ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟಲು ದಿನಾಂಕ ಫಿಕ್ಸ್, ನೆಪಮಾತ್ರಕ್ಕೆ ಡಿ.16ರಂದು ಚುನಾವಣೆ ನಿಗದಿ

ಡಿಜಿಟಲ್ ಕನ್ನಡ ಟೀಮ್:

ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಹಲವು ವರ್ಷಗಳ ಚರ್ಚೆ ಈಗ ನಿಜವಾಗುತ್ತಿದೆ. ನೆಪಮಾತ್ರಕ್ಕೆ ಡಿಸೆಂಬರ್ 16ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದ್ದು, ರಾಹುಲ್ ಗಾಂಧಿಯ ಪಟ್ಟಾಭಿಶೇಕ ಬಹುತೇಕ ಖಚಿತ.

ಇಂದು ನವದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಸಾಗಿದ್ದು, ರಾಹುಲ್ ಅವರನ್ನು ಆಯ್ಕೆ ಮಾಡುವ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಡಿಸೆಂಬರ್ 1ರಂದು ಅಧ್ಯಕ್ಷ ಸ್ಥಾನದ ಚುನಾವಣೆಯ ಸೂಚನೆ ಹೊರಡಿಸುವುದು. ಡಿ.4ಕ್ಕೆ ನಾಮಪತ್ರ ಸಲ್ಲಿಸಲು ಅಂತಿಮ ದಿನ, ಡಿ.5ಕ್ಕೆ ಸೂಚನೆಯ ಪರಿಶೀಲನೆ ಹಾಗೂ ಅರ್ಹ ನಾಮಮತ್ರಗಳನ್ನು ಪ್ರಕಟಿಸುವುದು. ಡಿ.11 ನಾಮಪತ್ರ ಹಿಂಪಡೆಯಲು ಕಡೇಯ ದಿನಾಂಕ ಹಾಗೂ ಸ್ಪರ್ಧಿಗಳ ಅಂತಿಮ ಪಟ್ಟಿ, ಡಿ.16ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಾಗೂ ಡಿ.19 ರಂದು ಮತ ಏಣಿಕೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರ ಪ್ರಕಟಣೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಎಂದರೆ, ಕಳೆದ ಒಂದೂವರೆ ಅಥವಾ ಎರಡು ದಶಕಗಳಿಂದ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅಧಿಕಾರ ಸಾಧಿಸಿಕೊಂಡು ಬಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದಲೇ ರಾಹುಲ್ ಗಾಂಧಿಯವರನ್ನು ಸೋನಿಯಾ ಅವರ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂಬ ಚರ್ಚೆ ನಡೆದುಕೊಂಡು ಬಂದಿದೆ. ಇವೆಲ್ಲಕ್ಕೂ ಮುಖ್ಯವಾಗಿ 2019ರ ಚುನಾವಣೆ ಸಮೀಪಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಪ್ರಧಾನಿ ಅಭ್ಯರ್ಥಿಯಾಗಲಿದ್ದು, ಈ ಹಂತದಲ್ಲಿ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಬೇಕಿದೆ. ಪಕ್ಷದ ನಾಯಕತ್ವದ ಜವಾಬ್ದಾರಿ ರಾಹುಲ್ ವಹಿಸಿಕೊಳ್ಳಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಹೊರತಾಗಿ ಮತ್ತೊಬ್ಬರು ಪಕ್ಷದ ಅಧ್ಯಕ್ಷರಾಗೋದು ಆಗದ ಮಾತು. ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡುವುದು ಖಚಿತವಾದ ಮೇಲೆ ಈ ಚುನಾವಣೆ ಹಾಗೂ ಅದರ ಪ್ರಕ್ರಿಯೆಯ ಪ್ರಹಸನ ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸದ ಮೇಲೂ ಈ ಚುನಾವಣೆ ನಡೆಸುವುದರ ಹಿಂದೆ ಕೆಲವು ಲೆಕ್ಕಾಚಾರವೂ ಇದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬದ ಪಕ್ಷ ಎಂದು ಬಿಜೆಪಿ ಟೀಕೆ ಮಾಡುತ್ತಿದೆ. ಇತಂಹ ಸಂದರ್ಭದಲ್ಲಿ ರಾಹುಲ್ ಅವರನ್ನು ನೇರವಾಗಿ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೆ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಅದನ್ನು ದೂರ ಮಾಡುವ ಸಲುವಾಗಿ ನೆಪಮಾತ್ರಕ್ಕೆ ಚುನಾವಣೆ ನಡೆಸಲಾಗುತ್ತಿದೆ. ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ರಾಹುಲ್ ಗಾಂಧಿ ವಿರುದ್ಧ ಬೇರೆ ಯಾವುದೇ ಅಭ್ಯರ್ಥಿ ಸ್ಪರ್ಧಿಸದಿದ್ದರೆ, ರಾಹುಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿಕೊಳ್ಳುವ ಪ್ರಯತ್ನ ಕಾಂಗ್ರೆಸ್ ಕಡೆಯಿಂದ ನಡೆಯುತ್ತಿದೆ. ಯಾಕೆಂದರೆ ಈ ವರೆಗೂ ಪಕ್ಷದ ವಲಯದಲ್ಲಿ ರಾಹುಲ್ ಹೊರತಾಗಿ ಬೇರಾವುದೇ ನಾಯಕರ ಹೆಸರು ಈವರೆಗೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿಲ್ಲ.

ಇನ್ನು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ಮರು ದಿನ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗೆದ್ದವರ ಹೆಸರು ಪ್ರಕಟಿಸಲಾಗುವುದು. ಒಂದು ವೇಳೆ ಡಿ.18ಕ್ಕೂ ಮುನ್ನ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆ ಮಾಡಿದರೆ, ಎರಡು ರಾಜ್ಯಗಳ ಚುನಾವಣೆಯಲ್ಲಿ ಹಿನ್ನಡೆಯಾದರೆ ಬಿಜೆಪಿ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಎರಡು ರಾಜ್ಯಗಳ ವಿಧಾನ ಸಭೆ ಚುನಾವಣೆ ನಂತರವಷ್ಟೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಲು ತಯಾರಿ ನಡೆಸಲಾಗಿದೆ. ಆದರೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿ ಮುಂದಾಳತ್ವ ವಹಿಸಿದ್ದರು. ಹೀಗಾಗಿ ರಾಹುಲ್ ಡಿ.19ಕ್ಕೆ ಅಧ್ಯಕ್ಷರಾಗ್ತಾರೋ ಅಥವಾ ಅದಕ್ಕೂ ಮುಂಚಿತವಾಗಿಯೇ ಆಗ್ತಾರೋ ಆದರೆ ಈ ಚುನಾವಣೆಗಳ ಫಲಿಂತಾಶ ಸಕಾರಾತ್ಮಕ ಅಥವಾ ಋಣಾತ್ಮಕವಾಗಿ ಬಂದರೂ ಅದರ ಸಂಪೂರ್ಣ ಹೊಣೆ ಹೊರಬೇಕಿರುವುದು ರಾಹುಲ್ ಮಾತ್ರ.

Leave a Reply