ವ್ಯಂಗ್ಯವಾಡಿದ ಸಿದ್ರಾಮಯ್ಯಗೆ ಮಾತಿನ ಮೂಲಕವೇ ಬಿಸಿ ಮುಟ್ಟಿಸಿದ್ರು ದೇವೇಗೌಡ್ರು- ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕೀಯದಲ್ಲಿ ಇನ್ನೇನಿದ್ದರು ವಾಗ್ವಾದ, ವಾಕ್ಸಮರಗಳದ್ದೇ ಕಾರುಬಾರು. ಚುನಾವಣೆಯ ಕಾವು ಏರುತ್ತಿದ್ದಂತೆ ನಾಯಕರ ವಾದ ಪ್ರತಿವಾದವೂ ಹಂತಹಂತವಾಗಿ ತೀವ್ರತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ ನಡುವಣ ಪರಸ್ಪರ ಟೀಕಾ ಪ್ರಹಾರವೇ ಸಾಕ್ಷಿ.

‘ದೇವೇಗೌಡರು ರಾಜ್ಯದ ವಿಕಾಸ ಮಾಡಿಲ್ಲವೇ’ ಎಂದು ಸಿದ್ದರಾಮಯ್ಯನವರು ಗೌಡರು ರಾಜ್ಯಕ್ಕೆ ನೀಡಿದ ಕೊಡುಗೆ ಕುರಿತು ವ್ಯಂಗ್ಯವಾಗಿ ಪ್ರಶ್ನಿಸಿದ್ದರು. ಇದಕ್ಕೆ ದೇವೇಗೌಡರು ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯನವರಿಗೆ ಮಾತಿನ ಮೂಲಕವೇ ಬಿಸಿ ಮುಟ್ಟಿಸಿದ್ದಾರೆ. ಹಾಸನದ ಅರಸೀಕೆರೆಯಲ್ಲಿ ದೇವೇಗೌಡ್ರು ಸಿದ್ದರಾಮಯ್ಯನವರಿಗೆ ಕೊಟ್ಟ ತಿರುಗೇಟು ಹೀಗಿದೆ…

‘ಸಿದ್ದರಾಮಯ್ಯನವರು ಮಾತಿನಲ್ಲಿ ಹಿಡಿತ ಹೊಂದಬೇಕು. ನಾನು ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದೆ ಎಂದು ಅವರೇ ನೆನಪಿಸಿಕೊಳ್ಳಲಿ. ಬೆಂಗಳೂರಿಗೆ ಐಟಿ, ಹಾರ್ಡ್ವೇರ್, ಕೈಗಾರಿಕೆಯ ಶಕ್ತಿ ತುಂಬಿದ್ದು ಯಾರು? ಎಂದುದನ್ನು ತಿಳಿದುಕೊಳ್ಳಲಿ. ಈಗ ಈರೀತಿಯಾಗಿ ಮಾತನಾಡಲು ಸಿದ್ರಾಮಯ್ಯನವರಿಗೆ ನಾಚಿಕೆಯಾಗಲ್ವೇ? ನಾನು ಈವರೆಗೂ ಯಾರ ಬಗ್ಗೆಯೂ ಅಗೌರವವಾಗಿ ಮಾತನಾಡಿಲ್ಲ. ಹೀಗಾಗಿ ಅವರು ನನ್ನ ಕೆಣಕೋದು ಬೇಡ.

