ಸರ್ಕಾರದ ಸಂಧಾನ ಯಶಸ್ವಿ- ವೈದ್ಯರ ಮುಷ್ಕರ ವಾಪಸ್, ಪ್ರತಿಭಟನೆ ಮಾಡಿದ ವೈದ್ಯರಿಗೆ ಹೈಕೋರ್ಟ್ ತರಾಟೆ

ಡಿಜಿಟಲ್ ಕನ್ನಡ ಟೀಮ್:

ಕಳೆದ ಐದು ದಿನಗಳಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ವೈದ್ಯರು ಹಾಗು ಸರ್ಕಾರದ ನಡುವಣ ಹಗ್ಗಜಗ್ಗಾಟ ಕಡೇಗೂ ಅಂತ್ಯ ಕಂಡಿದೆ. ಖಾಸಗಿ ವೈದ್ಯಕೀಯ ನಿಯಂತ್ರಣ ಮಸೂದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಇಂದು ಸರ್ಕಾರ ಹಾಗೂ ಭಾರತೀಯ ವೈದ್ಯರ ಸಂಘದ ನಡುವಣ ಸಂಧಾನ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರ ವಾಪಸ್ ತೆಗೆದುಕೊಂಡಿದ್ದಾರೆ.

ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈವರೆಗೂ ರೋಗಿಗಳು ಸತ್ತಿರುವುದಕ್ಕೆ ಮುಷ್ಕರವೇ ಕಾರಣವೇ? ಎಂದು ಪ್ರಶ್ನಿಸಿ ಮಾಧ್ಯಮದವರ ಮೇಲೆ ಆಕ್ರೋಶಗೊಂಡರು. ಅಲ್ಲದೆ ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರದಿಂದ ನೂರಾರು ಜನ ಸತ್ತರು ಅದಕ್ಕೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಮಧ್ಯೆ ಎಳೆದು ನುಣುಚಿಕೊಳ್ಳಲು ಯತ್ನಿಸಿದರು.

ಇನ್ನು ಸರ್ಕಾರದ ಮೂಲಗಳ ಪ್ರಕಾರ ತಿದ್ದುಪಡಿ ವಿಧೇಯಕದಲ್ಲಿ ಕೆಲವು ಮಾರ್ಪಾಡು ಮಾಡಲಾಗುವುದು. ತಪ್ಪಿತಸ್ಥ ವೈದ್ಯರಿಗೆ ಜೈಲು ಶಿಕ್ಷೆ ಬದಲು ದಂಡ ವಿಧಿಸಲಾಗುವುದು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಸುದೀರ್ಘ ಐದು ದಿನಗಳ ಕಾಲ ರೋಗಿಗಳನ್ನು ಗೋಳಾಡಿಸಿದ ಸರ್ಕಾರ ಹಾಗೂ ವೈದ್ಯರ ನಡುವಣ ಗುದ್ದಾಟ ಈಗ ಅಂತ್ಯವಾಗಿರೋದು ನೆಮ್ಮದಿಯ ಸಂಗತಿ.

