ಇಂದಿರಾಗಾಂಧಿ ಜನ್ಮಶತಮಾನೋತ್ಸವ: ಕೋಮುವಾದಿಗಳ ವಿರುದ್ಧದ ಹೋರಾಟವೇ ಇಂದಿರಾರವರಿಗೆ ಸಲ್ಲಿಸೋ ಗೌರವ ಎಂದ ಸಿಎಂ

ಡಿಜಿಟಲ್ ಕನ್ನಡ ಟೀಮ್:

‘ದೇಶದ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ದೇಶದ ಏಕತೆ, ಸಮಗ್ರತೆ ಹಾಗೂ ಭಾವೈಕ್ಯತೆಗಾಗಿ ಹೋರಾಟ ಮಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಶ್ರೀಮತಿ ಇಂದಿರಾ ಗಾಂಧಿಯವರಿಗೆ ನಾವೆಲ್ಲರೂ ಗೌರವ ಅರ್ಪಿಸಬೇಕು…’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ಇಂದಿರಾ ಅವರ ಜನ್ಮ ಶತಮಾನೋತ್ಸವದ ವೇಳೆ ರಾಜ್ಯದ ಜನರಿಗೆ ಕೊಟ್ಟ ಸಂದೇಶ.

ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಇಂದಿರಾಗಾಂಧಿಯವರ ನೂರನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಯವರು ಇಂದಿರಾ ಅವರ ಸ್ಮರಣೆ ಮಾಡುವುದರ ಜತೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇದ್ರ ಮೋದಿ ವಿರುದ್ಧ ಕಿಡಿಕಾರಿದರು. ಈ ವೇಳೆ ಸಿದ್ರಾಮಯ್ಯ ಅವರು ಹೇಳಿದಿಷ್ಟು…

‘ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ನೋಟು ಅಮಾನ್ಯ ಮಾಡಿ ಬಡವರ ಪಾಲಿಗೆ ಬ್ಯಾಂಕ್ ಬಾಗಿಲು ಮುಚ್ಚಿದರು. ಆದರೆ ಶ್ರೀಮತಿ ಇಂದಿರಾ ಗಾಂಧಿಯವರು ದೇಶದಲ್ಲಿ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿ ಬಡವರಿಗೆ ಬಾಗಿಲು ತೆರೆದಿದ್ದರು. ದೇಶಕ್ಕಾಗಿ ಪ್ರಾಣತೆತ್ತ ಇಂದಿರಾ ಗಾಂಧಿಯವರು ಮಹಾನ್ ನಾಯಕಿ. ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾದ ಬಡವರ ಹಸಿವು ನೀಗಿಸುವ ಹಸಿವು ಮುಕ್ತ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ 500 ಇಂದಿರಾ ಕ್ಯಾಂಟೀನ್ ಗಳನ್ನು ಜನವರಿ ಒಂದರಿಂದ ಪ್ರಾರಂಭಿಸಲಾಗುವುದು.

ಬಿಜೆಪಿಯ ಗುರಿ ಇರುವುದು ಕಾಂಗ್ರೆಸ್ ಮುಕ್ತ ಕರ್ನಾಟಕ, ಆದರೆ ಕಾಂಗ್ರೆಸ್ ಪಕ್ಷದ ಬದ್ದತೆ ಇರೋದು ಹಸಿವು ಮುಕ್ತ ಕರ್ನಾಟಕ. ಕೋಮುವಾದಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ ಕೋಮು ಗಲಭೆಗಳ ಸೃಷ್ಟಿ ಸೇರಿದಂತೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ನಮ್ಮ ನಾಯಕರಾದ ನೆಹರೂ,ರಾಜೀವ್ ಗಾಂಧಿ, ಶ್ರೀಮತಿ ಇಂದಿರಾ ಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ದೇಶಕಂಡ ಉಕ್ಕಿನ ಮಹಿಳೆ. ದೇಶದಲ್ಲಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ನಮ್ಮ ನಾಯಕರಿಗೆ ಗೌರವ ಸಲ್ಲಿಸೋಣ.

ಕಾಂಗ್ರೆಸ್ ಪಕ್ಷದ ಬುನಾದಿ ತ್ಯಾಗ, ಬಲಿದಾನದ ಮೇಲಿದೆ. ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ವರಿಗೂ ಆರೋಗ್ಯ ಭಾಗ್ಯ ನೀಡಲಿದೆ. ಇದಕ್ಕಾಗಿ ಸಾರ್ವತ್ರಿಕ ಆರೋಗ್ಯ ಯೋಜನೆ ರೂಪುಗೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಬಿಜೆಪಿ ಸುಳ್ಳು ಹೇಳಿ ತಿರುಗಿದರೆ ನಾವು ಜನರಿಗೆ ಸತ್ಯದ ಅರಿವು ಮೂಡಿಸೋಣ.

Leave a Reply