‘ಸಿಎಂ ಸ್ಥಾನ ತಪ್ಪಿಸಿದ್ರು’ ಎಂಬ ಸಿದ್ರಾಮಯ್ಯ ಆರೋಪಕ್ಕೆ ದೇವೇಗೌಡ್ರ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

‘ನಾನು 1996ರಲ್ಲೇ ಮುಖ್ಯಮಂತ್ರಿಯಾಗಬೇಕಿತ್ತು. ಆಗ ನಾನು ಮುಖ್ಯಮಂತ್ರಿಯಾಗುವುದನ್ನು ದೇವೇಗೌಡ್ರು ತಪ್ಪಿಸಿದ್ರು’ ಎಂಬ ಮುಖ್ಯಮಂತ್ರಿ ಸಿದ್ದಮಯ್ಯನವರ ಆರೋಪಕ್ಕೆ ಮಾಜಿ ಪ್ರಧಾನಿಗಳು ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರ ಈ ಆರೋಪಕ್ಕೆ ಕೆಂಡಾಮಂಡಲವಾಗಿರುವ ದೇವೇಗೌಡರು, ಅಧಿಕಾರ ಹಾಗೂ ಹಣ ಬಲದಿಂದ ಸಿದ್ದರಾಮಯ್ಯನವರಿಗೆ ಅಹಂಕಾರ ಬಂದಿದೆ ಎಂದಿದ್ದಾರೆ. ಸಿದ್ದರಾಮಯ್ಯನವರ ಆರೋಪ, ಮಹದಾಯಿ ವಿಚಾರವಾಗಿ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡರು ಹೇಳಿದಿಷ್ಟು…

’96ರಲ್ಲೇ ತಾನು ಸಿಎಂ ಆಗುತ್ತಿದ್ದೆ. ಅದನ್ನು ದೇವೇಗೌಡರು ತಪ್ಪಿಸಿದ್ರು ಎಂದು ಸಿದ್ರಾಮಯ್ಯನವರು ಹೇಳಿದ್ದಾರೆ. ನಾನು ಯಾವಾಗ ಯಾರಿಗೆ ಏನೇನು ಮಾಡಿದ್ದೇನೆ ಎಂದು ನನಗೆ ಗೊತ್ತಿದೆ. ಈಗ ಅದನ್ನೆಲ್ಲಾ ಹೇಳುವುದಿಲ್ಲ. ರಾಮಕೃಷ್ಣ ಹೆಗಡೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು ನಾನು. ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆ ಅವರಷ್ಟು ದೊಡ್ಡ ನಾಯಕರೇನಲ್ಲ. ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆಸಿದ್ದು ಯಾರು ಎಂಬುದನ್ನು ತಿಳಿದುಕೊಳ್ಳಲಿ. ಅಂದು ಜೆ.ಹೆಚ್ ಪಟೇಲರು ನನ್ನ ವಿರುದ್ಧ ಸ್ಪರ್ಧೆ ಮಾಡ್ತೀಯಾ ಎಂದು ಕೇಳಿದ್ದರು.

ಸಿದ್ದರಾಮಯ್ಯನವರಿಗೆ ಅಧಿಕಾರ, ಕೈ ತುಂಬಾ ದುಡ್ಡಿದೆ. ಹೀಗಾಗಿ ಅಹಂಕಾರದಿಂದ ಮೆರೆಯುತ್ತಿದ್ದಾರೆ. ಒಂದಲ್ಲಾ ಒಂದು ದಿನ ಅವರಿಗೆ ಅರಿವಾಗುತ್ತದೆ. ದೇವೇಗೌಡನಿಗೆ ಜನರೇ ಶಕ್ತಿ.

ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯವಿದೆ. ಇವರಲ್ಲಿ ಐಕ್ಯತೆ ಮೂಡಿಸಲು ಇಲ್ಲಿಗೆ ಬಂದಿದ್ದೇನೆ. ಮುಂದಿನ ತಿಂಗಳು ಮತ್ತೆ ಬರುತ್ತೇನೆ. ರಾಜ್ಯದಲ್ಲಿ ಕುಮಾರಸ್ವಾಮಿಗೆ ಅದಿಕಾರ ಕೊಡಬೇಕು ಎಂಬುದು ಜನರ ಭಾವನೆಯಾಗಿದೆ. ಅವರ ಅಧಿಕಾರ ಅವಧಿ ಹಾಗೂ ನಂತರ 10 ವರ್ಷಗಳ ಕಾಲ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರವನ್ನು ಕಂಡಿರುವ ಜನ ಈ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ನೇತೃತ್ವದಲ್ಲಿ ಕುಮಾರ ಪರ್ವ ಆರಂಭವಾಗಿದೆ. ರಾಷ್ಟ್ರೀಯ ಪಕ್ಷಗಳು ಇನ್ನು ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಅವರಿಗೆ ಪಕ್ಷದ ಮುಖಂಡರ ಜತೆಗೆ ಚರ್ಚೆ ಮಾಡಿ ಪಟ್ಟಿ ಬಿಡುಗಡೆ ಮಾಡುವಂತೆ ಹೇಳಿದ್ದೇನೆ.

ಮಹದಾಯಿ ವಿಚಾರವಾಗಿ ಮೋದಿ ಅವರಿಗೆ ಕೈ ಮುಗಿದು ಕೇಳಿದ್ರು ಏನೂ ಮಾತನಾಡಲಿಲ್ಲ. ಯಡಿಯೂರಪ್ಪನವರು ಈ ವಿವಾದ ಬಗೆಹರಿಸಿದ್ರೆ ಅವರಿಗೆ ಅನಂತ ಧನ್ಯವಾದ ಹೇಳುತ್ತೇನೆ.’

Leave a Reply