‘ನಮ್ಮ ಕಾಂಗ್ರೆಸ್’ ಗುಪ್ತಮುಖವೇ ‘ಮತ್ತೊಮ್ಮೆ ಸಿದ್ದರಾಮಯ್ಯ’!

ರಾಜಕೀಯದಲ್ಲಿ ಅಧಿಕಾರದ ಮುಂದೆ ಎಲ್ಲವೂ ನಗಣ್ಯ. ಅಲ್ಲಿ ಯಾವ ಸಂಬಂಧಗಳಿಗಾಗಲಿ, ಭಾವನೆಗಳಿಗಾಗಲಿ ಬೆಲೆ ಇರೋದಿಲ್ಲ. ಆರ್ಥಿಕ ಅಧಿಕಾರಕ್ಕಿಂತ ರಾಜಕೀಯ ಅಧಿಕಾರವೇ ಪರಮೋಚ್ಛ. ಹೆಣ್ಣು, ಹೊನ್ನು, ಮಣ್ಣು ಯಾವುದೂ ರಾಜಕೀಯ ಅಧಿಕಾರಕ್ಕೆ ಸಮ ಅಲ್ಲ. ಇವ್ಯಾವುದರಿಂದಲೂ ಆ ಅಧಿಕಾರ ಅಳೆಯಲಾಗದು.  ಕೈಗೆ ಸಿಕ್ಕಷ್ಟು ಅಧಿಕಾರದ ದಾಹ ವೃದ್ಧಿಸುತ್ತಾ ಹೋಗುತ್ತದೆ. ಅದೊಂದು ತೀರದ ದಾಹ. ಇನ್ನೂ ಬೇಕು, ಇನ್ನೂ ಬೇಕು ಎನ್ನುವ ತಹತಹ ಅಧಿಕಾರವನ್ನೇ ಹಾಸಿಗೆ ಮಾಡಿಕೊಳ್ಳುತ್ತದೆ. ಈ ವಿಚಾರದಲ್ಲಿ ಮಾತ್ರ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವಂತಿಲ್ಲ. ಚಾಚಿದಷ್ಟೂ, ಬಾಚಿದಷ್ಟೂ ಬೇಕೆಂಬ ಹಪಾಹಪಿ.

ಅಧಿಕಾರ ಸಿಗುವವರೆಗೂ ಒಮ್ಮೆ ಸಿಕ್ಕರೆ ಸಾಕು, ಅದುವೆ ಬದುಕಿನ ಮುಕ್ತಿ ಎಂದು ಪರಿತಪಿಸುವವರು, ಅದು ಕೈಗೆ ಸಿಕ್ಕ ನಂತರ ನಿಲುವು ಬದಲಿಸುವ ಬಗೆಯೇ ರೋಚಕ. ಅದರ ರುಚಿ ಹತ್ತಿದ ಮೇಲೆ ‘ಬದುಕು ಇರುವವರೆಗೂ ಅಧಿಕಾರವನ್ನೇ ಕಾಣು’ ಎಂಬಲ್ಲಿಗೆ ಬಂದು ನಿಂತಿರುತ್ತಾರೆ. ಆ ಮಟ್ಟಿಗೆ ಅಧಿಕಾರದ ಅಮಲು ಅವರನ್ನು ಆವರಿಸಿಕೊಂಡಿರುತ್ತದೆ. ಮತ್ತೊಮ್ಮೆ ಯಾಕಾಗಬಾರದು, ಎಲ್ಲವೂ ನಾನೇ, ನನ್ನಿಂದಲೇ ಎಂಬ ಸ್ವಹಮಿಕೆ ಸುತ್ತಮುತ್ತಲ ಇರುವು, ಅರಿವು ಎರಡನ್ನೂ ನುಂಗಿ ಹಾಕಿರುತ್ತದೆ. ಕಣ್ಮುಚ್ಚಿದರೂ ಅಧಿಕಾರವೇ, ಕಣ್ದೆರದರೂ ಅಧಿಕಾರವೇ. ವಸ್ತುಸ್ಥಿತಿ ಏನಿರುತ್ತದೋ ಅದು ಬೇಕಿಲ್ಲ, ಗೊತ್ತಾಗುವ ಅಗತ್ಯವೂ ಇಲ್ಲ. ಆದರೆ ಇವತ್ತಿನ ಸವಾರಿ ತನ್ನದೇ ಆಗಿರಬೇಕು, ಮುಂದಿನ ಸವಾರಿಗೂ ಅದುವೇ ಪ್ರೇರಕಶಕ್ತಿ ಆಗಬೇಕು, ಮಾನದಂಡವೂ ಆಗಬೇಕು ಎಂಬ ಹಂಬಲ ಮನದ ತುಂಬೆಲ್ಲ.

