ಜಂಟಿ ಚಂದ್ರಯಾನಕ್ಕೆ ಭಾರತ- ಜಪಾನ್ ತೀರ್ಮಾನ, ಚಂದ್ರನ ತುಣುಕು ತರಲು ಉಭಯ ದೇಶಗಳ ಚಿಂತನೆ

ಡಿಜಿಟಲ್ ಕನ್ನಡ ಟೀಮ್:

ಇತ್ತಿಚಿನ ದಿನಗಳಲ್ಲಿ ಭಾರತ ಹಾಗೂ ಜಪಾನ್ ಬಾಂಧವ್ಯ ದಿನೇ ದಿನೇ ಗಟ್ಟಿಯಾಗುತ್ತಾ ಸಾಗುತ್ತಿದೆ. ಮುಂಬೈ- ಅಹಮದಾಬಾದ್ ಬುಲೆಟ್ ರೈಲು ಯೋಜನೆಯಿಂದ ಹಿಡಿದು ಅರುಣಾಚಲ ಪ್ರದೇಶ ಅಭಿವೃದ್ಧಿಯವರೆಗೂ ಜಪಾನ್ ಭಾರತದ ಜತೆ ಕೈಜೋಡಿಸಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಭಾರತ- ಜಪಾನ್ ಕೈಜೋಡಿಸಲು ಮುಂದಾಗಿದೆ.

ಹೌದು, ಭಾರತ ಹಾಗೂ ಜಪಾನ್ ಜಂಟಿಯಾಗಿ ಚಂದ್ರಯಾನ ಮಾಡಲು ನಿರ್ಧರಿಸಿದೆ. ಚಂದ್ರನ ತುಣುಕನ್ನು ಭೂಮಿಗೆ ತರುವ ಬಗ್ಗೆಯು ಉಭಯ ದೇಶಗಳು ಚಿಂತನೆ ನಡೆಸಿವೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಎಸ್ ಕಿರಣ್ ಕುಮಾರ್ ಹಾಗೂ ಜಪಾನ್ ಬಾಹ್ಯಾಕಾಶ ಸಂಸ್ಥೆ ಅಧ್ಯಕ್ಷ ನೌಕಿ ಒಕಮರಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವುದು ಹೀಗೆ…

‘ಮುಂದಿನ ಎರಡು ತಿಂಗಳಲ್ಲಿ ಎರಡು ದೇಶಗಳ ಒಪ್ಪಂದದಂತೆ ಜಂಟಿ ಚಂದ್ರಯಾನ ಯೋಜನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಮಾಡುತ್ತೇವೆ. ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ನಿರಂತರ ಪ್ರಯತ್ನದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡಲು ಉಭಯ ದೇಶಗಳು ಕೈಜೋಡಿಸಲು ತೀರ್ಮಾನಿಸಿವೆ. ಅದರ ಭಾಗವಾಗಿ ಈ ಚಂದ್ರಯಾನ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ.’

1970ರಲ್ಲಿ ರಷ್ಯಾ ತನ್ನ ವಿಜ್ಞಾನಿಗಳನ್ನು ಚಂದ್ರನತ್ತ ಕಳುಹಿಸಿ ಅದರ ತುಣುಕು ತಂದಿತ್ತು. ರಷ್ಯಾಕೆ ಪೈಪೋಟಿ ನೀಡಲು ಅಮೆರಿಕ 1972ರಲ್ಲಿ ಚಂದ್ರಯಾನ ಮೂಲಕ ತನ್ನ ವಿಜ್ಞಾನಿಗಳನ್ನು ಕಳುಹಿಸಿತ್ತು.ಆ ನಂತರ ಸುಮಾರು ನಾಲ್ಕು ದಶಗಳವರೆಗೆ ಇಂತಹ ಪ್ರಯತ್ನ ನಡೆದಿಲ್ಲ. ಕಳೆದ ಒಂದು ದಶಕಗಳಲ್ಲಿ ಅನೇಕ ರಾಷ್ಟ್ರಗಳು ಮತ್ತೆ ಚಂದ್ರಯಾನ ಮಾಡಲು ಪೈಪೋಟಿ ನಡೆಸುತ್ತಿವೆ. ಈ ಚಂದ್ರಯಾನದಿಂದ ಭೂಮಿಯ ಉಪಗ್ರಹಇಂಧನ ಮೂಲ, ಮಾನವನ ಉಳಿಯುವಿಕೆಗೆ ಅಲ್ಲಿನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಯೋಗ್ಯ ಎಂಬುದರ ಕುರಿತಾಗಿ ಅಧ್ಯಯನ ನಡೆಸಲು ವಿಜ್ಞಾನಿಗಳು ಉತ್ಸುಕರಾಗಿದ್ದಾರೆ.

ಭಾರತ 2008ರಲ್ಲಿ ಮೊದಲ ಬಾರಿಗೆ ನಡೆಸಿದ ಚಂದ್ರಯಾನ-1 ಯಶಸ್ವಿಯಾಗಿತ್ತು. ಅಲ್ಲದೇ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಇಸ್ರೋ ತಾನೇ ಚಂದ್ರಯಾನ-2 ಮಾಡಲು ನಿರ್ಧರಿಸಿದ ಪರಿಣಾಮ ರಷ್ಯಾ ಜತೆಗಿನ ಜಂಟಿ ಯೋಜನೆ ಅರ್ಧಕ್ಕೆ ನಿಂತುಹೋಯಿತು. ಇಸ್ರೋದ ಈ ಯೋಜನೆ ಚಂದ್ರನ ನಕ್ಷೆಯನ್ನು ಪಡೆಯುವುದಾಗಿದ್ದು, ಈ ಯೋಜನೆಯನ್ನು ಮುಂದಿನ ವರ್ಷ ಮಾರ್ಚ್ ವೇಳೆಗೆ ಆರಂಭಿಸಲಾಗುವುದು ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದ್ದಾರೆ.

ಭಾರತದ ಜತೆಗೆ ಜಪಾನ್ ಕೂಡ ಚಂದ್ರಯಾನ ಯೋಜನೆಯಲ್ಲಿ ಯಶಸ್ಸು ಸಾಧಿಸಿದ್ದು, ಕಳೆದ ಅಕ್ಟೋಬರ್ ನಲ್ಲಿ ಜಪಾನ್ ಕಳುಹಿಸಿದ್ದ ಲುನಾರ್ ರಾಡರ್ ಸೌಂಡರ್ ಚಂದ್ರನಲ್ಲಿರುವ 50 ಕಿ.ಮೀ ಉದ್ದದ ಸುರಂಗವನ್ನು ಪತ್ತೆಹಚ್ಚಿತ್ತು.

ಹೀಗೆ ಚಂದ್ರಯಾನದಲ್ಲಿ ತನ್ನದೇ ಆದ ಯಶಸ್ಸು ಸಾಧಿಸಿರುವ ಭಾರತ ಹಾಗೂ ಜಪಾನ್ ಈಗ ಜಂಟಿಯಾಗಿ ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸಿ ಅದರ ಮಾದರಿಯನ್ನು ತರಲು ಸಿದ್ಧತೆ ನಡೆಸುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಎರಡು ರಾಷ್ಟ್ರಗಳ ಸಹಯೋಗ ಮುಂದಿನ ದಿನಗಳಲ್ಲಿ ಉಭಯ ದೇಶಗಳ ಜನರಿಗೆ ಹೆಚ್ಚಿನ ಪ್ರಯೋಜನವಾಗುವ ನಿರೀಕ್ಷೆ ಹುಟ್ಟಿಸಿದೆ.

Leave a Reply