ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ಮನೆ ಮೇಲೆ ದಾಳಿ, ಎಲ್ಲಿ ಹೋದರು ಸೆಕ್ಯುಲರ್ ವಾದಿಗಳು?

ಡಿಜಿಟಲ್ ಕನ್ನಡ ವಿಶೇಷ:

ನಮ್ಮ ದೇಶದಲ್ಲಿ ಸೆಕ್ಯುಲರ್ ವಾದದ ಕೂಗು ಕಡಿಮೆ ಏನಿಲ್ಲ. ಆದರೆ ಒಂದು ಸಮುದಾಯದ ಓಲೈಕೆಗೆ ಮಾತ್ರ ಈ ಕೂಗು ಸೀಮಿತವಾಗಿರೋದು ನಮ್ಮ ದೇಶದ ದುರಂತ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸೆಕ್ಯುಲರ್ ಹಣೆಪಟ್ಟಿ ಕಟ್ಟಿಕೊಂಡವರ ಬಂಡವಾಳ ಈಗ ಮತ್ತೊಮ್ಮೆ ಬಯಲಾಗಿದೆ. ಅದೂ ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ನಾಜ್ ಪ್ರಕರಣದಲ್ಲಿ.

ಯೋಗಾ ಶಿಕ್ಷಕಿಯಾಗಿರುವ ರಾಫಿಯಾ ನಾಜ್ ಇತ್ತೀಚೆಗಷ್ಟೇ ಜಾರ್ಖಂಡಿನಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಜತೆ ವೇದಿಕೆ ಹಂಚಿಕೊಂಡು ಖ್ಯಾತಿ ಪಡೆದಿದ್ದರು. ಇದಾದ ಬಳಿಕ ರಾಫಿಯಾ ತನ್ನದೇ ಸಮುದಾಯದವರಿಂದ ಪ್ರಾಣ ಬೆದರಿಕೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರೋಬ್ಬರಿಗೂ ಯೋಗ ಕಲಿಸಬಾರದು ಎಂದು ಈಕೆಯ ವಿರುದ್ಧ ಫತ್ವಾವನ್ನು ಹೊರಡಿಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಾರ್ಖಂಡ್ ಸರ್ಕಾರ ರಾಫಿಯಾಗೆ ಭದ್ರತೆಯನ್ನು ಒದಗಿಸಿದೆ.

ಇಂದು ಖಾಸಗಿ ವಾಹಿನಿಗೆ ಸಂದರ್ಶನ ನೀಡುತ್ತಿದ್ದ ಸಮಯದಲ್ಲೇ ರಾಫಿಯಾ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇಷ್ಟೇಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ನಮ್ಮ ಜ್ಯಾತ್ಯಾತೀತ ವಾದಿಗಳು ತುಟ್ಟಿ ಬಿಚ್ಚಿಲ್ಲ. ಹೀಗಾಗಿ ಈ ಸೆಕ್ಯುಲರ್ ವಾದಿಗಳು ಅದೆಲ್ಲಿ ಅಡಗಿ ಕೂತಿದ್ದಾರೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮತಾಂತರ, ಅಂತರಜಾತಿ ಪ್ರೇಮ ವಿವಾಹದಂತಹ ವಿಚಾರಗಳಲ್ಲಿ ಗಂಟಲು ಕಿತ್ತುಹೋಗೊ ಹಾಗೆ ಅರಚುವ ಜಾತ್ಯಾತೀತವಾದಿಗಳು ರಾಫಿಯಾ ಪ್ರಕರಣದಲ್ಲಿ ತಮ್ಮ ಬಾಯಿಗೆ ಬೀಗ ಜಡಿದುಕೊಂಡಿದ್ದಾರೆ. ಜ್ಯಾತ್ಯಾತೀತ ಹಾಗೂ ಸ್ವತಂತ್ರ ರಾಷ್ಟ್ರ ಎನಿಸಿಕೊಂಡಿರುವ ಭಾರತದಲ್ಲಿ ಮತಾಂತರ, ಅಂತರಜಾತಿ ವಿವಾಹ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಆಯ್ಕೆ ಸ್ವಾತಂತ್ರ್ಯವಿದೆ. ಇವು ಆಯಾ ವ್ಯಕ್ತಿಯ ವೈಯಕ್ತಿಕ ನಿರ್ಧಾರವೂ ಆಗಿದ್ದು ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಈ ಸ್ವಾತಂತ್ರ್ಯ ರಾಫಿಯಾಗೆ ಏಕೆ ಸಿಗುತ್ತಿಲ್ಲ? ಎಂಬುದು ಸದ್ಯ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಇನ್ನು ಜಾತ್ಯಾತೀತತೆ ಧರ್ಮದ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆ ಕುರಿತು ಉದ್ದುದ್ದ ಭಾಷಣ ಮಾಡುತ್ತಾ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗುತ್ತಿರುವ ಖ್ಯಾತ ನಟ ಕಮಲ್ ಹಾಸನ್ ಕಣ್ಣಿಗೆ ರಾಫಿಯಾ ಕಾಣದಿರುವುದು ಈಕೆಯ ದುರಾದೃಷ್ಟವೆಂದು ನಾವು ಪರಿಗಣಿಸಬೇಕಾಗಿದೆ.