ನಿಜ, ಈ ಅಧಿಕಾರದ ವಾಂಛೆ ಯಾರೊಬ್ಬರನ್ನು ಬಿಟ್ಟಿಲ್ಲ, ಇಲ್ಲದವನಿಗೆ ಸಿಗಬೇಕು, ಸಿಕ್ಕವನಿಗೆ ಇನ್ನೊಮ್ಮೆ ಬೇಕು. ಏನಾದರೂ ಆಗಲಿ ಮತ್ತೊಮ್ಮೆ, ಮಗದೊಮ್ಮೆ ಅದು ತನ್ನ ಕೈಯಲ್ಲೇ ಇರಬೇಕು ಎಂಬ ವರಾತಕ್ಕೆ ಬಿದ್ದ ರಾಜಕೀಯ ಜಗಜಟ್ಟಿಗಳು ಎಲ್ಲ ಪಕ್ಷದಲ್ಲೂ ಕಾಣಸಿಗುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಈಗ ನಾಯಕರಲ್ಲಿ ಅಧಿಕಾರದ ಬಗ್ಗೆ ಒಂದು ಸ್ಪಷ್ಟತೆ ಇದೆ. ಏನೇ ಆಗಲಿ ಅಧಿಕಾರ ಅನ್ನೋದು ತಮ್ಮ ಅಂಗಿಯ ಚುಂಗಾಗಬೇಕು ಅನ್ನೋದು ಅವರೆಲ್ಲರ ಅಭಿಲಾಷೆ. ಅದು ಕಾಂಗ್ರೆಸ್ ಇರಬಹುದು, ಬಿಜೆಪಿ ಇರಬಹುದು ಅಥವಾ ಜೆಡಿಎಸ್ ಇರಬಹುದು. ಹಿಂದೆ ಮುಖ್ಯಮಂತ್ರಿ ಆಗಿದ್ದವರಿಗೇ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವ ಬಯಕೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಪಟ್ಟ ಏರಲು ಕುರ್ಚಿ ಸಜ್ಜು ಮಾಡಿಕೊಂಡು ಕೂತಿದ್ದಾರೆ. ಬಿಜೆಪಿ ನಾಯಕರು ಸಿಎಂ ಅಭ್ಯರ್ಥಿ ಎಂದು ಈಗಾಗಲೇ ಯಡಿಯೂರಪ್ಪನವರ ಹೆಸರು ಘೋಷಣೆ ಮಾಡಿದ್ದರೆ, ಸಿದ್ದರಾಮಯ್ಯನವರು ಮೇಲಿಂದ ಮೇಲೆ ತಾವೇ ತಮ್ಮ ಹೆಸರು ಪ್ರಕಟಿಸಿಕೊಂಡಿದ್ದಾರೆ. ತಮ್ಮ ನೇತೃತ್ವದಲ್ಲೇ ಚುನಾವಣೆ, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಅವರು ಹೇಳಿದ್ದು ಕೇಳಿ ಬೇರೆ ಪಕ್ಷದವರಿರಲಿ ಕಾಂಗ್ರೆಸ್ ನಾಯಕರದೇ ಕಿವಿ ತೂತು ಬಿದ್ದು ಹೋಗಿದೆ. ಇನ್ನು ಜೆಡಿಎಸ್‌ನಲ್ಲಂತೂ ಕುಮಾರಸ್ವಾಮಿ ಅವರೇ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು!

