ಮುಷ್ಕರ ನಿಲ್ಲಿಸಿ…! ಖಾಸಗಿ ವೈದ್ಯರಿಗೆ ಹೈಕೋರ್ಟ್ ಸಲಹೆ

ಡಿಜಿಟಲ್ ಕನ್ನಡ ಟೀಮ್:

ರೋಗಿಗಳ ಹಿತ ಕಡೆಗಣಿಸಿ ವೃತ್ತಿ ಧರ್ಮ ಮರೆತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಗರಂ ಆಗಿರುವ ಹೈಕೋರ್ಟ್ ತಕ್ಷಣವೇ ಮುಷ್ಕರ ನಿಲ್ಲಿಸಿ ಎಂದು ಸೂಚಿಸಿದೆ.

ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹಗ್ಗಜಗ್ಗಾಟ ನಡೆಸುತ್ತಿರುವ ವೈದ್ಯರು ಬೆಳಗಾವಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಇಂದು ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಸಗಿ ವೈದ್ಯರ ಈ ಮುಷ್ಕರದಿಂದಾಗಿ ರಾಜ್ಯದಲ್ಲಿ ಈವರೆಗೂ 24 ಮಂದಿ ಮಂದಿ ಮೃತಪಟ್ಟಿದ್ದಾರೆ. ವೈದ್ಯರು ಹಾಗೂ ಸರ್ಕಾರದ ನಡುವಣ ಕಿತ್ತಾಟದಿಂದ ರೋಗಿಗಳು ಸಮಸ್ಯೆ ಎದುರಿಸುತ್ತಿರುವುದನ್ನು ವಿರೋಧಿಸಿ ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಹೆಚ್.ಜಿ ರಮೇಶ್ ವೈದ್ಯರಿಗೆ ಮುಷ್ಕರ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ಕುರಿತ ವಾದ ಮಂಡನೆ ಇನ್ನು ಮುಂದುವರಿಯುತ್ತಿದ್ದು, ಅಂತಿಮ ನಿರ್ಧಾರ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಈ ವಿಚಾರಣೆ ವೇಳೆ ವೈದ್ಯರ ಪರ ವಕೀಲರು ತಮ್ಮ ವಾದ ಮಂಡಿಸಿ, ಸರ್ಕಾರದ ಈ ಮಸೂದೆ ತಿದ್ದುಪಡಿಯಿಂದ ಮುಂದಿನದಿನಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಅನ್ಯಾಯವಾಗಲಿದೆ ಎಂದರು. ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿಗಳು, ನಾಳಿನ ವಿಷಯವನ್ನು ಪಕ್ಕಕ್ಕಿಟ್ಟು, ಇಂದು ರೋಗಿಗಳು ಸಮಸ್ಯೆ ಎದುರಿಸುತ್ತಿರುವುದರತ್ತ ಗಮನ ಕೊಡಿ ಎಂದು ಸಲಹೆ ನೀಡಿದರು.

ನಂತರ ಅಡ್ವೋಕೇಟ್ ಜೆನರಲ್ ಸಹ ಈ ಮಸೂದೆ ಕುರಿತಾಗಿ ವೈದ್ಯರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ. ಇಂದು ಸಂಜೆ ಮುಖ್ಯಮಂತ್ರಿಗಳು ವೈದ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸರ್ಕಾರದೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ತಕ್ಷಣಕ್ಕೆ ಮುಷ್ಕರ ಹಿಂಪಡೆದು ರೋಗಿಗಳ ಬಗ್ಗೆ ಗಮನಹರಿಸಿ ಎಂದು ಕೋರ್ಟ್ ತಿಳಿಸಿತು.

Leave a Reply