ರಾಫೆಲ್ ಯುದ್ಧ ವಿಮಾನ ಖರೀದಿ ವಿವಾದ: ಮೋದಿ ಒಪ್ಪಂದಕ್ಕೂ ಮನಮೋಹನ್ ಸಿಂಗ್ ಒಪ್ಪಂದಕ್ಕಿರೋ ವ್ಯತ್ಯಾಸವೇನು?

ಡಿಜಿಟಲ್ ಕನ್ನಡ ಟೀಮ್:

ರಾಫೆಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಕೇವಲ ಟೀಕೆಗೆ ಮಾತ್ರ ಸೀಮಿತವಾಗದೇ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಹಗರಣ ಎಂದು ಕರೆದಿದ್ದಾರೆ ವಿರೋಧ ಪಕ್ಷಗಳ ನಾಯಕರು. ಆದರೆ ಬಿಜೆಪಿ ನಾಯಕರು ಮಾತ್ರ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡಿದ್ದು, ತುರ್ತು ಸಮಯದಲ್ಲಿ ವಾಯು ಪಡೆಯ ಅಗತ್ಯತೆಗಾಗಿ ಈ ವಿಮಾನ ಖರೀದಿ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ.

ಈ ವಿಚಾರವಾಗಿ ನಿನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತರಾಮನ್ ಅವರಿಗೆ ಟ್ವಿಟರ್ ಮೂಲಕ ಪ್ರಶ್ನಿಸಿದ್ದು, ಪರೋಕ್ಷವಾಗಿ ಮೋದಿ ವಿರುದ್ಧ ಕಿಡಿ ಕಾರಿದ್ದರು.

ಕೇವಲ ಮೋದಿ ಸರ್ಕಾರ ಮಾತ್ರ ಈ ರಾಫೆಲ್ ಯುದ್ಧ ವಿಮಾನ ಖರೀದಿ ಮಾಡಿಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ಸಹ ರಾಫೆಲ್ ಯುದ್ಧ ವಿಮಾನ ಖರೀದಿಸಿತ್ತು. ಆದರೆ ಈಗ ಮೋದಿ ಸರ್ಕಾರ ಹೆಚ್ಚಿನ ಬೆಲೆ ನೀಡಿ ಈ ಯುದ್ಧ ವಿಮಾನ ಖರೀದಿಸುತ್ತಿದೆ ಎಂಬುದು ಕಾಂಗ್ರೆಸ್ ನಾಯಕರ ವಾದ. ಕಾಂಗ್ರೆಸ್ ನಾಯಕರ ಟೀಕೆಗೆ ಉತ್ತರಿಸಿರುವ ಸರ್ಕಾರ ಮೋದಿ ಅವರ ಯುದ್ಧ ವಿಮಾನ ಖರೀದಿಗೂ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಖರೀದಿಸಿದ್ದಕ್ಕೂ ವ್ಯಾತ್ಯಾಸವಿದೆ ಎನ್ನುತ್ತಿದೆ. ಹಾಗಾದರೆ ಆ ವ್ಯತ್ಯಾಸಗಳೇನು ನೋಡೋಣ ಬನ್ನಿ…