ಅದೆಲ್ಲ ಇರಲಿ, ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ ಮತ್ತೆ ಸಿಎಂ ಆಗುವ ತಮ್ಮ ಕನಸು ನನಸು ಮಾಡಿಕೊಳ್ಳಲು ಸಿದ್ದರಾಮಯ್ಯನವರು ಎಲ್ಲ ರಾಜಕೀಯ ಪಟ್ಟುಗಳನ್ನು ಬಳಸುತ್ತಿದ್ದಾರೆ. ಅಹಿಂದ ಬೆನ್ನತ್ತಿ ಹೋಗಿರುವ ಅವರು ಯಾವುದೇ ಕಾರಣಕ್ಕೂ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸೇರಿದಂತೆ ಮೇಲ್ವರ್ಗದ ಮತಗಳನ್ನು ನಂಬಿಕೊಳ್ಳುವಂತಿಲ್ಲ. ಅಹಿಂದ ಪೈಕಿ ದಲಿತರಿಗೆ ಪರಮೇಶ್ವರ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಮೇಲೆ ಮುನಿಸಿದ್ದರೂ ಮುಂದಿನ ಬಾರಿಯಾದರೂ ಆಗಬಹುದೆನ್ನುವ ಕಾರಣಕ್ಕೆ ಪಕ್ಷದ ಜತೆಗೆ ಉಳಿಯಬಹುದು. ಅಹಿಂದ ನಂಬಿಕೊಂಡರೂ ಆ ವರ್ಗದ ಪೈಕಿ ಯಾರ್ಯಾರೂ ಹೊಸದಾಗಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಹೊರ–ಹೊಮ್ಮುತ್ತಾರೋ ಗೊತ್ತಿಲ್ಲ. ಹೀಗಾಗಿ ತಮ್ಮದೇ ಆದ ಕುರುಬ ಸಮುದಾಯದ ಪಡೆ ಕಟ್ಟಿಕೊಳ್ಳಬೇಕೆಂಬ ವಾಂಛೆ ಅವರಲ್ಲಿ ಹುಟ್ಟಿಕೊಂಡಿದೆ. ಅದು ಹುಟ್ಟಿಕೊಂಡಿದೆ ಎನ್ನುವುದಕ್ಕಿಂಥ ಸಮುದಾಯದ ಚಿಂತಕ ಪಡೆ ಅಂಥದ್ದೊಂದು ಸಲಹೆಯನ್ನು ಸಿದ್ದರಾಮಯ್ಯನವರಿಗೆ ಕೊಟ್ಟಿದೆ. ತತ್ಪರಿಣಾಮವೇ ಕೋಲಾರ ಶಾಸಕ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ನಮ್ಮ ಕಾಂಗ್ರೆಸ್’ ಎಂಬ ಹೊಸ ಪಕ್ಷ!

ಇದು ಮೇಲ್ನೋಟಕ್ಕೆ ವರ್ತೂರು ಪ್ರಕಾಶ್ ಪಕ್ಷದಂತೆ ಕಂಡರೂ ಆಂತರ್ಯದಲ್ಲಿರುವುದು ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಸಿಎಂ ಮಾಡುವ ಅಭಿಯಾನದ ಪೂರಕ ಶಕ್ತಿಯಾಗಿ ಕೆಲಸ ಮಾಡುವ ತಂತ್ರಗಾರಿಕೆ. ಮೂಲ ಯೋಜನೆ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ ಕುರುಬ ಮತದಾರರು ನಿರ್ಣಾಯಕ ಸ್ಥಾನದಲ್ಲಿರುವ 30 ರಿಂದ 35 ಕ್ಷೇತ್ರಗಳಲ್ಲಿ ಕುರುಬ ಅಭ್ಯರ್ಥಿಗಳನ್ನು ‘ನಮ್ಮ ಕಾಂಗ್ರೆಸ್’ ಪಕ್ಷದ ಅಡಿ ಕಣಕ್ಕಿಳಿಸುವುದು. ಅವರಿಗೆ ಚುನಾವಣೆ ಸಂಪನ್ಮೂಲ ಸಿದ್ದರಾಮಯ್ಯ ಕೃಪಾಪೋಷಿತವೇ. ಕುರುಬ ಮತದಾರರ ಜತೆಗೆ ಅಹಿಂದ ಮತದಾರರು ಈ ಅಭ್ಯರ್ಥಿಗಳ ಬೆನ್ನಿಗೆ ನಿಲ್ಲುವಂತೆ ನೋಡಿಕೊಳ್ಳುವುದು. ಇವರಲ್ಲಿ ಗೆದ್ದು ಬಂದವರೆಲ್ಲರೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಬೆಂಬಲ ನೀಡುವುದು. ವರ್ತೂರು ಪ್ರಕಾಶ್ ಅವರ ಕೋಲಾರ ಫಾರಂ ಹೌಸನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಇಂಥದ್ದೊಂದು ರಣತಂತ್ರವನ್ನು ಹೆಣೆಯಲಾಗಿದೆ.

