ಬಗೆಹರಿಯುತ್ತಿಲ್ಲ ಐಪಿಎಲ್ ಆಟಗಾರರ ಉಳಿಕೆ ಗೊಂದಲ, ಧೋನಿ ಆಗಮನ ಕಾಯುತ್ತಿದ್ದ ಚೆನ್ನೈ ಅಭಿಮಾನಿಗಳಲ್ಲಿ ಆತಂಕ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ಐಪಿಎಲ್ ಆವೃತ್ತಿಗೆ ಇನ್ನು ಐದು ತಿಂಗಳು ಬಾಕಿ ಇದೆ. ಈಗಾಗಲೇ 10 ಆವೃತ್ತಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಆವೃತ್ತಿಯಲ್ಲಿ ಎಲ್ಲಾ ಆಟಗಾರರನ್ನು ಹರಾಜಿಗೆ ಕಳುಹಿಸಬೇಕೆ ಅಥವಾ ತಂಡಗಳಿಗೆ ಕೆಲವು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆ ಎಂಬ ಗೊಂದಲ ಐಪಿಎಲ್ ಆಡಳಿತ ಮಂಡಳಿಗೆ ಕಂಗ್ಗಂಟಾಗಿದೆ.

ನಿನ್ನೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಆಟಗಾರರ ಉಳಿಕೆ ಗೆ ಸಂಬಂಧಿಸಿದಂತೆ ತೀವ್ರ ಚರ್ಚೆಯಾಗಿದೆ. ಎರಡು ವರ್ಷಗಳ ನಿಷೇಧದ ಶಿಕ್ಷೆ ಅನುಭವಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮತ್ತೆ ಟೂರ್ನಿಗೆ ಮರಳುತ್ತಿವೆ. ಈ ಹಂತದಲ್ಲಿ ಸಿಎಸ್ ಕೆ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಮರಳುವುದನ್ನು ಕಾದು ಕುಳಿತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರಲ್ಲಿ ಆತಂಕ ಮೂಡುವಂತಹ ಬೆಳವಣಿಗೆಗಳು ನಡೆಯುತ್ತಿವೆ.

ಕಾರಣ, ಮುಂದಿನ ಐಪಿಎಲ್ ಆವೃತ್ತಿಗೆ ಎಲ್ಲಾ ಆಟಗಾರರು ಹರಾಜಿಗೆ ಹೋಗಬೇಕು. ಯಾವುದೇ ತಂಡ ಯಾವುದೇ ಆಟಗಾರರನ್ನು ಉಳಿಸಿಕೊಳ್ಳುವಂತಿಲ್ಲ ಎಂಬುದು ಕೆಲವು ಫ್ರಾಂಚೈಸಿಗಳ ಪಟ್ಟಾಗಿದೆ. ಉಳಿದ ಫ್ರಾಂಚೈಸಿಗಳು ಆಟಗಾರರ ಉಳಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟಿ ಹಿಡಿದಿದ್ದರೂ ಒಂದೊಂದು ತಂಡ ಇಂತಿಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಬೇಡಿಕೆ ಇಟ್ಟಿವೆ. ಹೀಗಾಗಿ ಆಟಗಾರರ ಉಳಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಐಪಿಎಲ್ ಆಡಳಿತ ಮಂಡಳಿಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ಸವಾಲಾಗಿದೆ.

ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆಟಗಾರರ ಉಳಿಸಿಕೊಳ್ಳುವಿಕೆಗೆ ಅವಕಾಶ ನೀಡಬಾರದು. ಈ ಅಕಾಶ ನೀಡಿದರೆ, ಮುಂದಿನ ಆವೃತ್ತಿಗಾಗಿ ನಡೆಸುವ ಮೆಘಾ ಹರಾಜು ಪ್ರಕ್ರಿಯೆ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂದು ವಾದಿಸುತ್ತಿವೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಳುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎನ್ನುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮೂರು ಅಥವಾ ಮೂರಕ್ಕಿಂತ ಹೆಚ್ಚು ಆಟಗಾರರ ಉಳಿಸಿಕೊಳ್ಳುವಿಕೆ ಪ್ರಸ್ತಾಪವನ್ನು ಮುಂದಿಟ್ಟರೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮೂವರು ಆಟಗಾರರ ಉಲಿಕೆಗೆ ಅವಕಾಶ ಮಾಡಿಕೊಡಬೇಕು ಎನ್ನುತ್ತಿದೆ.