ಈ ಸಂಧಾನ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ರಮೇಶ್ ಕುಮಾರ್, ‘ಈ ಹೋರಾಟದಲ್ಲಿ ಜನ ಸಾಮಾನ್ಯ ಗೆದ್ದಿದ್ದಾನೆ. ನಾನು ಹೇಳಿದ ಅಂಶಗಳಲ್ಲಿ ಯಾವುದೂ ಬದಲಾಗಿಲ್ಲ. ಕೆಲವು ಸಣ್ಣ ಪುಟ್ಟ ಮಾರ್ಪಾಡು ಬಿಟ್ಟರೆ ಉಳಿದಂತೆ ನಾನು ಬಯಸಿದ್ದ ಎಲ್ಲಾ ತಿದ್ದುಪಡಿ ಯಥಾಪ್ರಕಾರ ಉಳಿದುಕೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಲೀಡರ್. ಅವರು ಎರಡು ಕಡೆಗಳನ್ನು ಸರಿಯಾಗಿ ಸಮತೋಲನ ಮಾಡಬೇಕಿದೆ. ಅವರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರು ನನಗೆ ಪ್ರೋತ್ಸಾಹ ನೀಡದಿದ್ದರೆ ನಾನು ಇವತ್ತು ಈ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಈ ತಿದ್ದುಪಡಿ ಮಸೂದೆ ಮುಂದಿನ ಸೋಮವಾರ ಮಂಡನೆ ಮಾಡುತ್ತೇವೆ. ವೈದ್ಯರಿಗೆ ಈ ಮಸೂದೆ ಕುರಿತಂತೆ ಯಾವುದೇ ಬೇಡಿಕೆ ಇರಲಿಲ್ಲ. ಬದಲಿಗೆ ಆತಂಕಗಳಿದ್ದವು. ಆ ಆತಂಕಗಳನ್ನು ನಾವು ಬಗೆಹರಿಸಿದ್ದೇವೆ. ಸಣ್ಣಪುಟ್ಟ ಬದಲಾವಣೆ ಹೊರತಾಗಿ ನಾನು ಅಧಿವೇಶನದಲ್ಲಿ ಹೇಳಿದ ಅಷ್ಟೂ ಪ್ರಮುಖ ಅಂಶಗಳನ್ನು ಉಳಿಸಿಕೊಳ್ಳಲಾಗಿದೆ.’

ಇದಕ್ಕೂ ಮುನ್ನ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತು. ವೈದ್ಯರಿಗೆ ನ್ಯಾಯಾಲಯ ಕೊಟ್ಟ ಮಾತಿನ ಏಟು ಹೀಗಿತ್ತು…

‘ವೈದ್ಯರಿಗೆ ಆಗಿರುವ ನಷ್ಟವನ್ನು ಭರಿಸಬಹುದು. ಆದರೆ ರೋಗಿಗಳಿಗೆ ಆಗಿರುವ ನಷ್ಟ ಭರಿಸಲು ಸಾಧ್ಯವೇ? ಮಸೂದೆಯನ್ನು ಪ್ರಶ್ನಿಸಲು ಕಾನೂನು ಇದೆ. ಕೋರ್ಟ್ ಇದೆ. ಮಸೂದೆ ಮಂಡನೆಯಾಗುವ ಮುನ್ನವೇ ಈ ರೀತಿ ಬೀದಿಗಿಳಿದು ಪ್ರತಿಭಟನೆ ಮಾಡಿ ರೋಗಿಗಳಿಗೆ ಅನ್ಯಾಯ ಮಾಡುವುದು ಎಷ್ಟು ಸರಿ? ಜನರ ಜೀವಗಳೊಂದಿಗೆ ಚೆಲ್ಲಾಟವಾಡುವ ನೀವು ಜವಾಬ್ದಾರಿಯುತ ನಾಗರೀಕರೇ? ಕೂಡಲೇ ನಿಮ್ಮ ಮುಷ್ಕರ ವಾಪಸ್ ಪಡೆದು, ನಿಮ್ಮ ಬಗ್ಗೆ ನಮಗಿರುವ ಗೌರವವನ್ನು ಉಳಿಸಿಕೊಳ್ಳಿ.

ವೈದ್ಯರ ಹೋರಾಟದ ಪರಿಣಾಮ ಇದೀಗ ಸಾಮಾನ್ಯ ಜನರ ಮೇಲೆ ಬೀರಿದೆ. ವೈದ್ಯರಿಗೆ ಸಮಸ್ಯೆ ಎದುರಾದರೆ ನ್ಯಾಯಾಲಯಕ್ಕೆ ಬರಲಿ. ಅದನ್ನು ಬಿಟ್ಟು ಮುಷ್ಕರ ಮಾಡುವುದು ಎಷ್ಟು ಸರಿ? ಮುಷ್ಕರ ಕಾನೂನು ಬಾಹೀರ ಎಂದು ವೈದ್ಯರಿಗೆ ತಿಳಿಯುವುದು ಉತ್ತಮ. ಅದೇ ರೀತಿ ಸರ್ಕಾರ ಕೂಡ ಸಾರ್ವಜನಿಕರ ಸಾವು ನೋವಿಗೆ ಮೂಕ ಪ್ರೇಕ್ಷಕವಾಗಿರಬಾರದು.’

Leave a Reply