ಸಿದ್ದರಾಮಯ್ಯನವರು 30 ರಿಂದ 35 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ. ಅಷ್ಟೂ ಮಂದಿಗೆ ಬಿ ಫಾರಂ ಕೊಡಲಾಗುವುದಿಲ್ಲ. ಮುಂದೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿರುವ ಡಾ. ಜಿ. ಪರಮೇಶ್ವರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕುರುಬ ಸಮುದಾಯದ ಅಷ್ಟೊಂದು ಮಂದಿಗೆ ಟಿಕೆಟ್ ಕೊಡಲು ಅವರೂ ಬಿಡುವುದಿಲ್ಲ. ಮೇಲಾಗಿ ಹೈಕಮಾಂಡ್ ಕೂಡ ಒಪ್ಪುವುದಿಲ್ಲ. ಸಾಮಾಜಿಕ ನ್ಯಾಯ, ಸಮುದಾಯದ ಜನಸಂಖ್ಯಾಬಲದ ಆಧಾರದ ಮೇಲೆ ಹೋದರೆ ಇದು ಸಾಧ್ಯವಾಗದು ಎಂದು ಗೊತ್ತಿರುವ ಸಿದ್ದರಾಮಯ್ಯನವರು ಪರ್ಯಾಯ ತಂತ್ರವೊಂದನ್ನು ರೂಪಿಸಿರುವುದರ ಪರಿಣಾಮವೇ ‘ನಮ್ಮ ಕಾಂಗ್ರೆಸ್’. ಬೆಂಗಳೂರು, ಕೊಪ್ಪಳ, ಚಿಕ್ಕಮಗಳೂರು, ಬೀದರ್, ಬಾಗಲಕೋಟ, ತುಮಕೂರು, ಹಾವೇರಿ, ಬಳ್ಳಾರಿ ಸೇರಿದಂತೆ ಕುರುಬ ಸಮುದಾಯದ ಮತಗಳು ನಿರ್ಣಾಯಕ ಆಗಿರುವ ನಾನಾ ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಲ್ಲಿ ‘ನಮ್ಮ ಕಾಂಗ್ರೆಸ್’ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು. ಅಲ್ಲೆಲ್ಲ  ‘ಮ್ಯಾಚ್ ಫಿಕ್ಸಿಂಗ್’ ಮಾಡುವುದು ಈ ತಂತ್ರದ ಒಳಮರ್ಮ.

ಆರಂಭದಲ್ಲಿ ಸಿದ್ದರಾಮಯ್ಯನವರ ಜತೆ ಗುರುತಿಸಿಕೊಂಡಿದ್ದ ವರ್ತೂರು ಪ್ರಕಾಶ್ ನಂತರ ಉಲ್ಟಾ ಹೊಡೆದಿದ್ದರು. ಅತಿರೇಕದ ವರ್ತನೆಗೆ ಹೆಸರಾದ ವರ್ತೂರು ಎರಡು-ಮೂರು ಬಾರಿ ಸಿದ್ದರಾಮಯ್ಯ ಅವರನ್ನು ಕಟುಶಬ್ಧಗಳಿಂದ ಜರೆದಿದ್ದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ. ಸಿದ್ದರಾಮಯ್ಯ ಆಪ್ತವಲಯದಲ್ಲಿರುವ ಕುರುಬ ಸಮುದಾಯದ ಚಿಂತಕ ಪಡೆ ಇಬ್ಬರ ನಡುವೆ ಇದ್ದ ವ್ಯತ್ಯಾಸವನ್ನು ಕಿತ್ತುಹಾಕಿ, ಹೊಸ ಯೋಜನೆಯನ್ನು ಬಿತ್ತಿದೆ. ತತ್ಪರಿಣಾಮ ‘ನಮ್ಮ ಕಾಂಗ್ರೆಸ್’ ಅಸ್ತಿತ್ವಕ್ಕೆ ಬಂದಿದೆ. ವರ್ತೂರು ಪ್ರಕಾಶ್ ಅವರು ಮುಂದೆ ನಾನೇ ಸಿಎಂ ಆಗಲು ಹೊಸ ಪಕ್ಷ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಪಕ್ಷ ಅಧಿಕಾರಕ್ಕೆ ಬರೋದು, ಅವರು ಸಿಎಂ ಆಗೋದು ಸೂರ್ಯನ ದಿಕ್ಕು ಬದಲಾದರೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ಹಿಂದೆ 2008 ರಲ್ಲಿ ಪಕ್ಷೇತರ ಸದಸ್ಯರಾಗಿದ್ದಾಗ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಲು ಸಿಎಂ ಪದವಿ ತಮಗೇ ಕೊಡಬೇಕೆಂದು ಕೇಳಿ ಯಡಿಯೂರಪ್ಪ ಅವರಿಂದ ಬಾಯಿಗೆ ಬಂದಂತೆ ಬೈಸಿಕೊಂಡಿದ್ದರು. ಅವರ ರಾಜಕೀಯ ಗಾಂಭಿರ್ಯ ಇಷ್ಟಕ್ಕೇ ಸೀಮಿತ. ಈಗ ಅವರು ಹೇಳುತ್ತಿರುವ ಸಿಎಂ ಆಗುವ ಮಾತಿಗೂ ಇರುವ ಕಿಮ್ಮತ್ತೂ ಅಷ್ಟೇ. ಆದರೆ ಅವರು ಹಾಗೆ ಹೇಳುತ್ತಿರುವುದರ ಹಿಂದಿರುವುದು ಯಾರಿಗೂ ಅನುಮಾನ ಬರಬಾರದು ಎಂಬ ಮುನ್ನೆಚ್ಚರಿಕೆ.