ರಾಫಿಯಾ ಬೆಂಬಲಕ್ಕೆ ನಿಂತರೆ ಎಲ್ಲಿ ಒಂದು ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯವೋ ಏನೋ ನಮ್ಮ ಸೆಕ್ಯುಲರ್ ವಾದಿಗಳನ್ನು ಈ ಪ್ರಕರಣದಲ್ಲಿ ಕುರುಡಾಗಿಸಿದೆ. ಇದರೊಂದಿಗೆ ಭಾರತದಲ್ಲಿ ಜಾತ್ಯಾತೀತತೆ ಎಂಬುದು ಕೇವಲ ಕೆಲವು ಸಮುದಾಯಗಳ ಓಲೈಕೆಗೆ ಮಾತ್ರ ಸೀಮಿತ ಎಂಬುದನ್ನು ಈ ಪ್ರಕರಣ ಸಾಬೀತು ಪಡಿಸಿದೆ.

ಹೀಗೆ ರಾಫಿಯಾ ಪ್ರಕರಣ ದೇಶದ ಜಾತ್ಯಾತೀತತೆಯನ್ನು ಪ್ರಶ್ನಿಸುವಂತೆ ಮಾಡಿರುವ ಸಂದರ್ಭದಲ್ಲಿ ನಮಗೆ ಮಾದರಿಯಾಗಿ ನಿಲ್ಲುವುದು ಸೌದಿ ಅರೆಬಿಯಾದ ಯೋಗ ಮಾರ್ಗದರ್ಶಕಿ ನೂಫ್ ಮೊಹಮದ್ ಅಲ್ ಮರ್ವಾಯ್ ಅವರ ಯೋಗದ ಹಾದಿ. ಯೋಗದ ಗಂಧಗಾಳಿಯೂ ಗೊತ್ತಿಲ್ಲದ ಹಾಗೂ ಇಸ್ಲಾಂ ದೇಶದ ಯುವತಿ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದನ್ನು ಅಭ್ಯಾಸ ಮಾಡಿ ಅದೇ ದೇಶದಲ್ಲಿ ಇಂದು ಖ್ಯಾತ ಯೋಗ ಮಾರ್ಗದರ್ಶಕಿಯಾಗಿ ಬೆಳೆದು ನಿಂತಿದ್ದಾಳೆ. ಸೌದಿಯ ರಾಜ ಅಬ್ದುಲಾಜೀಜ್ ವಿಶ್ವವಿದ್ಯಾಲಯದ ಯುವತಿಯರಿಗೆ ಯೋಗ ಹೇಳಿಕೊಡುವಂತೆ ನೂಫ್ ಅವರಿಗೆ ತಿಳಿಸಿ, ನಂತರ ನೂಫ್ ಅಲ್ಲಿನ ಮುಸ್ಲಿಂ ಯುವತಿಯರಿಗೆ ಯೋಗವನ್ನು ಹೇಳಿಕೊಟ್ಟು ಅದು ಯಶಸ್ವಿಯೂ ಆಗಿದೆ. ನೂಫ್ ಅವರ ಯೋಗದ ಮೇಲಿನ ಆಸಕ್ತಿ, ಈಕೆಯ ಯೋಗ ಸಾಧನೆಯ ಹಾದಿ ಕುರಿತು ಈ ಹಿಂದೆ ಡಿಜಿಟಲ್ ಕನ್ನಡ ವಿಶೇಷ ಲೇಖನವನ್ನು ಪ್ರಕಟಿಸಿತ್ತು.

ಇಸ್ಲಾಂ ರಾಷ್ಟ್ರದಲ್ಲೇ ಯೋಗ ಶಿಕ್ಷಕಿ ನೂಫ್ ಅವರಿಗೆ ಸಿಕ್ಕಿರುವ ಸ್ವತಂತ್ರ ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ರಾಫಿಯಾಗೆ ಸಿಗದಿರುವುದು ನಿಜಕ್ಕೂ ಶೋಚನೀಯ. ಜತೆಗೆ ಟಿಪ್ಪು ಜಯಂತಿ, ಗೋಮಾಂಸ ಸೇವನೆಯಂತಹ ಒಂದು ಸಮುದಾಯದ ವಿಚಾರಗಳಿಗಷ್ಟೇ ನಮ್ಮ ದೇಶದ ಜಾತ್ಯಾತೀತತೆ ಸೀಮಿತವಾಗಿದೆಯೇ? ಎಂಬ ಪ್ರಶ್ನೆ ಭಾರತದ ಜಾತ್ಯಾತೀತತೆಗೆ ಸವಾಲಾಗಿ ನಿಂತಿದೆ.

Leave a Reply