸುತ್ತಿರುವಾಗ ಮೋದಿ ಅವರ ಈ ನಡೆಯನ್ನು ರಾಜಕೀಯ ಹೊರತಾಗಿ ನೋಡುವುದು ಸ್ವಲ್ಪ ಕಷ್ಟವೇ ಆಗಿದೆ.

ಇದೆಲ್ಲಕ್ಕೂ ಮುಖ್ಯವಾಗಿ ಮೋದಿ ಅವರು ನೋಟು ಅಮಾನ್ಯ ನಿರ್ಧಾರ ಕೈಗೊಂಡು ನಾಳೆಗೆ ಒಂದು ವರ್ಷ ಪೂರೈಸಲಿದೆ. ಈ ಸಂದರ್ಭದಲ್ಲಿ ಬಿಜೆಪಿಯ ನಿರ್ಧಾರವನ್ನು ಪ್ರಶ್ನಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲು ಡಿಎಂಕೆ ಪಕ್ಷ ಸಜ್ಜುಗೊಂಡಿತ್ತು. ಇಂತಹ ಸಂದರ್ಭದಲ್ಲಿ ಮೋದಿ ಅವರು ಡಿಎಂಕೆಯ ಪ್ರಮುಖ ನಾಯಕನನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.

ಮೋದಿ ಕರುಣಾನಿಧಿ ಅವರ ಮನೆಗೆ ಭೇಟಿ ನೀಡಿರೋದು ಕೇವಲ ಎಐಎಡಿಎಂಕೆ ನಾಯಕರಿಗೆ ಮಾತ್ರವಲ್ಲ ಸ್ವತಃ ಡಿಎಂಕೆ ಪಕ್ಷದ ನಾಯಕರಲ್ಲೂ ಅಚ್ಚರಿ ಮೂಡಿಸಿದೆ. ಕರುಣಾನಿಧಿ ಅವರ ಮನೆಗೆ ಭೇಟಿ ನೀಡುವ ವಿಚಾರವನ್ನು ಗೌಪ್ಯವಾಗಿ ಇಡಲಾಗಿತ್ತು. ಮೋದಿ ಅವರು ಭೇಟಿ ನೀಡುವ ಒಂದು ಗಂಟೆ ಮುನ್ನ ತಮಿಳುನಾಡು ಉಸ್ತುವಾರಿ ಹೊತ್ತಿರುವ ಮುರಳಿಧರ್ ರಾವ್ ಅವರು ಟ್ವೀಟ್ ಮಾಡಿದ ನಂತರವಷ್ಟೇ ಈ ಕುರಿತ ಮಾಹಿತಿ ಹೊರಬಿದ್ದಿತು.

ಮೋದಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ ವೇಳೆ ಅವರ ಕೈ ಹಿಡಿದು, ‘ದೆಹಲಿಯಲ್ಲಿರುವ ನನ್ನ ನಿವಾಸಕ್ಕೆ ಬಂದು ವಿಶ್ರಾಂತಿ ಪಡೆಯುತ್ತೀರಾ?’ ಎಂದು ಕೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ನಂತರ ಮೋದಿ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಹಾಗೂ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರ ಜತೆ ಕೆಲಕಾಲ ಮಾತುಕತೆ ನಡೆಸಿದರು. ಇನ್ನು ಮೋದಿ ಅವರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ಪೊನ್ ರಾಧಾಕೃಷ್ಣನ್, ಬಿಜೆಪಿ ರಾಜ್ಯಾಧ್ಯಕ್ಷ ತಮಿಳಿಸೈ ಸುಂದರಾಜನ್ ಸಾಥ್ ನೀಡಿದ್ದರು.

Leave a Reply