ಮೂಡಿ ಶ್ರೇಯಾಂಕದಲ್ಲಿ ಭಾರತಕ್ಕೆ ಬಡ್ತಿ, ವಿಶ್ವ ಬ್ಯಾಂಕ್ ನಂತರ ಮೋದಿಯ ಕೈ ಹಿಡಿದ ಮತ್ತೊಂದು ಅಂತಾರಾಷ್ಟ್ರೀಯ ಸಂಸ್ಥೆ

ಡಿಜಿಟಲ್ ಕನ್ನಡ ಟೀಮ್:

ಸದ್ಯ ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ಅಮಾನ್ಯ ನಿರ್ಧರವನ್ನು ಮುಂದಿಟ್ಟುಕೊಂಡು ಪ್ರಧಾನಿನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಕುಸಿತ ಕಂಡಿದೆ ಎಂದು ದೂರಲಾಗುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಆರ್ಥಿಕತೆಯಲ್ಲಿ ಭಾರತದ ಸ್ಥಾನ ಏರಿಕೆ ಕಾಣುತ್ತಿರೋದು ಟೀಕಾಕಾರರ ಬಾಯಿ ಮುಚ್ಚಿಸಲು ಮೋದಿಗೆ ಅಸ್ತ್ರವಾಗುತ್ತಿವೆ.

ಇತ್ತೀಚೆಗಷ್ಟೇ ವಿಶ್ವ ಬ್ಯಾಂಕ್ ‘ನೆಮ್ಮದಿ ವ್ಯವಹಾರ’ ಮಾಡಲು ಅವಕಾಶ ಕಲ್ಪಿಸಿರುವ ರಾಷ್ಟ್ರಗಳ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಭಾರತ 30 ಸ್ಥಾನಗಳ ಜಿಗಿತ ಕಂಡು 100ನೇ ಸ್ಥಾನ  ಪಡೆದಿತ್ತು. ಈಗ ಅಂತಾರಾಷ್ಟ್ರೀಯ ಸಾಲ ಮಾಪನ ಸಂಸ್ಥೆ ಮೂಡಿ ಸಹ ತನ್ನ ಶ್ರೇಯಾಂಕದಲ್ಲಿ ಭಾರತಕ್ಕೆ ಬಡ್ತಿ ನೀಡಿದೆ. ನರೇಂದ್ರ ಮೋದಿ ಅವರ ಸರ್ಕಾರ ಜಿಎಸ್ಟಿ ಪದ್ಧತಿ ಜಾರಿ, ಬಯೋಮೆಟ್ರಿಕ್ ಆಧಾರ್ ಜೋಡಣೆಯ ಬ್ಯಾಂಕ್ ಖಾತೆ ವ್ಯವಸ್ಥೆ ಸೇರಿದಂತೆ ಕೇಂದ್ರ ಸರ್ಕಾರ ಆರ್ಥಿಕ ಕ್ಷೇತ್ರದಲ್ಲಿ ತೆಗೆದಕೊಂಡಿರುವ ಇತರೆ ಕ್ರಮಗಳ ಆಧಾರದ ಮೇಲೆ ಈ ಬಡ್ತಿ ನೀಡಿರುವುದಾಗಿ ಮೂಡಿ ವಿವರಿಸಿದೆ. ಇದರೊಂದಿಗೆ ಜಿಎಸ್ಟಿ ಹಾಗೂ ಇತರೆ ನಿರ್ಧಾರಗಳಿಂದ ಭಾರತಕ್ಕೆ ಆದ ಪ್ರಯೋಜನ ಏನು ಎಂದು ಕೇಳುತ್ತಿದ್ದವರಿಗೆ ಉತ್ತರ ಕೊಟ್ಟಂತಾಗಿದೆ.

ವಿಶೇಷ ಎಂದರೆ 14 ವರ್ಷಗಳ ನಂತರ ಮೂಡಿ ತನ್ನ ಶ್ರೇಯಾಂಕವನ್ನು ಪರಿಷ್ಕರಿಸಿದ್ದು, ಭಾರತಕ್ಕೆ Baa3 ಸ್ಥಾನದಿಂದ Baa2ಗೆ ಬಡ್ತಿ ನೀಡಲಾಗಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಹಾಗೂ ಕಂಪನಿಗಳಿಗೆ ಸುಲಭ ಹಾಗೂ ಕಡಿಮೆ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಅಷ್ಟೇ ಅಲ್ಲದೆ ಮೂಡಿ ಶ್ರೇಯಾಂಕದಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲೂ ಏರಿಕೆ ಕಾಣಲಾರಂಭಿಸಿದೆ. ಪರಿಣಾಮ ಮುಂಬೈ ಷೇರು ಸೂಚ್ಯಂಕದಲ್ಲಿ 414 ಅಂಕ ಜಿಗಿತ ಕಂಡಿದೆ.

ಇನ್ನು ಈ ಶ್ರೇಯಾಂಕದಲ್ಲಿ ಗಮನಿಸಬೇಕಾಗಿರುವ ಮತ್ತೊಂದು ಅಂಶ ಎಂದರೆ, ಭಾರತಕ್ಕೆ ಬಡ್ತಿ ಸಿಗುತ್ತಿರುವ ಸಂದರ್ಭದಲ್ಲೇ ಚೀನಾದ ಶ್ರೇಯಾಂಕ ಕುಸಿತ ಕಂಡಿದೆ. ಆ ಮೂಲಕ ಆರ್ಥಿಕ ಕ್ಷೇತ್ರದಲ್ಲಿ ಚೀನಾಗೆ ಭಾರತ ಯಾವ ರೀತಿ ಪೈಪೋಟಿ ನೀಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Leave a Reply