ನಾನು ಮನುಷ್ಯನೇ, ನನ್ನ ಚರ್ಮ ಸುಲಿದು ನೋಡಿ! ಪತ್ರಕರ್ತರ ಪ್ರಶ್ನೆಗೆ ಕೊಹ್ಲಿ ಕಿಡಿಕಾರಿದ್ದು ಏಕೆ?

ಡಿಜಿಟಲ್ ಕನ್ನಡ ಟೀಮ್:

‘ನಾನು ಮನುಷ್ಯ… ರೊಬೋಟ್ ಅಲ್ಲ… ಬೇಕಿದ್ದರೆ ನನ್ನ ಚರ್ಮ ಸುಲಿದು ನೋಡಿ ರಕ್ತ ಬರುತ್ತೆ’ ಇದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಕೊಟ್ಟ ಖಾರವಾದ ಉತ್ತರ. ಕೊಹ್ಲಿ ಈ ರೀತಿ ಕೋಪದಿಂದ ಉತ್ತರಿಸಲು ಕಾರಣ ಏನು, ಕೊಹ್ಲಿಗೆ ಕೆಣಕಿದ ಆ ಪ್ರಶ್ನೆ ಏನು ಎಂದು ಯೋಚಿಸ್ತಿದ್ದೀರಾ ಅದರ ಮಾಹಿತಿ ಇಲ್ಲಿದೆ ನೋಡಿ.

ನಾಳೆಯಿಂದ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈಗಾಗಲೇ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯ ಹಾಗೂ ಳಂಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಬೇಕು ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿ ಡಿಸೆಂಬರ್ ತಿಂಗಳಲ್ಲಿ ತಮ್ಮ ಪ್ರೇಯಸಿ ಅನುಷ್ಕಾ ಶರ್ಮಾರೊಂದಿಗೆ ಮದುವೆಯಾಗುತ್ತಿದ್ದಾರೆ. ಹೀಗಾಗಿ ಕೊಹ್ಲಿ ಈ ವಿಶ್ರಾಂತಿ ಕೋರಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪತ್ರಕರ್ತರು ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದ್ದು, ಇದರಿಂದ ಕೊಹ್ಲಿ ಪಿತ್ತ ನೆತ್ತಿಗೇರಿ ಈ ರೀತಿ ಉತ್ತರಿಸಿದ್ದಾರೆ. ಈ ವೇಳೆ ಕೊಹ್ಲಿ ಹೇಳಿದಿಷ್ಟು…

‘ನಿಜವಾಗಿಯೂ ನನಗೆ ವಿಶ್ರಾಂತಿಯ ಅಗತ್ಯವಿದೆ. ನಾನು ವಿಶ್ರಾಂತಿ ಏಕೆ ತೆಗೆದುಕೊಳ್ಳಬಾರದು? ನನ್ನ ದೇಹಕ್ಕೆ ವಿಶ್ರಾಂತಿ ಬೇಕು ಎನಿಸಿದಾಗ ನಾನು ಮಂಡಳಿಯ ಬಳಿ ವಿಶ್ರಾಂತಿ ಬೇಕೆಂದು ಕೇಳುತ್ತೇನೆ. ನಾನೂ ಮನುಷ್ಯನೇ ರೊಬೋಟ್ ಅಲ್ಲ, ಬೇಕಿದ್ದರೆ ನನ್ನ ಚರ್ಮ ಸುಲಿದು ನೋಡಿ ರಕ್ತ ಬರುತ್ತದೆ.

ಈ ವಿಚಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಕ್ರಿಕೆಟಿಗರು ವರ್ಷದಲ್ಲಿ 40 ಪಂದ್ಯಗಳನ್ನಾಡುತ್ತಾರೆ. ಅವರ ಶ್ರಮವನ್ನು ನಿಭಾಯಿಸಲು ಅವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಈಕ್ರೀಡೆಯಲ್ಲಿ 11 ಆಟಗಾರರು ಆಡುತ್ತಾರಾದರೂ ಎಲ್ಲರೂ 45 ಓವರ್ ಗಳ ಕಾಲ ಬ್ಯಾಟಿಂಗ್ ಮಾಡುವುದಿಲ್ಲ. ಅಲ್ಲದೆ ಎಲ್ಲ ಆಟಗಾರರು ಟೆಸ್ಟ್ ಪಂದ್ಯದಲ್ಲಿ 30 ಓವರ್ ಬೌಲಿಂಗ್ ಮಾಡುವುದಿಲ್ಲ. ಆದರೆ ಈ ರೀತಿ ಶ್ರಮ ಹಾಕುತ್ತಿರುವವರಿಗೆ ಸೂಕ್ತ ಸಮಯದಲ್ಲಿ ವಿಶ್ರಾಂತಿ ನೀಡಿ, ಅವರ ದೇಹಕ್ಕೆ ಚೇತರಿಸಿಕೊಳ್ಳುವ ಅವಕಾಶ ನೀಡಬೇಕು.’

ಕೊಹ್ಲಿ ತಮ್ಮ ವಿಶ್ರಾಂತಿ ಜತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಕಣಕ್ಕಿಳಿಸುವ ಪ್ರಶ್ನೆಗೂ ಸೇರಿದಂತೆ ಈ ಉತ್ತರ ನೀಡಿದ್ದು, ಆಟಗಾರರಿಗೆ ವಿಶ್ರಾಂತಿ ಅವಶ್ಯಕತೆ ಎಷ್ಟಿದೆ ಎಂದು ವಿವರಿಸಿದ್ದಾರೆ.

Leave a Reply