ಚುನಾವಣೆ ಹೊತ್ತಲ್ಲಿ ‘ಜಯಂತಿ’ಗಳ ದಾಳ ಉರುಳಿಸುತ್ತಿದೆ ಸಿದ್ದು ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿವೆ. ಈಗ ಅಧಿಕಾರದ ಗದ್ದುಗೆಯಲ್ಲಿರುವ ಕಾಂಗ್ರೆಸ್ ಸರಣಿ ಜಯಂತಿ ಆಚರಣೆ ಮೂಲಕ ತನಗೆ ಲಾಭ ತರುವ ಜಾತಿ ಸಮುದಾಯದ ಸಾಧಕರ ಜಯಂತಿ ಮಾಡಿ ತನ್ನ ರಾಜಕೀಯ ಅಸ್ತ್ರ ಪ್ರಯೋಗಿಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಈಗ ರಾಜ್ಯ ಸರ್ಕಾರ ರೆಡ್ಡಿ ಸಮುದಾಯದವರನ್ನು ಓಲೈಸಲು ವೇಮನ ಜಯಂತಿ ಆಚರಣೆಗೆ ನಿರ್ಧರಿಸಿದೆ.

ಒಂದೆಡೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ವಿವಾದದಿಂದ ಪಕ್ಷಕ್ಕಾಗುವ ನಷ್ಟವನ್ನು ಸರಿದೂಗಿಸಲು ಕಾಂಗ್ರೆಸ್ ಸರ್ಕಾರ ಈಗ ರೆಡ್ಡಿ ಸಮುದಾಯದವರನ್ನು ಸೆಳೆಯುವ ಪ್ರಯತ್ನದಲ್ಲಿದೆ. ಹೀಗಾಗಿ ಜನವರಿ 19ರಂದು ಎಲ್ಲ ತಾಲೂಕು ಜಿಲ್ಲಾಕೇಂದ್ರಗಳಲ್ಲಿ ವೇಮನ ಜಯಂತಿ ಆಚರಿಸುವಂತೆ ಸರ್ಕಾರ ನವೆಂಬರ್ 2ರಂದೇ ಸುತ್ತೋಲೆ ಹೊರಡಿಸಿದೆ.

ವೇಮನ ಎಂದೇ ಖ್ಯಾತಿ ಪಡೆದಿರುವ ಗೊನ ವೇಮ ಬುದ್ಧ ರೆಡ್ಡಿ ಅವರು ತೆಲುಗಿನ ಖ್ಯಾತ ಲೇಖಕರು. ಇವರು ರೆಡ್ಡಿ ಸಮುದಾಯದವರಾಗಿದ್ದು, ಇವರ ಜಯಂತಿ ಆಚರಣೆಯ ಮೂಲಕ ಉತ್ತರ ಕರ್ನಾಟಕ ಹೈದರಾಬಾದ್ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ರೆಡ್ಡಿ ಸಮುದಾಯದವರನ್ನು ತಮ್ಮತ್ತ ಸೆಳೆಯಲು ಸರ್ಕಾರ ಈ ಪ್ರಯತ್ನ ನಡೆಸಿದೆ. ಇತ್ತೀಚೆಗಷ್ಟೇ ಹೇಮರೆಡ್ಡಿ ಮಲ್ಲಮ ಅವರ ಜಯಂತಿ ಆಚರಿಸಿದ್ದ ರಾಜ್ಯ ಸರ್ಕಾರ ಅದಾಗಲೇ ರೆಡ್ಡಿ ಸಮುದಾಯದವರನ್ನು ಸೆಳೆಯುವ ಯತ್ನ ಮಾಡಿದೆ. ಈಗ ವೇಮನ ಅವರ ಜಯಂತಿ ಆಚರಣೆ ಮಾಡುವ ಮೂಲಕ ಟಿಪ್ಪು ಜಯಂತಿ ವಿವಾದ ಮರೆಮಾಚುವ ಹಾಗೂ ಮತ ಬ್ಯಾಂಕ್ ಸೆಳೆಯುವ ಲೆಕ್ಕಾಚಾರ ಹಾಕಿದೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟು 18 ವಿವಿಧ ಜಯಂತಿಗಳ ಆಚರಣೆ ಆರಂಭವಾಗಿದ್ದು, ಇದರಿಂದ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಜಯಂತಿ ಅಸ್ತ್ರವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಿದೆ ಎಂಬುದಕ್ಕೆ ಸಾಕ್ಷಿ.

ಟಿಪ್ಪು ಜಯಂತಿ ಆಚರಣೆ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ರಾಜ್ಯ ಸರ್ಕಾರದ ವಾದಕ್ಕೆ ಅನೇಕರು ರಾಜ್ಯದಲ್ಲಿ ಬೇರೆ ಯಾವುದೇ ಸ್ವತಂತ್ರ ಹೋರಾಟಗಾರರಿಲ್ಲವೇ? ಅವರ ಆಚರಣೆ ಬಿಟ್ಟು ಕೇವಲ ಟಿಪ್ಪು ಜಯಂತಿಯೇ ಏಕೆ? ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಿಸಬಹುದಲ್ಲವೇ? ಎಂಬ ಪ್ರಶ್ನೆಗಳನ್ನು ಹಾಕಲಾಗಿತ್ತು. ಇದರಿಂದ ಸರ್ಕಾರ ಸಹಜವಾಗಿಯೇ ಒತ್ತಡಕ್ಕೆ ಸಿಲುಕಿತ್ತು. ಬೀಸೋ ದೊಣ್ಣೆಯಿಂದ ತಪ್ಪಿಸಕೊಂಡರೆ ಸಾವಿರ ವರುಷ ಆಯಸ್ಸು ಎಂಬಂತೆ ಟಿಪ್ಪು ಜಯಂತಿಯ ವಿವಾದವನ್ನು ಸದ್ಯಕ್ಕೆ ಮರೆಸುವ ತವಕದಲ್ಲಿದೆ. ಇದರಿಂದ ಆಗಬಹುದಾದ ನಷ್ಟ ಸರಿದೂಗಿಸಿಕೊಳ್ಳಲು ಕಾಂಗ್ರೆಸ್ ರೆಡ್ಡಿ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.

Leave a Reply