ಸಿದ್ದರಾಮಯ್ಯ, ಅವರ ಆಪ್ತ ವಲಯ ಹೀಗೆ ಯೋಚನೆ ಮತ್ತು ಯೋಜನೆ ಮಾಡುವುದಕ್ಕೆ ಕಾರಣಗಳಿವೆ. ಕಳೆದ ಬಾರಿ ಇದೇ ಕೊನೇ ಚುನಾವಣೆ ಎಂದು ಅನೌನ್ಸ್‌ ಮಾಡಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪಟ್ಟದ ಸವಿಯುಂಡ ನಂತರ ತಮ್ಮ ಘೋಷಣೆಯನ್ನು ಹೆಗಲ ಮೇಲಿನ ಟವೆಲ್ ರೀತಿ ಬದಲಿಸಿದ್ದಾರೆ. ‘ಮತ್ತೊಮ್ಮೆ ಸಿದ್ದರಾಮಯ್ಯ’ ಘೋಷವಾಕ್ಯ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಕಾಂಗ್ರೆಸ್ ಅನ್ಯ ಮುಖಂಡರ ಹೃದಯ ಚಿಂದಿ ಮಾಡಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆ ಗೆಲವಿನ ನಂತರ ಬುಗ್ಗೆಯೊಡೆದ ವಿಶ್ವಾಸ ಅವರನ್ನು ಮತ್ತೊಮ್ಮೆ ಸಿಎಂ ಆಗುವ ಬಯಕೆಯಲ್ಲಿ ಮಿಂದೆಬ್ಬಿಸಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತಮ್ಮ ನೇತೃತ್ವದಲ್ಲೇ ಮುಂದಿನ ಚುನಾವಣೆ, ತಾವೇ ಮುಂದಿನ ಸಿಎಂ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಇಂಥ ಹೇಳಿಕೆಗಳಿಗೆ ರಾಜ್ಯ ಕಾಂಗ್ರೆಸ್ ಇತ್ತೀಚಿನ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪರೋಕ್ಷ ಕಡಿವಾಣ ಹಾಕಲು ಮಾಡಿದ ಪ್ರಯತ್ನಗಳು ಸಿದ್ದರಾಮಯ್ಯನವರ ಹಠಮಾರಿತನದ ಮುಂದೆ ಮಗುಚಿ ಬಿದ್ದಿವೆ. ಅವರು ಕಡಿವಾಣ ಹಾಕಲು ಯತ್ನಿಸಿದಂತೆಲ್ಲ ಸಿದ್ದರಾಮಯ್ಯ ಹೇಳಿಕೆಗಳು ಗೋಡೆಗೆ ಬಡಿದ ಚೆಂಡಿನಂತೆ ಮತ್ತೆ, ಮತ್ತೆ ಪುಟಿದು ಬಂದಿವೆ. ಕಾಂಗ್ರೆಸ್ ದಿಲ್ಲಿ ಪಾಳೆಯದಲ್ಲಿ ಕಟ್ಟುನಿಟ್ಟಿನ ನಾಯಕ ಎಂದೇ ಹೆಸರು ಮಾಡಿರುವ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಹಂತದ ಹಿಡಿತ ಸಾಧಿಸಿದ್ದುದು ಸುಳ್ಳಲ್ಲ. ಆದರೆ ಕೇರಳ ಸೋಲಾರ್ ಹಗರಣ ಮತ್ತು ಲೈಂಗಿಕ ಪ್ರಕರಣದಲ್ಲಿ ಸಿಕ್ಕಿ ನರಳುತ್ತಿರುವ ವೇಣುಗೋಪಾಲ್ ಅವರ  ಮೊದಲಿನ ಖದರು ಈಗಲೂ ಉಳಿದಿರುವ ಬಗ್ಗೆ ಅನುಮಾನಗಳಿವೆ. ಬೇರೆ ನಾಯಕರು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನೊಳಗಣ ಸಿದ್ದರಾಮಯ್ಯ ವಿರೋಧಿಗಳು ವೇಣುಗೋಪಾಲ್ ಬಗ್ಗೆ ‘ಸಮಯಸಾಧನೆ’ ಗೌರವ ಇಟ್ಟುಕೊಂಡಿರಬಹುದು. ಆದರೆ ಇದೇ ಮಾತನ್ನು ಸಿದ್ದರಾಮಯ್ಯ ಅವರಿಗೆ ಅನ್ವಯಿಸುವಂತಿಲ್ಲ. ಏನೂ ಇಲ್ಲದಿದ್ದಾಗಲೇ ವೇಣುಗೋಪಾಲ್ ಅವರನ್ನು ಕಣ್ಣಂಚಿನಲ್ಲೇ ಕಾಣುತ್ತಿದ್ದ ಸಿದ್ದರಾಮಯ್ಯನವರು ಇದೀಗ ಹಗರಣ ಉರುಳಿಗೆ ಸಿಕ್ಕಿದ ಮೇಲೆ ಇನ್ಯಾವ ಪರಿ ನೋಡಬಹುದು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹೀಗಾಗಿ ‘ಮತ್ತೊಮ್ಮೆ ಸಿದ್ದರಾಮಯ್ಯ’ ಅಭಿಯಾನ ಅನಾಯಾಸವಾಗಿ ಸಾಗಿದೆ.

