ಗುಜರಾತ್ ಚುನಾವಣಾ ಸಮೀಕ್ಷೆ: ಬಿಜೆಪಿ ಗೆದ್ದರೂ ಮತ ಪ್ರಮಾಣ ಕುಸಿತ- ಕಾಂಗ್ರೆಸ್ ಗೆ ಏರಿಕೆ

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಮತಗಳ ಪ್ರಮಾಣ ಕುಸಿತ ಕಂಡರೂ ಗೆಲುವು ಖಚಿತ ಎನ್ನುತ್ತಿದೆ ಚುನಾವಣಾ ಪೂರ್ವ ಸಮೀಕ್ಷೆ. ಎಬಿಪಿ-ಸಿಎಸ್ ಡಿಎಸ್ ನಡೆಸಿರುವ ಸಮೀಕ್ಷೆ ಪ್ರಕಾರ ಬಿಜೆಪಿ 113-121 ಕ್ಷೇತ್ರಗಳಲ್ಲಿ ಜಯ ಗಳಿಸಳಿದ್ದು, ಕಾಂಗ್ರೆಸ್ 58-64 ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ ಎಂಬುದು ಈ ಸಮೀಕ್ಷೆಯ ಫಲಿತಾಂಶ.

ಕಳೆದ ಎರಡು ದಶಕಗಳಿಂದ ಗುಜರಾತಿನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಬಿಜೆಪಿಯನ್ನು ಮಣಿಸಲೇಬೇಕು ಎಂದು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಆದರೆ ಸಮೀಕ್ಷೆ ಪ್ರಕಾರ ಸದ್ಯಕ್ಕೆ ಜನ ಬಿಜೆಪಿಯಿಂದ ಕಾಂಗ್ರೆಸ್ ನತ್ತ ತಮ್ಮ ಗಮನ ಹರಿಸಲು ಸಿದ್ಧರಿಲ್ಲ ಎನ್ನುವುದು ಸಾಬೀತಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಿನ್ನೆಯಷ್ಟೇ ಚುನಾವಣಾ ಪ್ರಚಾರಕ್ಕಾಗಿ ಗುಜರಾತಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಜನರು ಮೋದಿ ಮೋದಿ ಎಂದು ಕೂಗುತ್ತಾ ರಾಹುಲ್ ಗೆ ಮುಜುಗರಕ್ಕೀಡು ಮಾಡಿದ್ದರು.

ಆಗಸ್ಟ್ ನಲ್ಲಿ ನಡೆಸಿದ್ದ ಮೊದಲ ಹಂತದ ಸಮೀಕ್ಷೆಯಲ್ಲೂ ಬಿಜೆಪಿ ಗೆಲುವು ದಾಖಲಿಸುವುದಾಗಿ ಫಲಿತಾಂಶ ಹೊರಬಂದಿತ್ತು. ಅಕ್ಟೋಬರ್ ಕೊನೆ ವಾರ ನಡೆಸಿರುವ ಎರಡನೇ ಹಂತದ ಸಮೀಕ್ಷೆಯಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಎರಡು ಹಂತಗಳ ಸಮೀಕ್ಷೆಯಲ್ಲಿ ಗಮನಸೆಳೆದಿರುವ ಅಂಶ ಎಂದರೆ ಅದು ಬಿಜೆಪಿ ಮತಗಳ ಪ್ರಮಾಣದಲ್ಲಿನ ಕುಸಿತ.

ಹೌದು, ಆಗಸ್ಟ್ ನಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.59 ರಷ್ಟು ಮತಗಳು ಬಿಜೆಪಿ ಪಾಲಾಗಿದ್ದವು. ಆದರೆ ಎರಡನೇ ಹಂತದ ಸಮೀಕ್ಷೆಯಲ್ಲಿ ಇದರ ಪ್ರಮಾಣ ಶೇ.47ಕ್ಕೆ ಕುಸಿತ ಕಂಡಿದೆ. ಇನ್ನು ಕಾಂಗ್ರೆಸ್ ಮತ ಪ್ರಮಾಣದಲ್ಲಿ ಶೇ.12ರಷ್ಟು ಏರಿಕೆ ಕಂಡಿದ್ದು, ಶೇ.41 ರಷ್ಟು ಮತ ಪಡೆದುಕೊಂಡಿದೆ. ಇದರೊಂದಿಗೆ ಆಗಸ್ಟ್ ನಲ್ಲಿ ನಡೆದ ಸಮೀಕ್ಷೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷಕ್ಕಿಂತ ಶೇ.30ರಷ್ಟು ಮತ ಪ್ರಮಾಣದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಈಗ ಕೇವಲ ಶೇ.6 ರಷ್ಟು ಮಾತ್ರ ಮುನ್ನಡೆ ಸಾಧಿಸಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ ಮತಗಳ ಪ್ರಮಾಣದಲ್ಲಿ ಈ ಬದಲಾವಣೆ ಅಚ್ಚರಿ ಮೂಡಿಸಿದೆ. ಈ ಮತ ಪ್ರಮಾಣ ಕುಸಿತ ಕಾಂಗ್ರೆಸ್ ಪಾಲಿಗೆ ನೆಮ್ಮದಿಯ ವಿಚಾರವಾದರೆ, ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.

ಇನ್ನು ವಲಯವಾರು ಮತ ಪ್ರಮಾಣ ಗಮನಿಸುವುದಾದರೆ ಇಲ್ಲೂ ಕಾಂಗ್ರೆಸ್ ಪಾಲಿಗೆ ಸಕಾರಾತ್ಮಕ ಅಂಶ ಗೋಚರಿಸಿವೆ. ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮತ ಪ್ರಮಾಣ ತಲಾ ಶೇ.42ರಷ್ಟಿದ್ದು ತೀವ್ರ ಪೈಪೋಟಿ ಇದೆ. ಇನ್ನು ಉತ್ತರ ಗುಜರಾತಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಶೇ.7 ರಷ್ಟು ಮತ ಪ್ರಮಾಣ ಹೆಚ್ಚಾಗಿರುವುದು ಗಮನಾರ್ಹ. ಈ ಎರಡು ಪ್ರದೇಶಗಳಲ್ಲೇ ಗುಜರಾತ್ ವಿಧಾನಸಭೆಯ 107 ಕ್ಷೇತ್ರಗಳು ಬರಲಿದ್ದು, 182 ಸದಸ್ಯರ ಸಾಮರ್ಥ್ಯ ಹೊಂದಿರುವ ವಿಧಾನಸಭೆಯ ಅರ್ಧದಷ್ಟಾಗಲಿದೆ.

ಚುನಾವಣಾ ಸಮೀಕ್ಷೆ ಪ್ರಕಾರ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆಯಾದರೂ ಮತಗಳ ಪ್ರಮಾಣದಲ್ಲಿನ ಕುಸಿತ ಬಿಜೆಪಿ ಕ್ರಮೇಣವಾಗಿ ನಿಯಂತ್ರಣ ಕಳೆದುಕೊಳ್ಳುತ್ತಿರುವ ಸೂಚನೆ ನೀಡುತ್ತಿದೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಮೋದಿ ಹಾಗೂ ಅಮಿತ್ ಶಾ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಗುಜರಾತ್ ಬಿಜೆಪಿ ಹಿನ್ನಡೆ ಅನುಭವಿಸಿದರೆ ಅದು ದೊಡ್ಡ ಮುಖಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply