ಐಸಿಜೆಗೆ ಭಾರತದ ದಲ್ವೀರ್ ಪುನರಾಯ್ಕೆ, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯಕ್ಕೆ ದಿಗಿಲುಗೊಂಡ ಬಲಿಷ್ಠ ರಾಷ್ಟ್ರಗಳು

ಡಿಜಿಟಲ್ ಕನ್ನಡ ಟೀಮ್:

ದ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತದ ಅಭ್ಯರ್ಥಿ ದಲ್ವೀರ್ ಭಂಡಾರಿ ಪುನರಾಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಬ್ರಿಟನಿನ್ನ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ಅವರು ಹಿಂದೆ ಸರಿಯುತ್ತಿದ್ದಂತೆ ದಲ್ವೀರ್ ಮತ್ತೊಮ್ಮೆ ಅಂತಾರಾಷ್ಟ್ರೀಯ ನ್ಯಾಯಾಲಯದ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ.

ದಲ್ವೀರ್ ಅವರ ಈ ಪುನರಾಯ್ಕೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಯಶಸ್ಸಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದೊಂದು ಭಾರತದ ರಾಜತಾಂತ್ರಿಕ ಸಾಮರ್ಥ್ಯಕ್ಕೆ ಸಿಕ್ಕ ಮತ್ತೊಂದು ಯಶಸ್ಸು ಎಂದು ಬಣ್ಣಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದ್ದು, ದಲ್ವೀರ್ ಭಂಡಾರಿ ಅವರ ಈ ಪುನರಾಯ್ಕೆ ಭಾರತ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಬೆಳವಣಿಗೆ ಭಾರತದ ಪಾಲಿಗೆ ಎಷ್ಟು ಮಹತ್ವವಾಗಿದೆ ಎಂಬುದನ್ನು ನೋಡೋಣ ಬನ್ನಿ…

ಈ ಅಂತಾರಾಷ್ಟ್ರೀಯ ನ್ಯಾಯಾಲಯ 1945ರಲ್ಲಿ ಸ್ಥಾಪನೆಯಾಯಿತು. ಅಂದಿನಿಂದ ಈವರೆಗೂ ಈ ನ್ಯಾಯಾಲಯದಲ್ಲಿ ಬ್ರಿಟನ್ ನ್ಯಾಯಾಧೀಶರೊಬ್ಬರು ಸ್ಥಾನ ಪಡೆಯುತ್ತಲೇ ಬಂದಿದ್ದರು. ಆದರೆ ಈಗ ಭಾರತ ತನ್ನ ರಾಜತಾಂತ್ರಿಕತೆಯನ್ನು ಬಳಸಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಶಕ್ತಿಶಾಲಿ ವಿಭಾಗದಲ್ಲಿ ಬ್ರಿಟನ್ ಪ್ರತಿನಿಧಿಗೆ ಜಾಗವಿಲ್ಲದಂತೆ ಮಾಡಿದೆ. ಅಂದು ಬ್ರಿಟೀಷರಿಂದಲೇ ಆಳಿಸಿಕೊಳ್ಳುತ್ತಿದ್ದ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬ್ರಿಟನ್ನಿಗೆ ತೊಡೆ ತಟ್ಟಿ ನಿಂತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ದಲ್ವೀರ್ ಹಾಗೂ ಗ್ರೀನ್ ವುಡ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಭದ್ರತಾ ಸಮಿತಿಯ 15 ಮತಗಳು ಗ್ರೀನ್ ವುಡ್ ಪಾಲಾಗಿತ್ತು. ಇದೇ ವೇಳೆ ವಿಶ್ವಸಂಸ್ಥೆ ಪ್ರಧಾನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ದಲ್ವೀರ್ 193 ಮತಗಳ ಪೈಕಿ 183 ಮತಗಳನ್ನು ಪಡೆದುಕೊಂಡಿದ್ದರು. ಗ್ರೀನ್ ವುಡ್ ಬೆಂಬಲಕ್ಕೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಇತರೆ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಫ್ರಾನ್ಸ್ ಹಾಗೂ ಚೀನಾದ ಬೆಂಬಲವೂ ಇತ್ತು. ಆದರೆ ಭಾರತದಿಂದ ಪ್ರಬಲ ಸ್ಪರ್ಧೆಯನ್ನು ಕಂಡ ಬ್ರಿಟನ್ ತನ್ನ ಅಭ್ಯರ್ಥಿಯ ಸ್ಪರ್ಧೆಯನ್ನು ಹಿಂಪಡೆಯಿತು. ನಂತರ ಭಾರತವು ಬ್ರಿಟನ್ನಿನ ಸ್ನೇಹಿತ ರಾಷ್ಟ್ರ. ಭಾರತದ ಅಭ್ಯರ್ಥಿ ಗೆಲ್ಲುತ್ತಿರುವುದಕ್ಕೆ ಖುಷಿ ಇದೆ ಎಂದು ಬ್ರಿಟನ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ದಲ್ವೀರ್ ಸಿಂಗ್ ಅವರ ಪುನರಾಯ್ಕೆಯಲ್ಲಿ ಭಾರತದ ರಾಜತಾಂತ್ರಿಕತೆ ದೊಡ್ಡ ಮಟ್ಟದ ಕೆಲಸ ಮಾಡಿದೆ. ಭಾರತ ತನ್ನ ರಾಜತಾಂತ್ರಿಕತೆಯ ಮೂಲಕ ಇಂದು ಬ್ರಿಟನ್ ಅನ್ನು ಹೇಗೆ ಮಣಿಸಿದೆಯೋ ಅದೇ ರೀತಿ ನಾಳೆ ನಮ್ಮನ್ನು ಮಣಿಸಬಹುದು ಎಂಬ ಆತಂಕ ಅಮೆರಿಕ, ಚೀನಾ, ರಷ್ಯಾ ಹಾಗೂ ಫ್ರಾನ್ಸ್ ನಂತಹ ಪ್ರಬಲ ದೇಶಗಳನ್ನು ಕಾಡಲಾರಂಭಿಸಿದೆ.

ಇನ್ನು ಭಾನುವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಡೆದ 11 ಸುತ್ತಿನ ಚುನಾವಣೆಯಲ್ಲಿ ಭಂಡಾರಿ ಸುಮಾರು ಮೂರನೇ ಎರಡು ಭಾಗದಷ್ಟು ಮತಗಳನ್ನು ಸೆಳೆದುಕೊಂಡಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಮತದಾನದಲ್ಲಿ ಭಾರತದ ಸ್ಪರ್ಧಿಗೆ ಇಷ್ಟು ದೊಡ್ಡ ಮಟ್ಟದ ಬೆಂಬಲ ಸಿಕ್ಕಿರುವುದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಬದಲಾವಣೆಯ ಸೂಚನೆಯೂ ಆಗಿದೆ. ಇದು ಸಹಜವಾಗಿಯೇ ವಿಶ್ವದ ಪ್ರಬಲ ರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿದೆ. ಇನ್ನು ಈ ಫಲಿತಾಂಶ ಭಾರತ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಶಾಶ್ವತ ಸದಸ್ಯತ್ವ ಪಡೆಯುವ ಪ್ರಯತ್ನಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಜಾಗತಿಕ ಮಟ್ಟದಲ್ಲಿ ಭಾರತ ಪ್ರಬಲವಾಗಿ ಬೆಳೆಯುವಂತೆ ಮಾಡುತ್ತಿದೆ ಎಂಬುದಕ್ಕೆ ದಲ್ವೀರ್ ಭಂಡಾರಿ ಅವರ ಪುನರಾಯ್ಕೆ ತಾಜಾ ಉದಾಹರಣೆಯಾಗಿದೆ.

Leave a Reply