ದೋಕಲಂ ವಿವಾದ ನಂತರ ಮೊದಲ ಬಾರಿಗೆ ಭಾರತ- ಚೀನಾ ಸಭೆ, ಚೀನಾ ಕುತಂತ್ರ ಬುದ್ಧಿ ಬಿಡದಿದ್ರೆ ಸಫಲವಾಗದು ಇಂತಹ ಸಭೆಗಳು

ಡಿಜಿಟಲ್ ಕನ್ನಡ ಟೀಮ್:

ದೋಕಲಂ ಗಡಿ ವಿವಾದ ಮುಕ್ತಾಯಗೊಂಡು ಎರಡು ತಿಂಗಳು ಪೂರ್ಣಗೊಂಡಿದೆ. ಈ ವಿವಾದದ ನಂತರ ಇದೇ ಮೊದಲ ಬಾರಿಗೆ ಭಾರತ ಹಾಗೂ ಚೀನಾ ನಡುವಣ ಸಹಕಾರ ಸಭೆ ಬೀಜೀಂಗ್ ನಲ್ಲಿ ಶುಕ್ರವಾರ ನಡೆದಿದೆ. ಈ ಸಭೆಯಲ್ಲಿ ಎರಡು ದೇಶಗಳ ಗಡಿ ಪರಿಸ್ಥಿತಿ ಸೇರಿದಂತೆ ಸಂಬಂಧ, ಸಹಕಾರ ವೃದ್ಧಿಯ ಕುರಿತಾಗಿ ಚರ್ಚೆ ನಡೆಸಲಾಗಿದೆ.

ಭಾರತ ಚೀನಾ ಗಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರ ಮತ್ತು ಸಲಹೆ ಕಾರ್ಯಸೂಚಿಯ 10ನೇ ಸಭೆ ಇದಾಗಿದೆ. ಉಭಯ ದೇಶಗಳು ಗಡಿಯಲ್ಲಿನ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ 2012ರಿಂದ ಈ ಸಭೆ ನಡೆಸಲಾಗುತ್ತಿದೆ. ಈ ಸಭೆಯ ನಂತರ ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಹೇಳಿರುವುದಿಷ್ಟು… ‘ಈ ಸಭೆಯಲ್ಲಿ ಉಭಯ ದೇಶಗಳು ಗಡಿಯಲ್ಲಿ ಶಾಂತ ಪರಿಸ್ಥಿತಿ ಕಾಯ್ದುಕೊಳ್ಳಲು ಪರಿಣಾಮಕಾರಿ ಚರ್ಚೆ ನಡೆಸಿವೆ. ಅಲ್ಲದೆ ಈ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಉಭಯ ದೇಶಗಳು ಪರಸ್ಪರ ಮಿಲಿಟರಿ ಬಲ ವೃದ್ಧಿಗೊಳಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿವೆ.’

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ ಭಾರತ ಹಾಗೂ ಚೀನಾ ನಡುವಣ ಸಂಬಂಧ ವೃದ್ಧಿಸಬೇಕು ಹಾಗೂ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಬೇಕಾದರೆ ಚೀನಾ ಮೊದಲು ತನ್ನ ದ್ವಿನೀತಿ ಬಿಡಬೇಕು. ಒಂದು ಕಡೆ ಪಾಕಿಸ್ತಾನದ ಜತೆ ಕೈಜೋಡಿಸಿ ಭಾರತದ ವಿರುದ್ಧ ಸಂಚು ನಡೆಸುವುದು ಹಾಗೂ ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ರಕ್ಷಣೆ ನೀಡುತ್ತಾ ಭಾರತಕ್ಕೆ ಹಿನ್ನಡೆಯಾಗುವಂತೆ ಮಾಡುತ್ತಿರುವ ಚೀನಾ ಮತ್ತೊಂದು ಕಡೆ ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಎದುರು ನೋಡುತ್ತಿದ್ದೇವೆ ಎಂಬ ಹೇಳಿಕೆ ನೀಡುತ್ತಿದೆ. ಚೀನಾಗೆ ನಿಜವಾಗಿಯೂ ಭಾರತದ ಸ್ನೇಹ ಸಂಬಂಧ ವೃದ್ಧಿಮಾಡಿಕೊಳ್ಳುವ ಆಸಕ್ತಿ ಇರುವುದೇ ಆದರೆ ಮೊದಲು ಪಾಕಿಸ್ತಾನ ಜತೆ ಸೇರಿಕೊಂಡು ಪಿತೂರಿ ನಡೆಸುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಇಂತಹ ಎಷ್ಟೇ ಸಭೆಗಳು ನಡೆದರು, ಚರ್ಚೆ ನಡೆಸಿದರೂ ಯಾವುದು ಪರಿಣಾಮಕಾರಿ ಸ್ನೇಹ ವೃದ್ಧಿಗೆ ಸಹಕಾರಿಯಾಗುವುದಿಲ್ಲ.

Leave a Reply