ಐಎಸ್ಎಲ್ ಕಾಳಗಕ್ಕೆ ಬೆಂಗಳೂರು ಎಫ್ ಸಿ ಎಂಟ್ರಿ! ಭಾರತೀಯ ಫುಟ್ಬಾಲ್ ನಲ್ಲಿ ಮತ್ತೊಂದು ಗರಿ ಗೆಲ್ಲಲು ಚೆಟ್ರಿ ಪಡೆ ತವಕ

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರು ಎಫ್ ಸಿ ಅಸ್ಥಿತ್ವಕ್ಕೆ ಬಂದ ನಾಲ್ಕೇ ವರ್ಷದಲ್ಲಿ ಭಾರತೀಯ ಫುಟ್ಬಾಲ್ ಅನ್ನು ಏಷ್ಯಾ ಖಂಡವೇ ತಿರುಗಿ ನೋಡುವಂತೆ ಮಾಡಿರುವ ವೃತ್ತಿಪರ ಫುಟ್ಬಾಲ್ ತಂಡ. ಈಗಾಗಲೇ ಐಲೀಗ್, ಫೆಡರೇಷನ್ ಕಪ್ ಗರಿಗಳನ್ನು ಮುಡಿಗೇರಿಸಿಕೊಂಡಿರುವ ಬೆಂಗಳೂರು ಎಫ್ ಸಿ ಈಗ ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿದೆ.

ಈಗಾಗಲೇ ಮೂರು ಆವೃತ್ತಿಗಳನ್ನು ಕಂಡಿರುವ ಇಂಡಿಯನ್ ಸೂಪರ್ ಲೀಗ್ ಟೂರ್ನಿ ರಾಜ್ಯದ ಫುಟ್ಬಾಲ್ ಅಭಿಮಾನಿಗಳ ಚಿತ್ತವನ್ನು ಸಂಪೂರ್ಣವಾಗಿ ತನ್ನೆಡೆಗೆ ಸೆಳೆದುಕೊಂಡಿರಲಿಲ್ಲ. ಕಾರಣ, ರಾಜ್ಯವನ್ನು ಪ್ರತಿನಿಧಿಸುವ ಫ್ರಾಂಚೈಸಿ ತಂಡ ಈ ಟೂರ್ನಿಯಲ್ಲಿರಲಿಲ್ಲ. ಆದರೆ ಈ ಬಾರಿ ಬೆಂಗಳೂರು ಎಫ್ ಸಿ ಪದಾರ್ಪಣೆ ಮಾಡುತ್ತಿರುವುದು ರಾಜ್ಯದ ಫುಟ್ಬಾಲ್ ಅಭಿಮಾನಿಗಳಿಗೆ ಸಂತೋಷದ ವಿಚಾರ. ಈಗಾಗಲೇ ಫ್ರಾಂಚೈಸಿ ಆಧಾರಿತ ಟೂರ್ನಿಗಳಲ್ಲಿ ಐಪಿಎಲ್ ನಿಂದ ಹಿಡಿದು, ಪ್ರೋ ಕಬಡ್ಡಿ, ಐಬಿಎಲ್ ವರೆಗೂ ಬೆಂಗಳೂರು ಫ್ರಾಂಚೈಸಿ ಗಳು ತಮ್ಮದೇ ಆದ ರೀತಿಯಲ್ಲಿ ಸದ್ದು ಮಾಡಿವೆ. ಈಗ ಬೆಂಗಳೂರು ಎಫ್ ಸಿ ಫುಟ್ಬಾಲ್ ನಲ್ಲೂ ರಾಜ್ಯವನ್ನು ಪ್ರತಿನಿಧಿಸುತ್ತಿದೆ.

ಐಎಸ್ಎಲ್ ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲೇ ಬೆಂಗಳೂರು ಫ್ರಾಂಚೈಸಿಯನ್ನು ನಿಗದಿ ಮಾಡಲಾಗಿತ್ತು. ಈ ಫ್ರಾಂಚೈಸಿಯನ್ನು ಸನ್ ನೆಟ್ವರ್ಕ್ ಸಮೂಹ ಖರೀದಿಸಿತ್ತು. ಆದರೆ ಇಲ್ಲಿ ಫುಟ್ಬಾಲ್ ಕ್ರೀಡಾಂಗಣದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಇಲ್ಲಿನ ಪಂದ್ಯಗಳನ್ನು ನೆರೆಯ ತಮಿಳುನಾಡು ರಾಜಧಾನಿ ಚೆನ್ನೈಗೆ ವರ್ಗಾಯಿಸಲಾಯಿತು. ನಂತರ ಅನೇಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರು ಫ್ರಾಂಚೈಸಿಯನ್ನು ಕೈಬಿಟ್ಟ ಟೂರ್ನಿ ಆಯೋಜಕರು ಚೆನ್ನೈ ಫ್ರಾಂಚೈಸಿಗೆ ಅವಕಾಶ ಮಾಡಿಕೊಟ್ಟರು. ಐ ಲೀಗ್ ತಂಡವಾಗಿದ್ದ ಬೆಂಗಳೂರು ಎಫ್ ಸಿ ಈಗ ಕಂಠೀರವ ಕ್ರೀಡಾಗಣವನ್ನು ಹೊಂದಿದ್ದು, ಈ ಆವೃತ್ತಿಯಲ್ಲಿ ಐಎಸ್ಎಲ್ ಗೆ ಕಾಲಿಡುತ್ತಿದೆ.

