ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ: ಸದ್ಯಕ್ಕೆ ಮುಗಿಯಲ್ಲ ಸರ್ಕಾರ-ವೈದ್ಯರ ಜಗಳ, ನಿಲ್ಲೋಲ್ಲ ಜನರ ಪರದಾಟ

ಡಿಜಿಟಲ್ ಕನ್ನಡ ಟೀಮ್:

ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ಅಂಗೀಕಾರ ವಿಚಾರವಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ವೈದ್ಯರ ನಡುವಣ ಹಗ್ಗಜಗ್ಗಾಟ ಸದ್ಯಕ್ಕೆ ಅಂತ್ಯವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ಈಗಾಗಲೇ ವೈದ್ಯರ ಮುಷ್ಕರದಿಂದ ರಾಜ್ಯದಲ್ಲಿ 14 ಮಂದಿ ಚಿಕಿತ್ಸೆ ವಂಚಿತವಾಗಿ ಮೃತಪಟ್ಟಿದ್ದಾರೆ. ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಾಳೆ ರಾಜ್ಯದ ಆರು ಸಾವಿರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಜನರು ಮತ್ತಷ್ಟು ಸಮಸ್ಯೆ ಎದುರಿಸಲಿದ್ದಾರೆ. ಆದರೆ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಕುಮಾರ್ ತಾವು ಈ ಮಸೂದೆ ಜಾರಿ ಮಾಡಿಯೇ ತೀರುತ್ತೇವೆ ಎಂದು ಸವಾಲು ಹಾಕಿದ್ದಾರೆ. ಹೀಗಾಗಿ ಈ ಇಬ್ಬರ ಜಗಳದಲ್ಲಿ ರೋಗಿಗಳು ನರಳುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳು ಹೊರರೋಗಿ ವಿಭಾಗ ಬಂದ್ ಮಾಡಿರುವ ನಿರ್ಧಾರಕ್ಕೆ ಎಚ್ಚೆತ್ತುಕೊಂಡಿರುವ ಸರ್ಕಾರ, ಸರ್ಕಾರಿ ಆಸ್ಪತ್ರೆ ವೈದ್ಯರ ರಜೆ ರದ್ದು ಮಾಡಿ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಸರ್ಕಾರಿ ವೈದ್ಯರು ಆಸ್ಪತ್ರೆ ಸಿಬ್ಬಂದಿ ನಾಳೆ ಕೆಲಸಕ್ಕೆ ಹಾಜರಾಗಬೇಕಿದೆ.

ಖಾಸಗಿ ಆಸ್ಪತ್ರೆಗಳು ಬಡ ರೋಗಿಗಳಿಂದ ಮಾಡುತ್ತಿರುವ ಸುಲಿಗೆ ತಪ್ಪಿಸಲು ಈ ತಿದ್ದುಪಡಿ ಮಸೂದೆ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ #ISupportRameshKumar ಹಾಗೂ #WE_SUPPORT_RAMESH_KUMAR ಎಂದು ತಮ್ಮ ಅಭಿಪ್ರಾಯ ಮಂಡಿಸಿ ರಮೇಶ್ ಕುಮಾರ್ ಅವರ ಬೆಂಬಲಕ್ಕೆ ಒಂದು ವರ್ಗದ ಜನರು ನಿಂತಿದ್ದಾರೆ. ಇನ್ನು ರಮೇಶ್ ಕುಮಾರ್ ಅವರೇ ಹೇಳುವ ಹಾಗೆ ತಮ್ಮ ಈ ನಿರ್ಧಾರಕ್ಕೆ ಪಕ್ಷಾತೀತವಾಗಿ ಅನೇಕ ಸಚಿವರು, ಶಾಸಕರು, ನಾಯಕರುಗಳು ಬೆಂಬಲ ಸೂಚಿಸಿದ್ದಾರೆ. ನಾನು ಅನೇಕ ದಶಗಳಿಂದ ರಾಜಕೀಯ ಮಾಡುತ್ತಾ ಬಂದಿರೋನು ಈ ಪ್ರತಿಭಟನೆಗೆಲ್ಲ ಜಗ್ಗುವುದಿಲ್ಲ. ನನಗೆ ನನ್ನದೇ ಆದ ಗುರಿ, ಧ್ಯೇಯಗಳಿವೆ ಅದನ್ನು ನಾನೆಂದೂ ಬಿಡುವುದಿಲ್ಲ. ನನ್ನ ವಿರುದ್ಧ ನಿಲ್ಲಬೇಕಾದರೆ ಸಾವಿರ ಬಾರಿಯಲ್ಲ ಲಕ್ಷ ಬಾರಿ ಯೋಚಿಸಬೇಕು ಎಂದು ಸಚಿವರು ಎಚ್ಚರಿಕೆ ರವಾನಿಸಿದ್ದಾರೆ. ಇನ್ನು ಈ ಮಸೂದೆ ಜಾರಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಮ್ಮ ನಾಯಕರುಗಳನ್ನು ಕೇಳಿ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಚುನಾವಣೆಯ ಹೊತ್ತಿನಲ್ಲಿ ಈ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಕಾಂಗ್ರೆಸ್ ಹಿಂದುಮುಂದು ನೋಡುತ್ತಿದ್ದು, ವೈದ್ಯರ ಪ್ರತಿಭಟನೆಗೆ ಅಂತ್ಯವಾಡಲು ಈ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸದೇ ಮುಂದೂಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ.

ಒಟ್ಟಾರೆಯಾಗಿ ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ಅಂಗೀಕಾರ ವಿಚಾರ ಬಗೆಹರಿಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ ಮುಂದಿನ ಕೆಲ ದಿನಗಳ ಕಾಲ ವೈದ್ಯರು ಹಾಗೂ ಸರ್ಕಾರದ ನಡುವಣ ಹಗ್ಗಜಗ್ಗಾಟ ಮುಂದುವರಿಯಲಿದ್ದು ಜನರು ನರಳಲೇಬೇಕಾಗಿದೆ.

Leave a Reply