ಏರ್ ಟೆಲ್, ಐಡಿಯಾ ನಿದ್ದೆಗೆಡಿಸಿದ ನಂತರ ಜಿಯೋ ಕಣ್ಣು ಬಿದ್ದಿರೋದು ಫ್ಲಿಪ್ಕಾರ್ಟ್- ಅಮೇಜಾನ್ ಮೇಲೆ!

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ಪ್ರಬಲ ಕಂಪನಿಗಳಾದ ಏರ್ ಟೆಲ್ ಹಾಗೂ ಐಡಿಯಾ ಕಂಪನಿಗಳ ನಿದ್ದೆಗೆಡಿಸಿರುವ ರಿಲಾಯನ್ಸ್ ಜಿಯೋ ಈಗ ಇ ಮಾರುಕಟ್ಟೆ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾಗಿದೆ. ಅದರೊಂದಿಗೆ ಜಿಯೋ ಈ ಕ್ಷೇತ್ರದಲ್ಲಿ ಅದ್ಯಾವ ಟ್ರೆಂಡ್ ಸೃಷ್ಟಿ ಮಾಡಲಿದೆ. ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಕಂಪನಿಗಳಿಗೆ ಹೇಗೆ ತಲೆನೋವಾಗಲಿದೆ ಎಂಬ ಕುತೂಹಲ ಹೆಚ್ಚಿದೆ.

ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ರಿಲಾಯನ್ಸ್ ಮಾಲೀಕ ಮುಖೇಶ್ ಅಂಬಾನಿ ತನ್ನ ಉತ್ಪನ್ನಗಳಿಗೆ ಡಿಜಿಟಲ್ ಮಾರುಕಟ್ಟೆ ಕಲ್ಪಿಸುವುದರ ಜತೆಗೆ ಇತರೆ ಬ್ರ್ಯಾಂಡ್ ಗಳು ಹಾಗೂ ಕಿರಾಣಿ ಅಂಗಡಿ ಸಾಮಾನುಗಳಿಗೂ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ.

ಅಂಬಾನಿಯ ಈ ಹೊಸ ಮಾದರಿಯಲ್ಲಿ ಗ್ರಾಹಕರು ತಮ್ಮ ಅಕ್ಕಪಕ್ಕದ ಅಂಗಡಿಯಿಂದಲೇ ಜಿಯೋ ಡಿಜಿಟಲ್ ಕೂಪನ್ ಹಾಗೂ ಜಿಯೋ ಮನಿ ಆ್ಯಪ್ ಮೂಲಕ ತಮಗೆ ಬೇಕಾದ ಸಾಮಾಗ್ರಿ ಕೊಳ್ಳುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಮಾದರಿ ಪ್ರಯೋಗಾತ್ಮಕ ಹಂತದಲ್ಲಿದ್ದು, ಮುಂಬೈ, ಚೆನ್ನೈ ಮತ್ತು ಅಹ್ಮದಬಾದ್ ನಗರಗಳಲ್ಲಿನ ಅಂಗಡಿಗಳಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಇಲ್ಲಿ ಉತ್ತಮ ಫಲಿತಾಂಶ ಸಿಕ್ಕರೆ ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ದೇಶದಾದ್ಯಂತ ಈ ಡಿಜಿಟಲ್ ಮಾರುಕಟ್ಟೆಯನ್ನು ಜಿಯೋ ಆರಂಭಿಸಲಿದೆ.

ಒಟ್ಟಿನಲ್ಲಿ ಜಿಯೋನ ಈ ಪ್ರಯೋಗ ಯಶಸ್ವಿಯಾಗಿದ್ದೇ ಆದಲ್ಲಿ, ಇ ಮಾರುಕಟ್ಟೆಯಲ್ಲಿ ಪ್ರಬಲವಾಗಿ ಬೆಳೆದಿರುವ ಫ್ಲಿಪ್ಕಾರ್ಟ್ ಹಾಗೂ ಅಮೇಜಾನ್ ಕಂಪನಿಗಳಿಗೆ ಜಿಯೋ ಸೆಡ್ಡು ಹೊಡೆಯೋದು ಖಚಿತ.

Leave a Reply