ನಾನು ಫೌಂಡೇಶನ್ ಹಾಕಿದ ಕೃಷ್ಣಾ ಯೋಜನೆ ಬಳಕೆ ಮಾಡಿಯೇ ಇಲ್ಲ. ಇಂತಹವರು ವಿಕಾಸದ ಬಗ್ಗೆ ವ್ಯಂಗ್ಯ ಮಾಡುತ್ತಾರಾ? ಕುಮಾರಸ್ವಾಮಿಯವರು ಹಣಕೊಟ್ಟು ಜನ ಸೇರಿಸುತ್ತಾರೆ ಎಂದಿದ್ದಾರೆ. ಇದು ಅಹಿಂದ ರಾಜಕೀಯ ಅಲ್ಲಸ್ವಾಮಿ. ಕುಮಾರಸ್ವಾಮಿಯವರು ಯಾರನ್ನು ದುಡ್ಡುಕೊಟ್ಟಿ ಕರೆಸಿಲ್ಲ. ಅವರು ಮಾಡಿದಂತಹ ಒಂದು ಕಾರ್ಯಕ್ರಮ ನೀವು ಮಾಡಿ ನೋಡೋಣ. ಕುಮಾರಸ್ವಾಮಿಯ ಶಕ್ತಿ ಏನು ಅಂತಾ ಗೊತ್ತಾಗುತ್ತದೆ. ಕುಮಾರಸ್ವಾಮಿ ಒಬ್ಬ ರೈತನ ಮಗ. ರೈತರೇ ಅವರ ಶಕ್ತಿ. ನಿಮ್ಮ ಹಣದ ಧಿಮಾಕಿಗೆ ಜನರೇ ಉತ್ತರ ನೀಡಲಿದ್ದಾರೆ.

ಸಿದ್ದರಾಮಯ್ಯನವರ ಈ ವ್ಯಂಗ್ಯದ ಮಾತು ನನಗೆ ಹೇಸಿಗೆ ತರಿಸಿದೆ. ನಮ್ಮ ಕೆಲಸ ನೋಡಿ ನಿಮಗೆ ತಡೆದುಕೊಳ್ಳಲು ಆಗದಿದ್ದರೆ ಸುಮ್ಮನಿದ್ದು ಬಿಡಿ. ನಾನು ಇಡೀ ರಾಜ್ಯ ಸುತ್ತಿ ರಾಜಕೀಯ ಮಾಡಿದ್ದೇನೆ. ನನ್ನ ಹೆಸರು ಹೇಳಿ ಯಾವುದೇ ಬಿರುದು ಕೊಡೋದು ಬೇಕಿಲ್ಲ.’

ದೇವೇಗೌಡರ ಈ ಮಾತಿನ ಏಟಿನ ಜತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಸಿದ್ರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಶಿವಮೊಗ್ಗದಲ್ಲಿ ಕುಮಾರಪರ್ವ ಚುನಾವಣಾ ಪ್ರಚಾರ ಯಾತ್ರೆ ವೇಳೆ ಮಾತನಾಡಿರುವ ಕುಮಾರಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ…

‘ಕಾಂಗ್ರೆಸ್ ನಾಯಕರು ಬೇನಾಮಿ ಖಾತೆಗಳಿಗೆ ಸರ್ಕಾರದ ಹಣ ವರ್ಗಾವಣೆ ಮೂಲಕ ಲೂಟಿ ಮಾಡಿ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವರೊಂದಿಗೆ ಚೆಲ್ಲಾಟವಾಡುತ್ತಿದೆ. ಮೆಕ್ಕೆಜೋಳಕ್ಕೆ ಹಾನಿಯಾಗಿ ರೈತರು ಕಂಗಾಲಾಗಿದ್ದರೆ ಸರ್ಕಾರ ಅವರ ನೆರವಿಗೆ ಬಂದಿಲ್ಲ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದ್ರೆ ಸಾಲದ ಹಣ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲ. ಮುಂದಿನ ಸರ್ಕಾರಕ್ಕೆ ಇದರ ಹೊರೆ ಹೊರಿಸಲಿದ್ದಾರೆ. ಕೇಂದ್ರ ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವಂತೆ ರಾಜ್ಯ ಸರ್ಕಾರ ಸಿಐಡಿ ಮತ್ತು ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿಗಳಿಗೆ ಕನಿಷ್ಠ ಜ್ಞಾನವೂ ಇಲ್ಲ. ಅವರ ನಾಲ್ಕು ವರ್ಷಗಳ ಸಾಧನೆ ಎಂದರೆ ಅದು ಕೇವಲ ಪತ್ರಿಕೆಗಳಿಗೆ ಜಾಹೀರಾತು ನೀಡಿದಷ್ಟೇ.’

Leave a Reply