ವಿಶ್ವ ಸುಂದರಿ ಗರಿ ಗೆದ್ದ ಮನುಷಿ ಚಿಲ್ಲರ್, ಪ್ರಶಸ್ತಿ ಸುತ್ತಿನಲ್ಲಿ ಆಕೆ ಕೊಟ್ಟ ಉತ್ತರ ಏನು? ಆಕೆಯ ಹಾದಿ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್:

ಈ ಬಾರಿಯ ವಿಶ್ವ ಸುಂದರಿ ಗರಿಯನ್ನು ಮುಡಿಗೇರಿಸಿಕೊಂಡಿರೋದು ಭಾರತದ ಮನುಷಿ ಚಿಲ್ಲರ್. 17 ವರ್ಷಗಳ ಬಳಿಕ ಮತ್ತೆ ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಮನುಷಿ ಪಾತ್ರರಾಗಿದ್ದಾರೆ. 2000ರಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ ಪ್ರಿಯಾಂಕ ಚೋಪ್ರಾ ನಂತರ ಈ ಸಾಧನೆ ಮಾಡಿದ್ದು ಮನುಷಿ ಚಿಲ್ಲರ್, ಅದರೊಂದಿಗೆ ಮನುಷಿ ವಿಶ್ವಸುಂದರಿ ಪಟ್ಟ ಅಲಂಕರಿಸಿದ ಭಾರತದ 6ನೇ ಮಹಿಳೆಯಾಗಿದ್ದಾರೆ.

ಮೂಲತಃ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮನುಷಿ, ಈ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಒಂದು ವರ್ಷದಿಂದ ವಿದ್ಯಾಬ್ಯಾಸಕ್ಕೆ ವಿರಾಮ ನೀಡಿದ್ದರು. ಈ ಸ್ಪರ್ಧೆಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಮನುಷಿ ಪ್ರಶಸ್ತಿ ಸುತ್ತಿನಲ್ಲಿ ನೀಡಿದ ಉತ್ತರ ತೀರ್ಪುಗಾರರ ಮನಗೆದ್ದಿತ್ತು. ಈ ಸುತ್ತಿನಲ್ಲಿ ತೀರ್ಪುಗಾರರು ‘ವಿಶ್ವದಲ್ಲಿ ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು?’ ಎಂದು ಕೇಳಿದರು. ಇದಕ್ಕೆ ಮನುಷಿ ನೀಡಿದ ಉತ್ತರ ಹೀಗಿತ್ತು…

‘ನಾನು ನನ್ನ ತಾಯಿಗೆ ತೀರಾ ಹತ್ತಿರವಾಗಿರುವುದರಿಂದ ತಾಯಿಗೆ ಅತಿ ಹೆಚ್ಚು ಗೌರವ ಸಿಗಬೇಕು ಎಂದು ಭಾವಿಸುತ್ತೇನೆ. ನೀವು ವೇತನದ ಬಗ್ಗೆ ಕೇಳಿದ್ದೀರಿ. ನನ್ನ ಪ್ರಕಾರ ವೇತನ ಕೇವಲ ಹಣಕ್ಕೆ ಮಾತ್ರ ಸೀಮಿತವಾಗಿದೆ. ಅದಕ್ಕಿಂತ ಮುಖ್ಯವಾಗಿ ನಾವು ನೀಡುವ ಪ್ರೀತಿ ಹಾಗೂ ಗೌರವ ಅದಕ್ಕಿಂತ ಮುಖ್ಯವಾಗಿದೆ. ನನಗೆ ನನ್ನ ತಾಯಿಯೇ ದೊಡ್ಡ ಪ್ರೇರಣೆ. ತಾಯಿ ತನ್ನ ಮಗುವಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ಹೀಗಾಗಿ ತಾಯಿಗೆ ಅತಿ ಹೆಚ್ಚಿನ ಸಂಭಾವನೆ ಅಥವಾ ಗೌರವ ಸಲ್ಲಬೇಕು.’