ಮುಂಬೈ ಹಾಗೂ ಚೆನ್ನೈ ಕೇವಲ ಆಟಗಾರರ ಉಳಿಕೆಗಷ್ಟೇ ಬೇಡಿಕೆ ಇಟ್ಟಿಲ್ಲ ಅದರ ಜತೆಗೆ ರೈಟ್ ಟು ಮ್ಯಾಚ್ (ತಮ್ಮ ತಂಡದಲ್ಲಿದ್ದ ಆಟಗಾರರನ್ನು ಬೇರೆ ತಂಡ ಖರೀದಿಸಿದರೆ ಆ ತಂಡ ಬಿಡ್ ಮಾಡಿದ ಮೊತ್ತಕ್ಕೆ ತಾವೇ ಉಳಿಸಿಕೊಳ್ಳುವುದು) ಕಾರ್ಡ್ ಬಳಕೆಗೂ ಮನವಿ ಮಾಡಿದೆ. ಮುಂಬೈ 2 ಹಾಗೂ ಚೆನ್ನೈ 1 ರೈಟ್ ಟು ಮ್ಯಾಚ್ ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟಿವೆ.

ಮುಂಬೈ ಹಾಗೂ ಚೆನ್ನೈ ತಂಡಗಳ ಬೇಡಿಕೆಯನ್ನು ಒಪ್ಪಿದರೆ ಬಹುತೇಕ ಅರ್ಧ ತಂಡವನ್ನು ಉಳಿಸಿಕೊಂಡಂತೆಯೇ ಆಗಲಿದ್ದು, ಇದರಿಂದ ಮೆಘಾ ಹರಾಜು ನಡೆಸುವ ಐಪಿಎಲ್ ಆಡಳಿತ ಮಂಡಳಿಯ ಉದ್ದೇಶಕ್ಕೆ ಹಿನ್ನಡೆಯಾಗಲಿದೆ. ಇನ್ನು ಸಿಎಸ್ ಕೆ ತಂಡ ಪುಣೆ ಹಾಗೂ ಗುಜರಾತ್ ತಂಡಗಳಲ್ಲಿ ವಿಭಾಗವಾಗಿದ್ದ ಧೋನಿ, ರೈನಾ, ಜಡೇಜಾ, ಡುಪ್ಲೆಸಿಸ್ ಹಾಗೂ ಬ್ರಾವೊ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸುತ್ತಿವೆ.

ಹೀಗೆ ಆಟಗಾರರ ಉಳಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಐಪಿಎಲ್ ಫ್ರಾಂಚೈಸಿಗಳ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಧೋನಿಯ ಪುನರಾಗಮನದ ನಿರೀಕ್ಷೆಯಲ್ಲಿರುವ ಸಿಎಸ್ ಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಈ ಬಿಕ್ಕಟ್ಟನ್ನು ಐಪಿಎಲ್ ಆಡಳಿತ ಮಂಡಳಿ ಹೇಗೆ ಬಗೆಹರಿಸಲಿದೆ, ಮುಂದಿನ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಯಾರೆಲ್ಲಾ ಖ್ಯಾತನಾಮರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ.

ಇನ್ನು ಐಪಿಎಲ್ ಟೂರ್ನಿಯಲ್ಲಿ 10 ತಂಡಗಳಿಗೆ ಅವಕಾಶ ಮಾಡಿಕೊಟ್ಟು ಪುಣೆ ಹಾಗೂ ಗುಜರಾತ್ ತಂಡವನ್ನು ಉಳಿಸಿಕೊಳ್ಳುವ ಕುರಿತಾಗಿ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ ಸಲಹೆಯನ್ನು ಎಲ್ಲಾ ಫ್ರಾಂಚೈಸಿಗಳು ನಿರಾಕರಿಸಿದರು. ಇನ್ನು ಮುಂದಿನ ಟೂರ್ನಿಯಲ್ಲಿ 10 ತಂಡ ಆಡಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಐಪಿಎಲ್ ಪ್ರಧಾನ ಸಭೆಯಲ್ಲಿ ಚರ್ಚಿಸಲಾಗುವುದು. ಒಂದು ವೇಳೆ 10 ತಂಡಕ್ಕೆ ಅವಕಾಶ ಮಾಡಿಕೊಟ್ಟರೂ ಹೊಸ ಫ್ರಾಂಚೈಸಿ ಬಿಡ್ ನಡೆಸಲಾಗುವುದೇ ಹೊರತು ಈ ಎರಡು ತಂಡಗಳನ್ನು ಮುಂದುವರಿಸುವುದಿಲ್ಲ ಎಂದಿದ್ದಾರೆ ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ರಾಜೀವ್ ಶುಕ್ಲಾ.

Leave a Reply