23ನೇ ಜಿಎಸ್ಟಿ ಸಮಿತಿ ಸಭೆ: ಇನ್ನೂರಕ್ಕೂ ಹೆಚ್ಚಿನ ಸರಕು ಮೇಲಿನ ಸುಂಕ ದರ ಇಳಿಕೆ

ಡಿಜಿಟಲ್ ಕನ್ನಡ ಟೀಮ್:

ಜಿಎಸ್ಟಿ ಜಾರಿಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚಿದೆ ಎಂಬ ಟೀಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಂದು ನಡೆದ ಜಿಎಸ್ಟಿ ಸಮಿತಿ ಸಭೆಯಲ್ಲಿ 200ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ ಸುಂಕ ದರವನ್ನು ಇಳಿಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ 170ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ ಸುಂಕ ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗಿದೆ.

ಜಿಎಸ್ಟಿ ಜಾರಿಯಾದ ಸಂದರ್ಭದಲ್ಲಿ ಒಟ್ಟು 227 ವಸ್ತುಗಳ ಮೇಲೆ ಶೇ.28ರಷ್ಟು ಸುಂಕ ವಿಧಿಸಲಾಗಿತ್ತು. ಈಗ ಈ ವರ್ಗದಲ್ಲಿ ಬರುವ 170ಕ್ಕೂ ಹೆಚ್ಚು ವಸ್ತುಗಳ ಮೇಲಿನ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ಇದರೊಂದಿಗೆ ಎಲ್ಲಾ ರೀತಿಯ ಚಾಕೊಲೇಟ್, ಚೂಯಿಂಗ್ ಗಮ್, ಸೌದರ್ಯವರ್ದಕ, ಶೇವಿಂಗ್ ಕ್ರೀಮ್, ಶಾಂಪೂ, ಸುಗಂಧದ್ರವ್ಯ, ಮಾರ್ಬಲ್ ಗಳ ಮೇಲಿನ ತೆರಿಗೆ ದರ ಇಳಿಕೆಯಯಾಗಿದೆ.

ಅಸ್ಸಾಂ ಹಣಕಾಸು ಮಂತ್ರಿ ಹಿಮವಂತ ವಿಶ್ವ ಶರ್ಮಾ ಅವರ ನೇತೃತ್ವದ ಸಮಿತಿಯು ಈ ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ಇಳಿಕೆ ಮಾಡಲು ಶಿಫಾರಸ್ಸು ಮಾಡಿದೆ. ರೆಸ್ಟೋರೆಂಟ್ ಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಂಬಂಧಿಸಿದಂತೆ ತೆರಿಗೆ ದರ ಇಳಿಕೆ ಮಾಡಲಾಗಿದೆ. ಸಾಮಾನ್ಯ ಹಾಗೂ ಹವಾನಿಯಂತ್ರಿತ ಹೊಟೇಲ್ ಗಳ ನಡುವಣ ತೆರಿಗೆ ಅಂತರ ಕಡಿಮೆ ಮಾಡಿ ಎಲ್ಲ ಹೊಟೇಲ್ ಗಳ ಮೇಲಿನ ತೆರಿಗೆಯನ್ನು ಶೇ.12ಕ್ಕೆ ಇಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ₹ 7,500ಕ್ಕೂ ಹೆಚ್ಚಿನ ಬೆಲೆಯ ಕೊಠಡಿಯ ಹೊಟೇಲ್ ಗಳು ಹಾಗೂ ಪಂಚತಾರಾ ಹೊಟೇಲ್ ಗಳ ತೆರಿಗೆ ದರ ಸಮಾನವಾಗಿರಿಸಿ, ಇವುಗಳ ಮೇಲೆ ಶೇ.28ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇದರಿಂದ ಉನ್ನತ ವರ್ಗದ ಜನರಿಗೆ ತೆರಿಗೆ ಹೆಚ್ಚಾಗಲಿದೆ.

ಈ ಸಭೆಯ ನಂತರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತಾಗಿ ಹೇಳಿದಿಷ್ಟು… ‘ಶೇ.28ರಷ್ಟು ತೆರಿಗೆ ವರ್ಗದಲ್ಲಿ ಒಟ್ಟು 227 ವಸ್ತುಗಳಿದ್ದವು. ಕೇವಲ 62 ವಸ್ತುಗಳು ಮಾತ್ರ ಈ ವರ್ಗದಲ್ಲಿರಬೇಕು ಎಂದು ತಜ್ಞರು ಸಲಹೆ ನೀಡಿದರು. ಆದರೆ ಜಿಎಸ್ಟಿ ಸಮಿತಿ ಸದಸ್ಯರು ಹೆಚ್ಚುವರಿಯಾಗಿ 12 ವಸ್ತುಗಳನ್ನು ಈ ವರ್ಗದಿಂದ ತೆಗೆದುಹಾಕಿದೆ. ಹೀಗಾಗಿ ಈ ವರ್ಗದಲ್ಲಿದ್ದ 177 ವಸ್ತುಗಳ ತೆರಿಗೆ ಪ್ರಮಾಣ ಈಗ ಶೇ.18ಕ್ಕೆ ಇಳಿದಿದೆ. ಸೀಮೆಂಟ್, ಗೋಡೆ ಬಣ್ಣ ಸೇರಿದಂತೆ ಇತರೆ 50 ವಸ್ತುಗಳ ತೆರಿಗೆ ಪ್ರಮಾಣ ಶೇ.28ರಷ್ಟೇ ಮುಂದುವರಿದಿದೆ. ಈ ತೆರಿಗೆ ದರ ಇಳಿಕೆಯಿಂದ ಸರ್ಕಾರಕ್ಕೆ ಪ್ರತಿ ಆರ್ಥಿಕ ವರ್ಷಕ್ಕೆ ₹ 20 ಸಾವಿರ ಕೋಟಿ ನಷ್ಟವಾಗಲಿದೆ.’

Leave a Reply