ಜಾರ್ಜ್ ರಾಜಿನಾಮೆ ಕೇಳೋದು ಸೂಕ್ತ ಅಲ್ಲ ಅಂದಿದ್ದ ಹೆಚ್ಡಿಕೆ ಈಗ ‘ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಟೀಕೆ

ಡಿಜಿಟಲ್ ಕನ್ನಡ ಟೀಮ್:

ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣ ಈಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಸಿಬಿಐ ಈ ಪ್ರಕರಣ ಕೈಗೆತ್ತುಕೊಂಡಾಗ ಬಿಜೆಪಿ ನಾಯಕರು ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದಿದ್ದರು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತ್ರ ಸದ್ಯದ ಪರಿಸ್ಥಿತಿಯಲ್ಲಿ ಜಾರ್ಜ್ ರಾಜಿನಾಮೆ ಕೇಳೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಕುಮಾರಸ್ವಾಮಿ ತಮ್ಮ ವರಸೆ ಬದಲಿಸಿದ್ದು, ‘ಗಣಪತಿ ಅವರ ಪ್ರಕರಣದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಹರಿಹಾಯ್ದಿದ್ದಾರೆ.

ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣ ವಿಚಾರಣೆ ನಡೆಸಿದ್ದ ಸಿಐಡಿ ತಂಡ ಈ ಪ್ರಕರಣದಲ್ಲಿ ಆಗಿನ ಗೃಹ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಕೈವಾಡವಿಲ್ಲ ಎಂದು ಕ್ಲೀನ್ ಚಿಟ್ ನೀಡಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಬಿಐ ಈ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡು ಎಫ್ಐಆರ್ ದಾಖಲಿಸಿತ್ತು. ಎಫ್ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿ ನಾಯಕರು ತಮಗೆ ಸಿಕ್ಕ ಅನಿರೀಕ್ಷಿತ ಅಸ್ತ್ರವನ್ನು ಬಳಸಿಕೊಂಡು ಸರ್ಕಾರದ ಮೇಲೆ ದಾಳಿ ಮಾಡಲು ಮುಂದಾದರು. ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದಿದ್ದರು.

ನಿನ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ ಕೊಠಡಿಯನ್ನು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಲ್ಲಿ ಬುಲೆಟ್ ಲಭಿಸಿದೆ. ಈ ಬೆಳವಣಿಗೆ ಅನೇಕ ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ ರಾಜ್ಯ ಸರ್ಕಾರ ಹಾಗೂ ಸಿಐಡಿ ತನಿಖೆ ಎಷ್ಟು ಪ್ರಾಮಾಣಿಕವಾಗಿದೆ ಎಂಬ ಅನುಮಾನ ಉದ್ಭವಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕಾದು ನೋಡುವ ತಂತ್ರ ಅನುಸರಿಸಿದ್ದ ಕುಮಾರಸ್ವಾಮಿ ಈಗ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಗ್ಗೆ ಹೇಳಿದಿಷ್ಟು…

‘ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ನಿನ್ನೆಯಷ್ಟೇ ಅವರು ತಂಗಿದ್ದ ಲಾಡ್ಜ್ ಕೊಠಡಿಯನ್ನು ವಶಕ್ಕೆ ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಬುಲೆಟ್ ಸಿಕ್ಕಿದೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದೆ. ಈ ಪ್ರಕರಣ ನಡೆದು ಒಂದೂವರೆ ವರ್ಷವಾದ ಬಳಿಕ ಅಲ್ಲಿ ಬುಲೆಟ್ ಸಿಕ್ಕಿದೆ ಎಂದರೆ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆ ಎಷ್ಟರ ಮಟ್ಟಿಗೆ ನಡೆಸಿದೆ ಎಂಬುದು ಗೊತ್ತಾಗುತ್ತದೆ. ಈ ಹಿಂದೆ ಜಾರ್ಜ್ ಅವರ ರಾಜಿನಾಮೆ ಕೇಳುವುದು ಸೂಕ್ತ ಅಲ್ಲ. ಆದರೆ ಸಿಬಿಐ ಅಧಿಕಾರಿಗಳಿಗೆ ಸೂಕ್ತ ಸಾಕ್ಷ್ಯಾಧಾರ ಸಿಕ್ಕರೆ ಜಾರ್ಜ್ ರಾಜಿನಾಮೆ ಕೇಳುತ್ತೇವೆ ಎಂದು ಹೇಳಿದ್ದೆ.

ಸಿಬಿಐ ಅಧಿಕಾರಿಗಳಿಗೆ ಈಗ ಬುಲೆಟ್ ಸಿಕ್ಕಿದ ಮೇಲೆ ರಾಜ್ಯ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿ ಸಿಐಡಿಯಿಂದ ಜಾರ್ಜ್ ಅವರಿಗೆ ಕ್ಲೀನ್ ಚಿಟ್ ಕೊಡಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಪೊಲೀಸ್ ಅಧಿಕಾರಿಗಳು ಜಾರ್ಜ್ ಅವರ ರಕ್ಷಣೆಗಾಗಿ ಆ ಕೊಠಡಿಯಲ್ಲಿ ಎಷ್ಟು ಪ್ರಾಮಾಣಿಕವಾಗಿ ಮಹಜರ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಹೀಗೆ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು.’

Leave a Reply