ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಸೇಡಿನ ರಾಜಕಾರಣ?

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದ ಕೇವಲ ಹಗರಣಗಳ ಆರೋಪ ಪ್ರತ್ಯಾರೋಪ ಮಾತ್ರ. ಈ ಹಗರಣಗಳ ಆರೋಪ ಮತ್ತು ಪ್ರತ್ಯಾರೋಪ ಈಗ ದ್ವೇಷದ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದು, ಈ ಹೋರಾಟದಲ್ಲಿ ನೇರವಾಗಿ ಮುಖಾಮುಖಿಯಾಗಿರೋದು ಬಿಜೆಪಿ ಮತ್ತು ಕಾಂಗ್ರೆಸ್.

ಸದ್ಯ ರಾಜ್ಯ ರಾಜಕಾರಣದಲ್ಲಿ ಡಿ.ಕೆ ಶಿವಕುಮಾರ್ ಮೇಲಿನ ಐಟಿ ದಾಳಿ, ಬಿಜೆಪಿ ಅಧಿಕಾರ ಅವಧಿಯಲ್ಲಿನ ಗಣಿ ಹಗರಣ ಹಾಗೂ ವಿದ್ಯುತ್ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಈ ಎಲ್ಲ ಪ್ರಕರಣಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಧಿಕಾರವನ್ನು ಬಳಸಿಕೊಂಡು ವಿವಿಧ ಸಂಸ್ಥೆಗಳ ತನಿಖೆ ಮೂಲಕ ಒಬ್ಬರು ಮತ್ತೊಬ್ಬರ ಮೇಲೆ ಒತ್ತಡ ಹೇರುತ್ತಿರುವುದು ದ್ವೇಷದ ರಾಜಕಾರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ.

ಮೋಲ್ನೋಟಕ್ಕೆ ಈ ಎಲ್ಲ ಪ್ರಕರಣಗಳು ಒಂದೇ ಸಮಯದಲ್ಲಿ ಸುದ್ದಿಯಾಗುತ್ತಿರೋದು ಕಾಕಾತಾಳಿಯ ಎಂದು ಅನಿಸಿದರೂ ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ. ಹೀಗಾಗಿ ಈ ಎಲ್ಲಾ ಬೆಳವಣಿಗೆಗಳ ಆಳಕ್ಕೆ ಇಳಿದು ನೋಡುವುದಾದರೆ ನಮಗೆ ಸಿಗುವ ಅಂಶಗಳು ಹೀಗಿವೆ.

ಚುನಾವಣೆ ಸಮಯದಲ್ಲಿ ಕಾಂಗ್ರೆಸಿಗೆ ಆರ್ಥಿಕ ಶಕ್ತಿಯಾಗಿರುವ ಡಿ.ಕೆ ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆಸುವ ಮೂಲಕ ಬಿಜೆಪಿ ದೊಡ್ಡ ಪೆಟ್ಟು ನೀಡಿತ್ತು. ನಿನ್ನೆಯಷ್ಟೇ ಐಟಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಹಾಗೂ ಅವರ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿತ್ತು. ಹೀಗೆ ವಿಚಾರಣೆ ಮೂಲಕ ಡಿ.ಕೆ ಶಿವಕುಮಾರ್ ಮೇಲೆ ತನಿಖೆ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹೇರುವುದು ಬಿಜೆಪಿಯ ತಂತ್ರವಾದರೆ.

ಇನ್ನು ಬಿಜೆಪಿಗೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಅಕ್ರಮ ಗಣಿ ಹಗರಣವನ್ನು. ಇತ್ತೀಚೆಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣ ನೀಡಿ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಬಿಟ್ಟಿತ್ತು. ಈಗ ಗಣಿ ಹಗರಣ ಪ್ರಕರಣವನ್ನು ವಿಶೇಷ ತನಿಖಾ ಸಂಸ್ಥೆಗೆ ವಹಿಸವು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಗಣಿ ದಣಿಗಳನ್ನು ನಿಯಂತ್ರಿಸುವುದು ಕಾಂಗ್ರೆಸ್ ನಾಯಕರು ಗುರಿಯಾಗಿದೆ.

ಇಲ್ಲಿ ಬಿಜೆಪಿ ಟಾರ್ಗೆಟ್ ಮಾಡಿರುವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಆರ್ಥಿಕ ಬಲವಾದರೆ, ಇತ್ತ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿರುವ ಗಣಿ ದಣಿಗಳು ಬಿಜೆಪಿಯ ಆರ್ಥಿಕ ಮೂಲ ಎಂಬುದು ಎಲ್ಲರಿಗೂ ತಿಳಿದಿರೋ ವಿಚಾರ. ಇನ್ನು ಇದರ ಜತೆಜತೆಗೆ ಬಿಜೆಪಿ ಅಧಿಕಾರದ ಸಂದರ್ಭದಲ್ಲಿ ವಿದ್ಯುತ್ ಖರೀದಿ ವಿಚಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಕುರಿತು ಜಂಟಿ ಸದನ ಸಮಿತಿ ವಿಚಾರಣೆ ನಡೆಸುತ್ತಿದ್ದು, ಇಂದು ವಿಧಾನ ಸೌಧದಲ್ಲಿ ಸಭೆ ನಡೆಸುತ್ತಿದೆ. ಈ ಸಭೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗೈರಾಗಿದ್ದು, ಇದರ ಮಧ್ಯೆಯೆ ಡಿ.ಕೆ ಶಿವಕುಮಾರ್ ಸಭೆಯನ್ನು ಮುಂದುವರಿಸಿದ್ದಾರೆ. ಈ ಪ್ರಕರಣದ ಮೂಲಕ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಮೇಲೆ ಒತ್ತಡ ಹೇರುವುದು ಪ್ರಮುಖ ಉದ್ದೇಶವಾಗಿದೆ.

ಈ ಹಗರಣಗಳ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷದ ರಾಜಕಾರಣ ಕೇವಲ ಪಕ್ಷಗಳ ಆರ್ಥಿಕ ಮೂಲಗಳಿಗೆ ಪೆಟ್ಟು ನೀಡುವುದಷ್ಟೇ ಅಲ್ಲ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಎದುರಾಳಿಗಳ ವಿರುದ್ಧ ವಾಕ್ಸಮರ ನಡೆಸಲು ಅಸ್ತ್ರ ಸಿದ್ಧಪಡಿಸಿಕೊಳ್ಳುವ ಪ್ರಯತ್ನವೂ ಆಗಿದೆ.

Leave a Reply