ಇಷ್ಟರ ಮಧ್ಯೆ ಬಿಜೆಪಿಯ ಪರಿವರ್ತನಾ ಯಾತ್ರೆ, ಜೆಡಿಎಸ್‌ನ ವಿಕಾಸಯಾತ್ರೆಗೆ ಪರ್ಯಾಯವಾಗಿ ಸಿದ್ದರಾಮಯ್ಯನರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಜನಾಶೀರ್ವಾದ ಯಾತ್ರೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ, ಸಿಎಂ ಗಾದಿ ಉತ್ಕಟ ಆಕಾಂಕ್ಷಿ ಡಾ. ಜಿ. ಪರಮೇಶ್ವರ ಭಾಗಶಃ ವಿರೋಧ ವ್ಯಕ್ತಪಡಿಸಿದ್ದಾರೆ. ‘ಸರಕಾರದಿಂದ ಯಾತ್ರೆ ಮಾಡಿದರೆ ಪಾಲ್ಗೊಳ್ಳುವುದಿಲ್ಲ, ಪಕ್ಷದಿಂದ ಮಾಡಿದರೆ ಮಾತ್ರ ಪಾಲ್ಗೊಳ್ಳುವೆ’ ಎಂದು ಷರತ್ತು ಹಾಕಿದ್ದಾರೆ. ಕರ್ನಾಟಕದಲ್ಲಿರುವ ಸರಕಾರ ಕೂಡ ಕಾಂಗ್ರೆಸ್ಸಿನದೇ. ಅದೇನೂ ಬಿಜೆಪಿಯದೂ ಅಲ್ಲ, ಜೆಡಿಎಸ್‌ದೂ ಅಲ್ಲ. ಸರಕಾರ ಮತ್ತು ಪಕ್ಷ ಎರಡೂ ಬೇರೆ, ಬೇರೆ ಇಲ್ಲ. ಹೀಗಿರುವಾಗ ಪರಮೇಶ್ವರ ಉಲ್ಟಾ ಹೊಡೆದಿರುವುದರ ಹಿಂದೆ ‘ಮತ್ತೊಮ್ಮೆ ಸಿದ್ದರಾಮಯ್ಯ’ ಘೋಷವಾಕ್ಯಕ್ಕೆ ಪರಮ ವಿರೋಧವೇ ಹೊರತು ಅಲ್ಲಿ ಪಕ್ಷ, ಸರಕಾರ ಎಂಬುದೆಲ್ಲ ಕೇವಲ ನೆಪಮಾತ್ರ. ಜತೆಗೆ ತಮ್ಮ ಹಿಂಬಾಲಕರೊಬ್ಬರ ಮೂಲಕ ಅವರೂ ‘ಡಾ. ಜಿ. ಪರಮೇಶ್ವರ ದಲಿತ ಸಿಎಂ 2018’ ಎಂಬ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿಸಿದ್ದಾರೆ. ಹೇಗಾದರೂ ಮಾಡಿ ಮುಂದಿನ ಬಾರಿ ತಾವೇ ಸಿಎಂ ಆಗಬೇಕೆಂಬ ಅವರ ಬಯಕೆ ಪ್ರಸ್ತುತಪಡುತ್ತಿರುವ ನಾನಾ ಮಾರ್ಗಗಳಲ್ಲಿ ಇದೂ ಒಂದು.

