ಸದನದಲ್ಲಿ ಮದ್ಯದ ಗದ್ದಲ, ಸಾರಾಯಿ ನಿಷೇಧದಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಸಾರಾಯಿ ನಿಷೇಧ ಕಾಯ್ದೆ ಜಾರಿ ಮಾಡಿದ್ದನ್ನು ಮಹಿಳೆಯರಿಂದ ಹಿಡಿದು ಬಹುತೇಕರು ಸ್ವಾಗತಿಸಿದ್ದಾರೆ. ಆದರೆ ಈ ಸಾರಾಯಿ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಯಂತೆ. ಹೀಗೆ ಹೇಳಿದ್ದು ಬೇರಾರು ಅಲ್ಲ, ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ.

ಹೌದು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಮದ್ಯಪಾನ ನಿಷೇಧದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿ.ಟಿ ರವಿ ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿಯಂದಲೇ ಉತ್ತರಿಸಿದರು.

‘ಬಿಜೆಪಿ ಅವರಿಗೆ ಒಳ್ಳೆಯ ಬುದ್ಧಿ ಬಂದಿದೆ. ಅದಕ್ಕೆ ಮದ್ಯಪಾನ ಮಾಡಿ ಅಂತಿದ್ದಾರೆ’ ಎಂದು ಮಾತು ಆರಂಭಿಸಿದರು. ಆಗ ಮಧ್ಯಪ್ರವೇಶಿಸಿದ ಸಿ.ಟಿ ರವಿ ‘ರಾಜ್ಯದಲ್ಲಿ ಸಾರಾಯಿ ನಿಷೇಧ ಮಾಡಿದ್ದು ನಾವು’ ಎಂದರು. ನಂತರ ಮಾತು ಮುಂದುವರಿಸಿದ ಸಿದ್ರಾಮಯ್ಯ ಹೇಳಿದಿಷ್ಟು…

‘ನೀವು ನಿಷೇಧಿಸಿದ್ದು ಸಾರಾಯಿಯನ್ನು, ಮದ್ಯಪಾನವನ್ನಲ್ಲ. ಸಾರಾಯಿ ನಿಷೇಧದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಕೇವಲ ₹12ಕ್ಕೆ ಒಂದು ಪ್ಯಾಕೆಟ್ ಸಾರಾಯಿ ಕುಡಿಯುತ್ತಿದ್ದವರಿಗೆ ಈಗ ಒಂದು ಕ್ವಾಟರ್ ಗೆ ₹ 70 ಕೊಡಬೇಕಾಗಿ ಬಂದಿದೆ. ನೀವು ಮಾಡಿರೋದು ಇದು. ನಿಮ್ಮ ನಿರ್ಧಾರದಿಂದ ಬಡವರಿಗೆ ಬಹಳ ಅನುಕೂಲವಾಗಿದೆ.

ರಾಜ್ಯದಲ್ಲಿ ಮದ್ಯಪಾನ ನಿಷೇಧ ಸಾಧ್ಯವಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದ್ಯ ನಿಷೇಧ ಮಾಡಲು ಹೇಳಿ ನಂತರ ನನ್ನ ಬಳಿ ಬಂದು ಮದ್ಯಪಾನ ನಿಷೇಧಿಸಲು ಹೇಳಿ. ಯಡಿಯೂರಪ್ಪನವರು ಹಾಗೂ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಮದ್ಯಪಾನ ನಿಷೇಧ ಮಾಡಲಿಲ್ಲ. ಬಿಜೆಪಿ ಅವರಿಗೆ ಸಂಸ್ಕೃತಿ ಇಲ್ಲ, ಮಾನ ಮರ್ಯಾದೆ ಇಲ್ಲ.’

ಹೀಗೆ ಮುಖ್ಯಮಂತ್ರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ದುರಹಂಕಾರಿ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಎಂದು ಕೂಗಿದರು. ಸದನದಲ್ಲಿ ಗದ್ದಲ ಸೃಷ್ಟಿಯಾದ ಪರಿಣಾಮ ಕಲಾಪವನ್ನು ಮುಂದೂಡಲಾಯಿತು.

Leave a Reply