  • ಕೇಂದ್ರ ಸರ್ಕಾರದ ಪ್ರಕಾರ ಮೋದಿ ಸರ್ಕಾರದ ಅವಧಿಯಲ್ಲಿ 2016ರಲ್ಲಿ ರಾಫೆಲ್ ಯುದ್ಧ ವಿಮಾನ ಮಾರಾಟಕ್ಕೆ ನಿಗದಿ ಮಾಡಲಾಗಿದ್ದ ಬೆಲೆ 9.17 ಮಿಲಿಯನ್ ಯ್ಯೂರೋಗಳು. ಇದರಿಂದ ಪ್ರತಿ ರಾಫೆಲ್ ಯುದ್ಧ ವಿಮಾನಕ್ಕೆ ₹ 688.30 ಕೋಟಿ ತಗಲುತ್ತದೆ. ಆದರೆ ಯುದ್ಧ ವಿಮಾನಕ್ಕೆ ₹ 1500ರಿಂದ ₹1700 ಕೋಟಿ ನೀಡಲಾಗುತ್ತಿದೆ ಎಂಬ ವಾದ ಸುಳ್ಳು. ಫ್ರ್ಯಾನ್ಸ್ ಜತೆಗಿನ ಒಪ್ಪಂದದ ಪ್ರಕಾರ ಈ ಕರೀದಿಯ ಆರಂಭಿಕ ಬೆಲೆಯೇ ₹ 750 ಕೋಟಿಯಷ್ಟಾಗಿತ್ತು.
  • ಯುರೋಪಿನಲ್ಲಿ ಬೇಸ್ ಇಂಡೆಕ್ಸ್ ವ್ಯವಸ್ಥೆ ಇರುವುದರಿಂದ ಹಣದುಬ್ಬರದ ಆಧಾರದ ಮೇಲೆ ಇವುಗಳ ಬೆಲೆಯು ಏರುಪೇರಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡ ಮೋದಿ ಸರ್ಕಾರ ಹಣದುಬ್ಬರದ ಪ್ರಮಾಣವನ್ನು 3.9ಕ್ಕೆ ನಿಗದಿ ಮಾಡಿ ರಾಫೆಲ್ ಯುದ್ಧ ವಿಮಾನ ಖರೀದಿಗೆ ಮುಂದಾಗಿದೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ ಈ ರೀತಿ ಹಣ ದುಬ್ಬರದ ಪ್ರಮಾಣ ನಿಗದಿ ಮಾಡಿರಲಿಲ್ಲ. ಹೀಗಾಗಿ ಆಗಿನ ಒಪ್ಪಂದದ ಪ್ರಕಾರ ಮೊದಲ ಯುದ್ಧ ವಿಮಾನ ಖರೀದಿ ಮಾಡಿದ ನಂತರ ಯುದ್ಧ ವಿಮಾನ ಪೂರೈಕೆಯಾಗುವ ವೇಳೆಗೆ ಅದರ ಬೆಲೆ ಮತ್ತಷ್ಟು ಏರಿಕೆಯಾಗುತ್ತಿತ್ತು.
  • ಮೋದಿ ಸರ್ಕಾರದ ರಾಫೆಲ್ ಯುದ್ಧ ವಿಮಾನದಲ್ಲಿ ಭಾರತೀಯ ವಾಯು ಪಡೆಗೆ ಅಗತ್ಯಕ್ಕೆ ತಕ್ಕಂತೆ 13 ವಿಶೇಷ ಸವಲತ್ತುಗಳನ್ನು ಮಾಡಿಕೊಡಲಾಗಿದೆ. ಆದರೆ ಈ ವಿಶೇಷ ಸವಲತ್ತುಗಳು ಯುಪಿಎ ಸರ್ಕಾರದ ಅವಧಿಯಲ್ಲಿ ಇರಲಿಲ್ಲ. ಈ ವಿಶೇಷ ಸವಲತ್ತುಗಳಿಂದ ಭಾರತೀಯ ವಾಯು ಪಡೆಯ ರಾಡರ್ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಎದುರಾಳಿಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
  • ಮೋದಿ ಸರ್ಕಾರ ಖರೀದಿ ಮಾಡುತ್ತಿರುವ ರಾಫೆಲ್ ಯುದ್ಧ ವಿಮಾನದಲ್ಲಿ ಅತ್ಯುತ್ತನ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿದ್ದು, ಈ ಒಪ್ಪಂದದಲ್ಲಿ ಯುದ್ಧ ವಿಮಾನದಲ್ಲಿ ಮೆಟೆರೋ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಯುದ್ಧದ ಸಂದರ್ಭದಲ್ಲಿ ಅತ್ಯುನ್ನತ ಫೈರ್ ಪವರ್ ಹೊಂದಿರಲಿದೆ ಯುದ್ಧ ವಿಮಾನ. ಇದರ ಜತೆಗೆ ಯುಪಿಎ ಸರ್ಕಾರ ಖರೀದಿಸಿದ್ದ ಯುದ್ಧ ವಿಮಾನದಲ್ಲಿ ನೀಡದಿದ್ದ ವಿಶೇಷ ಸೌಲಭ್ಯ ನೀಡಲಾಗಿದೆ.

Leave a Reply