ಭಾರತೀಯ ಫುಟ್ಬಾಲ್ ಧ್ರುವತಾರೆ ಎಂದೇ ಬಿಂಬಿತರಾಗಿರುವ ಸುನೀಲ್ ಚೆಟ್ರಿ ನಾಯಕತ್ವದಲ್ಲಿ ಹಾಗೂ ಸ್ಪೇನ್ ಮೂಲದ ಆಲ್ಬರ್ಟ್ ರೋಕಾ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಎಫ್ ಸಿ ತಂಡ ಈ ಬಾರಿ ಸದ್ದು ಮಾಡಲು ನಿರ್ಧರಿಸಿದೆ. ಇನ್ನು ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಂಡದ ರಾಯಭಾರಿಯಾಗಿರೋದು ನಮ್ಮ ಅಭಿಮಾನಿಗಳಿಗೆ ಇನ್ನಿಲ್ಲದ ಉತ್ಸಾಹ ತುಂಬಿದೆ. ಹೀಗಾಗಿ ಬೆಂಗಳೂರು ಎಫ್ ಸಿ ತಂಡ ಇತರೆ ತಂಡಗಳಿಗಿಂತ ಉತ್ತಮ ರೀತಿಯಲ್ಲಿ ತವರಿನ ಅಭಿಮಾನಿಗಳ ಬೆಂಬಲ ಪಡೆಯುವ ನಿರೀಕ್ಷೆ ಇದೆ.

ಐಎಸ್ಎಲ್ ನ ಇತರೆ ತಂಡಗಳಲ್ಲಿ ಖ್ಯಾತನಾಮರು ಮಾಲೀಕತ್ವ ಹೊಂದಿದ್ದಾರೆ. ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ ಅಟ್ಲೆಟಿಕೊ ಡಿ ಕೋಲ್ಕತಾ, ಸಚಿನ್ ತೆಂಡೂಲ್ಕರ್ ಕೇರಳ ಬ್ಲಾಸ್ಟರ್ಸ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗೋವಾ ಎಫ್ ಸಿ, ಬಾಲಿವುಡ್ ನಟರಾದ ಜಾನ್ ಅಬ್ರಾಹಂ ಡೆಲ್ಲಿ ಡೈನಮೋಸ್, ರಣಬೀರ್ ಕಪೂರ್ ಅವರ ಮುಂಬೈ ಎಫ್ ಸಿ, ಅಬಿಶೇಕ್ ಬಚ್ಚನ್ ಹಾಗೂ ರಜನಿಕಾಂತ್ ಬೆಂಬಲಿತ ಚೆನ್ನೈಯಿನ್ ಎಫ್ ಸಿ ತಂಡಗಳು ಈಗಾಗಲೇ ಟೂರ್ನಿಯಲ್ಲಿ ಆಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ.

ಈ ಬಾರಿ ಬಿಎಫ್ ಸಿ ತಂಡದ ಅಭಿಮಾನಿ ಪಡೆ ವೆಸ್ಟ್ ಬ್ಲಾಕ್ ಬ್ಲ್ಯೂಸ್ ಮೈದಾನದ ಗ್ಯಾಲರಿಯಿಂದಲೇ ಇತರೆ ತಂಡಗಳಿಗೆ ಸವಾಲೆಸೆಯಲು ಸಜ್ಜಾಗಿದೆ. ಬಿಎಫ್ ಸಿ ತಂಡದಲ್ಲಿ ಸುನೀಲ್ ಚೆಟ್ರಿ ಜತೆಗೆ ಭಾರತದ ಭರವಸೆಯ ಆಟಗಾರರಾದ ಗೋಲ್ ಕೀಪರ್ ಗುರ್ ಪ್ರೀತ್ ಸಿಂಗ್ ಸಂಧು, ರಾಲ್ಟೆ, ಹರ್ಮಾನ್ ಜೋತ್ ಖಬ್ರಾ, ಉದಾಂತ ಸಿಂಗ್ ಅವರ ಜತೆಗೆ ವಿದೇಶಿ ಆಟಗಾರರಾದ ಸ್ಪೇನಿನ ಜುವಾನನ್, ಎಜು ಗಾರ್ಸಿಯಾ, ಟೋನಿ, ಡಿಮಾಸ್ ಡೆಲ್ಗಾಡೊ, ಆಸ್ಟ್ರೇಲಿಯಾದ ಎರಿಕ್ ಪಾರ್ತಲು ಸಾಥ್ ನೀಡಲಿದ್ದಾರೆ.

ಸಕಲ ತಯಾರಿಗಳೊಂದಿಗೆ ಐಎಸ್ಎಲ್ ಟೂರ್ನಿಯಲ್ಲಿ ಮಿಂಚು ಹರಿಸಲು ಬೆಂಗಳೂರು ಎಫ್ ಸಿ ಸನ್ನದ್ಧವಾಗಿದ್ದು, ನಮ್ಮ ಬ್ಲ್ಯೂಸ್ ತಂಡ ಅಭಿಮಾನಿಗಳಿಂದ ಉತ್ತಮ ಬೆಂಬಲದ ನಿರೀಕ್ಷೆಯಲ್ಲಿದೆ. ಟೂರ್ನಿಗೆ ಇಂದಿನಿಂದ ಚಾಲನೆ ದೊರೆಯಲಿದ್ದು, ಇಂದು ರಾತ್ರಿ 8 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ತಂಡ ಸವಾಲೆಸೆಯಲಿದೆ. ಇನ್ನು ಭಾನುವಾರ ಬೆಂಗಳೂರು ಎಫ್ ಸಿ ತಂಡ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೆಣಸಲಿದೆ.

Leave a Reply