ರಾಹುಲ್ ಬೆನ್ನಿಗೆ ನಿಂತು ಗುಜರಾತ್ ಬಿಜೆಪಿಗೆ ಸೂಚನೆ ಕೊಟ್ಟ ಚುನಾವಣಾ ಆಯೋಗ

ಡಿಜಿಟಲ್ ಕನ್ನಡ ಟೀಮ್:

ಕಳೆದ ಲೋಕಸಭಾ ಚುನಾವಣೆಯಿಂದ ಬಿಜೆಪಿ ಯಾವುದೇ ರಾಜ್ಯಗಳ ಚುನಾವಣೆ ಇದ್ದರೂ ತಮ್ಮ ಪ್ರಚಾರದ ತಂತ್ರಗಾರಿಕೆಯಲ್ಲಿ ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಋಣಾತ್ಮಕವಾಗಿ ಬಿಂಬಿಸುವುದು ನಡೆಯುತ್ತಲೇ ಬಂದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಈ ತಂತ್ರಗಾರಿಕೆಗೆ ಚುನಾವಣಾ ಆಯೋಗ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ.

ಹೌದು, ಚುನಾವಣೆಯ ಪ್ರಚಾರದ ವೇಳೆ ಅದರಲ್ಲೂ ವಿದ್ಯುನ್ಮಾನ ಜಾಹೀರಾತಿನಲ್ಲಿ ‘ಪಪ್ಪು’ ಎಂಬ ಪದ ಬಳಕೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಗುಜರಾತ್ ಬಿಜೆಪಿಗೆ ಸೂಚನೆ ನೀಡಿದೆ. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಎಂದು ಬಿಂಬಿಸುವುದು ಬಿಜೆಪಿಯ ತಂತ್ರಗಾರಿಕೆಯ ಒಂದು ಭಾಗ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಬಿಜೆಪಿ ರಾಹುಲ್ ಗಾಂಧಿ ಅವರನ್ನು ‘ಪಪ್ಪು’ (ಎಳೆ ಮಗು) ಎಂದು ನಮೂದಿಸುತ್ತಲೇ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸುತ್ತದೆ. ಗುಜರಾತ್ ಚುನಾವಣೆ ಹೊಸ್ತಿಲಲ್ಲಿರುವ ಈ ಸಮಯದಲ್ಲೂ ಬಿಜೆಪಿಯ ಈ ತಂತ್ರವನ್ನು ಚುನಾವಣಾ ಆಯೋಗ ತಡೆದಿದೆ.

ಈ ಬಗ್ಗೆ ಬಿಜೆಪಿ ತನ್ನ ಸ್ಪಷ್ಟನೆಯನ್ನು ನೀಡಿದ್ದು, ಅದು ಹೀಗಿದೆ… ‘ನಮ್ಮ ಜಾಹೀರಾತಿನಲ್ಲಿ ಬರುವ ಯಾವುದೇ ಪದವು ಯಾವುದೇ ವ್ಯಕ್ತಿಗೆ ಸಂಬಂಧಿಸಿಲ್ಲ. ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಮಾಡುವ ಮುನ್ನ ಅದರ ಮೂಲ ಪ್ರತಿಯನ್ನು ಸಮಿತಿಗೆ ಸಲ್ಲಿಸಿ ಅದರಿಂದ ಅನುಮತಿ ಪತ್ರ ಪಡೆಯಬೇಕು. ಇದೇ ರೀತಿ ನಮ್ಮ ಜಾಹೀರಾತಿನಲ್ಲಿ ಪಪ್ಪು ಎಂಬ ಪದಕ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಪದ ಅವಹೇಳನಕಾರಿಯಾಗಿದ್ದು, ಅದನ್ನು ತೆಗೆದುಹಾಕಬೇಕು ಅಥವಾ ಬೇರೆ ಪದ ಬಳಸಬೇಕು ಎಂದು ತಿಳಿಸಿದೆ. ಹೀಗಾಗಿ ನಮ್ಮ ಪಕ್ಷ ಆ ಪದಕ್ಕೆ ಪರ್ಯಾಯ ಪದ ಬಳಸಿ ಮತ್ತೆ ಜಾಹೀರಾತು ಸ್ಟ್ರಿಪ್ಟ್ ಅನ್ನು ಚುನಾವಣಾ ಸಮಿತಿಗೆ ಸಲ್ಲಿಸಲಾಗುವುದು.’

ಒಟ್ಟಿನಲ್ಲಿ ಪಪ್ಪು ಪದ ಬಳಕೆಗೆ ತಡೆಯುವ ಮೂಲಕ ಚುನಾವಣಾ ಆಯೋಗ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಪರೋಕ್ಷ ಟೀಕೆಗೆ ಬ್ರೇಕ್ ಹಾಕಿದೆ. ಇದರಿಂದ ಕಾಂಗ್ರೆಸ್ ಗೆ ಎಷ್ಟು ಅನುಕೂಲವಾಗುತ್ತೋ ಬಿಜೆಪಿಗೆ ಎಷ್ಟು ಅನಾನುಕೂಲವಾಗುತ್ತೋ ಅವರವರೇ ನಿರ್ಧರಿಸಬೇಕು.

Leave a Reply