ಇದರ ಜತೆಗೆ ನಾಲ್ಕೈದು ದಶಕಗಳಿಂದ ಪಕ್ಷ ನಿಷ್ಠರಾಗಿದ್ದು, ಅದೇ ಕಾರಣಕ್ಕೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಸ್ಥಾನದವರೆಗೂ ಬೆಳೆದಿರುವ ಕರ್ನಾಟಕ ನಾಯಕ ಮಲ್ಲಿಕಾರ್ಜುನ ಖರ್ಗೆ ಸಿಎಂ ಗಾದಿಗೆ ಪ್ರಬಲ ಆಕಾಂಕ್ಷಿ. ಎರಡು ದಶಕದಿಂದ ಸಿಎಂ ಸ್ಥಾನದ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಖರ್ಗೆ ಅವರ ಬಯಕೆಯನ್ನು ಅವರ ವಯೋಮಾನ ದುಪ್ಪಟ್ಟು ಮಾಡಿಟ್ಟಿದೆ. ಹೇಗಾದರೂ ಮಾಡಿ ಮುಂದಿನ ಬಾರಿಯಾದರೂ ಸಿಎಂ ಆಗಬೇಕೆಂಬ ಆಸೆ ಅವರದೂ ಕೂಡ.

ಈ ಮಧ್ಯೆ, ಲಿಂಗಾಯತ ಸ್ವತಂತ್ರ್ಯ ಧರ್ಮ ಚಳವಳಿ ಮೂಲಕ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅದೇ ಕಾಲಕ್ಕೆ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಸ್ಥಾನದ ಅಭ್ಯರ್ಥಿಯಾಗಿಯೂ ಬಿಂಬಿತರಾಗುತ್ತಿದ್ದಾರೆ. ಈವರೆಗೂ ಬಿಜೆಪಿ ಜತೆಗಿದ್ದ ಲಿಂಗಾಯತ ಸಮುದಾಯ ಸ್ವತಂತ್ರ್ಯ ಧರ್ಮ ವಿಚಾರದಲ್ಲಿ ಇಬ್ಭಾಗವಾಗಿರುವುದು ಸುಳ್ಳಲ್ಲ. ಅದರ ಫಲದ ಪಾಲು ಚಳವಳಿ ನೇತೃತ್ವ ವಹಿಸಿರುವವರಲ್ಲಿ ಪ್ರಮುಖರೆನಿಸಿದ ಎಂ.ಬಿ. ಪಾಟೀಲ್ ಮತ್ತು ಅವರು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ಗೂ ದಕ್ಕುತ್ತದೆ. ಇದು ಪಾಟೀಲ್ ಅವರನ್ನು ಸಿಎಂ ಅಭ್ಯರ್ಥಿ ಸ್ಥಾನದ ಹತ್ತಿರಕ್ಕೆ ತಂದು ನಿಲ್ಲಿಸಿದೆ.

