ಬಿಜೆಪಿ- ಜೆಡಿಎಸ್ ಗೆ ಪೈಪೋಟಿ ನೀಡಲು ಕಾಂಗ್ರೆಸ್ ಮಾಡಲಿದೆ ಎರಡು ಯಾತ್ರೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಯಾತ್ರೆಗಳ ಮೂಲಕ ರಾಜ್ಯದ 224 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ಎರಡು ಪಕ್ಷಗಳ ಯಾತ್ರೆಗೆ ಸಡ್ಡು ಹೊಡೆಯಲು ಕಾಂಗ್ರೆಸ್ ಪಕ್ಷ ಎರಡು ಯಾತ್ರೆ ಆರಂಭಿಸಲು ನಿರ್ಧರಿಸಿದೆ.

ಬಿಜೆಪಿ ನವ ಕರ್ನಾಟಕ ನಿರ್ಮಾಣ ಪರಿವರ್ತನೆ ಯಾತ್ರೆ ಆರಂಭಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದರೆ ಅತ್ತ ಜೆಡಿಎಸ್ ಕುಮಾರ ಪರ್ವ ಯಾತ್ರೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಎರಡು ಪಕ್ಷಗಳ ಯಾತ್ರೆಗಳು ಹಾಗೂ ಟೀಕೆಗಳನ್ನು ಗಮನಿಸುತ್ತಿರುವ ಕಾಂಗ್ರೆಸ್ ನಿಧಾನವಾಗಿ ಯಾತ್ರೆ ಆರಂಭಿಸಿ ಎರಡೂ ಪಕ್ಷಗಳಿಗೆ ಉತ್ತರಿಸಲು ಎದುರು ನೋಡುತ್ತಿದೆ. ಅಂದಹಾಗೆ ಕಾಂಗ್ರೆಸ್ ನಿರ್ಧರಿಸಿರುವ ಎರಡು ಯಾತ್ರೆಗಳ ಪೈಕಿ ಒಂದು ಯಾತ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದರೆ, ಮತ್ತೊಂದು ಯಾತ್ರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಯಲಿದೆ.

ಡಿಸೆಂಬರ್ 15ರಿಂದ ಜನವರಿ 15ರವರೆಗೂ ಒಂದು ತಿಂಗಳ ಕಾಲ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೊದಲ ಹಂತದ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಸಿದ್ದರಾಮಯ್ಯನವರು ತಮ್ಮ ನಾಲ್ಕೂವರೆ ವರ್ಷಗಳ ಆಡಳಿತ ಅವದಿಯಲ್ಲಿ ಮಾಡಿದ ಸಾಧನೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆ. ಇನ್ನು ಎರಡನೇ ಹಂತದ ಯಾತ್ರೆ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಮಾರ್ಚ್ 13ರಿಂದ ಆರಂಭವಾಗಲಿದೆ. ಇಲ್ಲಿ ಪ್ರತಿಪಕ್ಷಗಳ ದಾಳಿಗೆ ಪ್ರತಿದಾಳಿ ನಡೆಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿಕೊಂಡಿದೆ.

ಮೊದಲ ಹಂತದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸುವುದು ಆನಂತರ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮೇಲೆ ಟೀಕಾ ಪ್ರಹಾರ ನಡೆಸಿ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ಜನರನ್ನು ತಮ್ಮತ್ತ ಸೆಳೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ತಂತ್ರವಾಗಿದೆ.

Leave a Reply