ವಾಯು ಮಾಲೀನ್ಯ: ಕೇಜ್ರಿವಾಲ್ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡ ಹಸಿರು ನ್ಯಾಯಾಲಯ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿರುವ ದೆಹಲಿ ವಾಯು ಮಾಲೀನ್ಯವನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ. ಕಳೆದ ಆರು ದಿನಗಳಲ್ಲಿ ರಾಷ್ಟ್ರ ರಾಜಧಾನಿಯ ವಾಯು ಮಾಲೀನ್ಯ ಮಟ್ಟ ಎರಡನೇ ಬಾರಿಗೆ ಅತ್ಯಂತ ಕೆಟ್ಟ ಹಂತಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಕೇಜ್ರಿವಾಲರ ನೇತೃತ್ವದ ದೆಹಲಿ ಸರ್ಕಾರಕ್ಕೆ ಹಸಿರು ನ್ಯಾಯಾಲಯ ತರಾಟೆ ತೆಗೆದುಕೊಂಡಿದೆ.

ವಾಯು ಮಾಲೀನ್ಯ ನಿಯಂತ್ರಿಸುವುದು ದೊಡ್ಡ ಸಾವಾಲಿನಂತಾಗಿರುವ ಪರಿಸ್ಥಿತಿಯಲ್ಲಿ ಕೇಜ್ರಿವಾಲರ ದೆಹಲಿ ಸರ್ಕಾರ ಸಮ ಬೆಸ ಸಂಖ್ಯೆ ವಾಹನ ಚಾಲನೆ ನಿಯಮದಲ್ಲಿ ಮಹಿಳಾ ಚಾಲಕರಿಗೆ ಹಾಗೂ ದ್ವಿಚಕ್ರ ವಾಹನಗಳಿಗೆ ರಿಯಾಯಿತಿ ನೀಡಲು ಹಸಿರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹಸಿರು ನ್ಯಾಯಾಲಯ ದೆಹಲಿ ಸರ್ಕಾರದ ಜವಾಬ್ದಾರಿಯನ್ನು ಪ್ರಶ್ನಿಸಿದೆ. ದೆಹಲಿ ಸರ್ಕಾರದ ಈ ನಡೆ ಟೀಕಿಸಿರುವ ಎನ್ ಜಿಟಿ ಹೇಳಿದಿಷ್ಟು…

‘ವಾಯು ಮಾಲೀನ್ಯ ತಡೆಗಟ್ಟುವ ವಿಚಾರದಲ್ಲಿ ನೀವು ಸಕಾರಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲವೇಕೆ? ಈ ಗಂಭೀರದ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಾಗ ಯಾರೊಬ್ಬರಿಗೆ ವಿನಾಯಿತಿ ನೀಡುವುದು ಏಕೆ? ದ್ವಿಚಕ್ರ ವಾಹನಗಳಿಂದ ವಾಯು ಮಾಲಿನ್ಯ ಆಗುತ್ತಿಲ್ಲ ಎನ್ನುವುದಾದರೆ ಅವರಿಗೆ ವಿನಾಯಿತಿ ನೀಡಿ.

ಆದರೆ ನಾಲ್ಕು ಚಕ್ರ ವಾಹನಗಳಿಗಿಂತ ದ್ವಿಚಕ್ರ ವಾಹನಗಳೇ ಹೆಚ್ಚು ಮಾಲೀನ್ಯಕ್ಕೆ ಕಾರಣವಾಗಿರುವುದಾಗಿ ವರದಿಗಳು ಹೇಳುತ್ತಿರುವಾಗ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲು ನೀವು ಮುಂದಾಗಿರೋದು ಏಕೆ? ಇದೇನು ಹುಡುಗಾಟದ ವಿಷಯವೇ? ಇನ್ನು ಈ ಸಮಬೆಸ ನಿಯಮದಿಂದ ಮಹಿಳೆಯರಿಗೆ ತೊಂದರೆಯಾಗುತ್ತಿದ್ದರೆ ಅವರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿ.

ಮಕ್ಕಳು ಶಾಲೆಗೆ ಹೋಗಬೇಕಾದರೆ ಅವರು ಮುಖಕ್ಕೆ ಉಸಿರಾಟದ ಪರದೆ ಹಾಕಿಕೊಂಡು ಹೋಗುವಂತಾಗಿದೆ. ಆರೋಗ್ಯದ ತುರ್ತು ಪರಿಸ್ಥಿತಿ ಅಂದರೆ ಏನು ಎಂದು ಗೊತ್ತಿದೆಯೇ? 48 ಗಂಟೆಗಳಲ್ಲಿ ವಾಯು ಮಾಲಿನ್ಯದ ಮಟ್ಟ 2.5 ಗೆ ತಲುಪುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಶ್ವಾಸಕೋಶ ಹಾಳಾಗದಂತೆ ನೋಡಿಕೊಳ್ಳಿ. ವಾಯು ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.’

ನ್ಯಾಯಾಲಯ ಹೀಗೆ ತರಾಟೆಗೆ ತೆಗೆದುಕೊಂಡ ನಂತರ ದೆಹಲಿ ಸರ್ಕಾರ ತಮ್ಮ ಅರ್ಜಿಯನ್ನು ಹಿಂಪಡೆಯಿತು.

Leave a Reply