ಅದೇ ರೀತಿ ಮತ್ತೊಂದು ಪ್ರಬಲ ಸಮುದಾಯ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಕೂಡ ಸಿಎಂ ಗಾದಿಗೆ ಪ್ರಬಲ ಆಕಾಂಕ್ಷಿ. ಹಾಗೆಂದೆ ಅವರನ್ನು ಆರಂಭದಲ್ಲಿ ಸಿದ್ದರಾಮಯ್ಯ ಸಂಪುಟದಿಂದ ಹೊರಗಿಡಲಾಗಿತ್ತು. ಒಂದೂವರೇ ವರ್ಷ ನಂತರ ಸಂಪುಟ ಸೇರಿದ ಶಿವಕುಮಾರ್ ಅವರನ್ನು ಸಿಎಂ ಸ್ಥಾನಕ್ಕೆ ಚಿಗಿತು, ಬಲಿಯದಂತೆ ಮಾಡಲು ಕೋರ್ಟ್ ಕೇಸುಗಳಿಂದ ಕಟ್ಟಿಹಾಕಲಾಗಿತ್ತು. ಇತ್ತೀಚೆಗೆ ಶಿವಕುಮಾರ್ ಮತ್ತು ಬಳಗದ ಮನೆ, ಕಚೇರಿಗಳ ನಡೆದ ಆದಾಯ ತೆರಿಗೆ ದಾಳಿ ಮೇಲ್ನೋಟಕ್ಕೆ ಅಲ್ಲದಿದ್ದರೂ ಅಂತರಂಗದಲ್ಲಿ ಅವರನ್ನು ವಿಚಲಿತರನ್ನಾಗಿ ಮಾಡಿರುವುದು ಸುಳ್ಳಲ್ಲ. ಈ ತೆರಿಗೆ ದಾಳಿ ಹಿಂದೆ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಸಂರಕ್ಷಿಸಿಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಪ್ರತೀಕಾರ ತೀರಿಸಿಕೊಂಡಿದೆ ಎಂಬ ಆರೋಪವಿದೆ. ಅದರ ಜತೆಜತೆಗೆ ಇದರಲ್ಲಿ ರಾಜ್ಯದ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೂ ಕೈಜೋಡಿಸಿದ್ದಾರೆ ಎಂಬ ಮಾತುಗಳೂ ಇವೆ. ಇಷ್ಟರ ಮಧ್ಯೆಯೂ ಚುನಾವಣೆ ನಂತರ ಶಿವಕುಮಾರ್ ಸಿಎಂ ಸ್ಥಾನಾಕಾಂಕ್ಷಿ ಆಗಬಹುದು ಎಂಬ ಅನುಮಾನಗಳೂ ಇವೆ.

ಇವು ಕಾಂಗ್ರೆಸ್ಸಿನಲ್ಲಿ ಸಿಎಂ ಸ್ಥಾನಕ್ಕೆ ಮೇಲ್ನೋಟಕ್ಕೆ ಕಾಣಬರುವ ಹೆಸರುಗಳು. ಆಕಾಂಕ್ಷೆ ಎಂಬುದು ಯಾರಪ್ಪನ ಸೊತ್ತು ಅಲ್ಲದಿರುವುದರಿಂದ ಬೇರೆಯವರಿಗೂ ಬಯಕೆ ಇರಬಹುದು. ಆದರೆ ಈ ಬಯಕೆಗಳ ಒಟ್ಟು ಸಮ್ಮಿಶ್ರ ಸಾರ ಸಿದ್ದರಾಮಯ್ಯ ಅವರನ್ನು ಎಚ್ಚರ ಸ್ಥಿತಿಯಲ್ಲಿಟ್ಟಿದೆ. ಮತ್ತೆ ಸಿಎಂ ಆಗಬೇಕೆಂಬ ತಮ್ಮ ಕನಸಿಗೆ ಎದುರಾಗಬಹುದಾದ ತೊಡಕುಗಳಿಗೆ ಪ್ರತಿಯಾಗಿ ರಣತಂತ್ರ ಹೆಣೆಯಲು ಪ್ರೇರೇಪಿಸಿದೆ. ಆ ಪ್ರೇರೇಪಣೆಯ ಫಲವೇ ಕುರುಬ ಸಮುದಾಯದ ರಣಪಡೆ ಅರ್ಥಾತ್ ‘ನಮ್ಮ ಕಾಂಗ್ರೆಸ್’!

ಲಗೋರಿ: ಗಂಧ ಅಥವಾ ದುರ್ಗಂಧದ ವಾಸನೆಯನ್ನು ಮುಚ್ಚಿಡಲು ಸಾಧ್ಯವೇ?

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply