ಶಶಿಕಲಾಗೆ ಐಟಿ ಶಾಕ್: ಈವರೆಗೂ ಸಿಕ್ಕಿದೆ ₹ 1430 ಕೋಟಿ ಅಕ್ರಮ ಹಣ, ಇದು ಅಂತಿಮ ಮೊತ್ತ ಅಲ್ಲ ಎಂದರು ಅಧಿಕಾರಿಗಳು

ಡಿಜಿಟಲ್ ಕನ್ನಡ ಟೀಮ್:

ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ.ಶಶಿಕಲಾಗೆ ಈಗ ತೆರಿಗೆ ಇಲಾಖೆ ದೊಡ್ಡ ಶಾಕ್ ನೀಡಿದೆ. ಸುದೀರ್ಘ ಐದು ದಿನಗಳ ಕಾಲ ಶಶಿಕಲಾ ಅವರ ಮನೆ ಹಾಗೂ ಕಂಪನಿ ಸೇರಿದಂತೆ ಒಟ್ಟು 187 ಕಡೆಗಳಲ್ಲಿ ತಪಾಸಣೆ ನಡೆಸಿರುವ ಐಟಿ ಅಧಿಕಾರಿಗಳು ಈವರೆಗೂ ₹1430 ಕೋಟಿಯಷ್ಟು ಅಕ್ರಮ ಹಣ ಪತ್ತೆ ಹಚ್ಚಿದ್ದಾರೆ. ಆದರೆ ದಾಖಲೆಗಳ ಪರಿಶೀಲನೆ ಮುಂದುವರೆಯುತ್ತಿದ್ದು, ಅಕ್ರಮ ಆಸ್ತಿ ಸಂಪಾದನೆಯ ಮೊತ್ತ ಮತ್ತಷ್ಟು ಹೆಚ್ಚುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಾ ತಮ್ಮ ರಾಜಕೀಯ ಜೀವನಕ್ಕೆ ದೊಡ್ಡ ಹೊಡೆತ ತಿಂದಿರುವ ಶಶಿಕಲಾಗೆ, ಎಐಎಡಿಎಂಕೆ ಪಕ್ಷದಲ್ಲಿನ ಎರಡೂ ಬಣಗಳ ವಿಲೀನ ನಿದ್ದೆಗೆಡಿಸಿತ್ತು. ಈ ಎಲ್ಲ ಹಿನ್ನಡೆಗಳ ಬೆನ್ನಲ್ಲೇ ಈಗ ಐಟಿ ರೈಡ್ ಶಶಿಕಲಾಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ದಾಳಿಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಐಟಿ ಅಧಿಕಾರಿಗಳು, ‘ನಮ್ಮ ತಪಾಸಣೆ ಮುಕ್ತಾಯಗೊಂಡಿದೆ. ಈಗ ನೀಡಿರುವುದು ಅಂತಿಮ ಅಂಕಿಅಂಶವಲ್ಲ. 187 ಕಡೆಗಳಲ್ಲಿ ನಡೆಸಲಾದ ತಪಾಸಣೆ ವೇಳೆ ಸಿಕ್ಕಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಅಕ್ರಮ ಆಸ್ತಿಯ ಮೊತ್ತ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ’ ಎಂದಿದ್ದಾರೆ.

ಐಟಿ ಅಧಿಕಾರಿಗಳಗೆ ದಾಳಿಯ ವೇಳೆ ₹ 7 ಕೋಟಿ ನಗದು, ₹ 5 ಕೂಟಿಗೂ ಹೆಚ್ಚು ಬೆಲೆ ಬಾಳುವ ಆಭರಣ, ತಮಿಳುನಾಡು, ಪುದುಚೆರಿ, ಬೆಂಗಳೂರು ಮತ್ತು ನವದೆಹಲಿ ಅಪಾರ ಆಸ್ತಿ ಹೊಂದಿರುವ ದಾಖಲೆಗಳು ಸಿಕ್ಕಿವೆ. ಒಟ್ಟು 15 ಬ್ಯಾಂಕ್ ಲಾಕರ್ ಗಳು ಸಿಕ್ಕಿದ್ದು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಲಾಕರ್ ಗಳಲ್ಲಿ ಹಲವು ಕೆಜಿ ಬಂಗಾರ, ವಜ್ರಾಭರಣಗಳು ಸಿಕ್ಕಿವೆ. ಇವುಗಳನ್ನು ವಶಕ್ಕೆ ತೆಗೆದುಕೊಂಡಿರುವ ಐಟಿ ಅಧಿಕಾರಿಗಳು ಈ ಎಲ್ಲದರ ಮೊತ್ತವನ್ನು ಪರಿಶೀಲಿಸುತ್ತಿದ್ದಾರೆ.

ತಮಿಳುನಾಡು ರಾಜಕೀಯವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪಣ ತೊಟ್ಟಿದ್ದ ಶಶಿಕಲಾಗೆ ಈಗ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದ್ದು, ಇವರ ರಾಜಕೀಯ ಕನಸು ದಿನೇ ದಿನೇ ನುಚ್ಚುನೂರಾಗುತ್ತಿದೆ.

Leave a Reply