ಹೀಗೆ ತಮ್ಮ ಮಾತುಗಳಿಂದ ತೀರ್ಪಗಾರರ ಮನ ಗೆದ್ದು ವಿಶ್ವ ಸುಂದರಿ ಕಿರೀಟ ಅಲಂಕರಿಸಿರುವ ಮನುಷಿ ಚಿಲ್ಲರ್ ಅವರ ಈವರೆಗಿನ ಹಾದಿ ಹೇಗಿತ್ತು, ಅವರ ಹಿನ್ನೆಲೆ ಏನು ನೋಡೋಣ ಬನ್ನಿ….

  • 1997ರ ಮೇ 14ರಂದು ಮನುಷಿ ಚಿಲ್ಲರ್ ಹರ್ಯಾಣದಲ್ಲಿ ಜನಿಸಿದರು. ಈಕೆಯ ತಂದೆ ಡಾ.ಮಿತ್ರ ಬಸು ಚಿಲ್ಲರ್ ಡಿಆರ್ ಡಿಒದಲ್ಲಿ ಸಂಶೋಧಕರಾಗಿದ್ದಾರೆ. ತಾಯಿ ಡಾ.ನೀಲಂ ಅವರು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಅಂಡ್ ಅಲೈಡ್ ಸೈನ್ಸ್ ನಲ್ಲಿ ನ್ಯೂರೋಕೆಮಿಸ್ಟ್ರಿ ವಿಭಾಗದ ಸಹಾಯಕ ಪ್ರಾದ್ಯಾಪಕರಾಗಿದ್ದಾರೆ.
  • ನವದೆಹಲಿಯ ಸೆಂಟ್ ಥಾಮಸ್ ಶಾಲೆಯಲ್ಲಿ ವ್ಯಾಸಂಗ ನಂತರ ಹರ್ಯಾಣದ ಭಗತ್ ಪೂಲ್ ಸಿಂಗ್ ಸರ್ಕಾರಿ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
  • ಖ್ಯಾತ ಕುಚುಪುಡಿ ನೃತ್ಯ ಕಲಾವಿದರಾದ ರಾಜಾ ಮತ್ತು ರಾಧಾ ರೆಡ್ಡಿ ಹಾಗೂ ಕೌಶಲ್ಯ ರೆಡ್ಡಿ ಅವರ ಬಳಿ ನೃತ್ಯಭ್ಯಾಸ ಮಾಡಿದ್ದಾರೆ.
  • 2017ರ ಜೂನ್ 25 ರಂದು ಹರ್ಯಾಣದಿಂದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಮಿಸ್ ಫೋಟೊಜನಿಕ್ ಹಾಗೂ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದರು.
  • ಈಗ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, 118 ಸ್ಪರ್ಧಿಗಳ ಜತೆ ಪೈಪೋಟಿ ನಡೆಸಿ ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ಮನುಷಿ ಅವರಿಗೆ ಮಿಸ್ ಇಂಗ್ಲೆಂಡ್, ಮಿಸ್ ಫ್ರ್ಯಾನ್ಸ್, ಮಿಸ್ ಕೀನ್ಯಾ, ಮಿಸ್ ಮೆಕ್ಸಿಕೋ ಸ್ಪರ್ಧಿಗಳಿಂದ ಸ್ಪರ್ಧೆ ಎದುರಾಗಿತ್ತು.
  • ಕಂದು ಕಂಗಳು ಕಂದು ಕೂದಲು, 5.9 ಅಂಡಿ ಉದ್ದ ಇರುವ ಈ ಚೆಲುವೆ ತನ್ನ 20ನೇ ವಯಸ್ಸಿನಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾಳೆ.
    ಮನುಷಿಯ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ದೇಶದಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದ್ದು, ಪ್ರಿಯಾಂಕ ಚೋಪ್ರಾ ಸಹ ಈಕೆಯ ಮುಂದಿನ ಭವಿಷ್ಯಕ್ಕೆ ತನ್ನ ಸಲಹೆ ನೀಡಿದ್ದಾರೆ.

Leave a Reply